ತಾಳದ ಕಲ್ಪನೆ
(✍— ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ)
ಇಡೀ ಜಗತ್ತಿನಲ್ಲಿ ರಾಗ-ತಾಳಗಳ ಕಲ್ಪನೆಯು ಇರುವುದು ಭಾರತೀಯ ಸಂಗೀತದಲ್ಲಿ ಮಾತ್ರ. ಅದು ಸಂಗೀತನೃತ್ಯಗಳಿಗೆ ಆಧಾರ. ತಲ್ ಧಾತುವಿಗೆ ಘಞ ಪ್ರತ್ಯಯವು ಸೇರುವುದರಿಂದ, ಎಂದರೆ ಮೊದಲನೆಯ ವರ್ಣದ ಮೇಲಿರುವ ಅಕಾರವು ವೃದ್ಧಿಯಾಗಿ ಆ ಎಂದಾಗುವುದರಿಂದ (ತ:ತಾ) ತಾಲ ಎಂಬ ರೂಪವು ಸಿದ್ಧಿಸುತ್ತದೆ. ಪ್ರತಿಷ್ಠಾನವನ್ನು ಉಂಟುಮಾಡು, ನೆಲೆಗೊಳಿಸು, ಅಡಿಪಾಯವನ್ನು ಕಟ್ಟು, ನಿಗದಿಗೊಳಿಸು ಎಂದು ಮುಂತಾಗಿ ಅಧಿಕರಣಾರ್ಥದಲ್ಲಿ (ಆಧಾರ) ತಾಲವು ಪಠಿತವಾಗಿದೆ. ತಲವೆಂದರೆ ತಳ, ಗೀತವಾದ್ಯನೃತ್ತಗಳು ಇದರ ಮೇಲೆಯೇ ನಿಂತಿವೆ. ಅವುಗಳಲ್ಲಿ ಒಂದೊಂದರಲ್ಲಿಯೂ ಪರಸ್ಪರವಾಗಿಯೂ ತಾಲವು ಕಾಲಸಾಮ್ಯವನ್ನೂ ಕ್ರಿಯಾ ಸಾಮ್ಯವನ್ನೂ ಉಂಟುಮಾಡುತ್ತದೆ. ರಾಗದ ಮೂಲದ ದ್ರವ್ಯವಾದ ಸ್ವರವು ದೇಶ ಸಂಬಂಧಿಯಾದರೆ ತಾಳವು ಕಾಲರೂಪೀ. ಕಾಲವು ನಿರಂತರತೆ ಮತ್ತು ಏಕಕಾಲಿಕತೆಗಳಿಂದ ಬಾಹ್ಯಜಗತ್ತಿನ ಘಟನೆಗಳಿಗೆ ಪ್ರತಿಷ್ಠಾನವನ್ನು ಉಂಟುಮಾಡಿ ಭೌತಿಕ ಜಗತ್ತಿಗೂ ಅಹಂಪ್ರಜ್ಞೆಗೂ ಸಂಬಂಧವನ್ನು ಕಲ್ಪಿಸುವಂತೆ ತಾಳವು ಗೀತವಾದನನೃತ್ತಗಳಲ್ಲಿರುವ ವಿವಿಧ ಘಟನೆಗಳಲ್ಲಿ ನಿರಂತರತೆಯನ್ನೂ ಅನೇಕ ಘಟನೆಗಳಲ್ಲಿ ಏಕಕಾಲಿಕತೆಯನ್ನೂ ಸ್ಫುರಿಸುತ್ತದೆ. ಗಾಯಕ-ವಾದಕ-ಶ್ರೋತೃಗಳಲ್ಲಿಯೂ ನರ್ತಕ-ವಾದಕ-ಪ್ರೇಕ್ಷಕರಲ್ಲಿಯೂ ಅದು ಸಾಮ್ಯವನ್ನು ಉಂಟುಮಾಡುತ್ತದೆ. ಗೀತವಾದನನರ್ತನಗಳನ್ನೂ, ಅವುಗಳಲ್ಲಿ ಅಡಕವಾದ ಘಟನೆಗಳನ್ನು ಕರಾರುವಕ್ಕಾಗಿ ಅಳೆದು ಯಾವುದು ಯಾವಾಗ ಜರುಗಿತು, ಜರುಗುತ್ತಿದೆ, ಜರುಗುವುದು ಎಂಬುದರ ಖಚಿತವಾದ ಜ್ಞಾನವನ್ನು ತಂದುಕೊಡುತ್ತದೆ.
ತ ಎಂದರೆ ಶಿವ ; ಲ ಎಂದರೆ ಶಕ್ತಿ ; ಹೀಗೆ ತಾಲವು ಶಿವಶಕ್ತಿ ಸಮರಸದಿಂದ ಆವಿರ್ಭವಿಸುತ್ತದೆ. ತಾಲವು ಕಾಲರೂಪಿಯಾದುದು ; ಅಖಂಡಕಾಲರೂಪದಲ್ಲಿ ಅದು ಸತ್ಯ; ಖಂಡಕಾಲರೂಪದಲ್ಲಿ (ಸೆಕಂಡ್, ನಿಮಿಷ, ಘಂಟೆ ಇತ್ಯಾದಿ) ಅನಿತ್ಯ. ಕಾಲವು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳೆಂಬ ತ್ರಿಭಂಗಕ್ಕೆ ಆಧಾರಭೂತವಾಗಿದೆ. ಆದರೆ ಸ್ವಯಂ ನಾಶರಹಿತವಾದುದು. ಅಂತೆಯೇ ಸಮಷ್ಟಿಯಲ್ಲಿ ತಾಲವು ಅಭಿವ್ಯಕ್ತಿ ಗೋಚರವಿಲ್ಲದ್ದು ; ತಾಲಜನ್ಯವಾದ ಪ್ರಾಣಗಳು ಅನಿತ್ಯ ; ಅವಕ್ಕೆ ನಾಶವಿದೆ ; ಆದರೆ ಸಮಷ್ಟಿ ಭಾವದಲ್ಲಿ ತಾಳವು ನಿತ್ಯ, ನಾಶರಹಿತ. ಚಚ್ಚತ್ಪುಟಾದಿ ಐದು ತಾಳಗಳು ಶಿವಮುಖೋದ್ಭೂತಗಳು.
ಈ ನಿರ್ದಿಷ್ಟ ನಾಮರೂಪಗಳಲ್ಲಿ ಅವು ಅನಿತ್ಯ. ಹೀಗೆ ಕಾಲವು ನಿತ್ಯಾನಿತ್ಯ ಸ್ವರೂಪದ್ದು. ಮಾಯೆಯಂತೆ ಸದಸದ್‌ವಿಲಕ್ಷಣ ; ಕಾಲ-ತಾಳಗಳು ಸಮುದ್ರವೀಚೀ ಸಂಬಂಧ ನಿರ್ದಿಷ್ಟವಾದವುಗಳು. ಕಾಲವು ಸಮುದ್ರದಂತೆ ; ತಾಳಗಳು ಅದರಲ್ಲಿ ಹುಟ್ಟಿ ಅಡಗುವ ಅಲೆಗಳಂತೆ ; ಅವಕ್ಕೆ ಸಮುದ್ರದ ನಿತ್ಯತೆಯೂ ಉಂಟು. ವ್ಯಷ್ಟಿರೂಪದಲ್ಲಿ ಲಯವೂ ಉಂಟು. ಇದೇ ರೀತಿಯಲ್ಲಿ ಕಾಲದ ಪರಿಕರಗಳಿಗೂ ಈ ದ್ವಂದ್ವ ಸ್ವಭಾವವುಂಟು. ಕಾಲಪರಿಕರಗಳಾದ ಅಂಗ, ಮಾರ್ಗ, ಕ್ರಿಯೆ, ಗ್ರಹ, ಜಾತಿ ಮುಂತಾದವುಗಳು ತಾಳದಲ್ಲಿ ಸಾಕಾರಧರ್ಮವನ್ನುಳ್ಳವುಗಳು. ತಾಲವು ರಾಜನಂತೆ ; ಇವು ಭೃತ್ಯರಂತೆ ಗೌಣಗಳು. ಹೀಗೆ ಸಂಗೀತಶಾಸ್ತ್ರವು ನಾದವನ್ನು ಬ್ರಹ್ಮವೆಂದೂ ತಾಲಮೂಲವಾದ ಕಾಲವು ಅನಾದಿ, ನಿತ್ಯ ಮಂತಾದ ಲಕ್ಷಣಗಳಿಂದಾಗಿ ಈಶ್ವರಪರಿಕರ ಎಂದೂ ಬೋಧಿಸುತ್ತದೆ. ಹೀಗೆ ಸಂಗೀತದ ಮೂಲದ ದ್ರವ್ಯಗಳಾದ ನಾದತಾಲಗಳೆರಡರಲ್ಲಿಯೂ ಭಾರತೀಯ ಸಂಸ್ಕೃತಿವೈಶಿಷ್ಯದ್ಯೋತಕಗಳಾಗಿರುವ ಅನಾದಿತ್ವ, ನಿತ್ಯತ್ವ, ನಿತ್ಯಾನಿತ್ಯತ್ವ ಮುಂತಾದ ಲಕ್ಷಣಗಳು ಕ್ರಿಯಾಶೀಲವಾಗಿವೆ.
ಮಾರ್ಗತಾಳಗಳು
ತಾಲಗಳ ಪ್ರಾಚೀನತಮ ಉಲ್ಲೇಖವಿರುವುದು ಭರತಮುನಿಯ ನಾಟ್ಯಶಾಸ್ತ್ರ ದಲ್ಲಿ. ಅದರಲ್ಲಿ ಚಚ್ಚತ್ಪುಟ ಚಾಚಪುಟ, ಷಟ್ಟಿತಾಪುತ್ರ (ಪಂಚಪಾಣಿ), ಸಂಪಕ್ವೇಷ್ಟಾಕ ಮತ್ತು ಉದ್ಘಟ್ಟವೆಂಬ ಐದು ತಾಳಗಳನ್ನು ಮಾತ್ರ ಹೇಳಿದೆ ; ಇವೇ ಗೀತವಾದನನರ್ತನನಾಟ್ಯ [ನಾಟಕ ಇತ್ಯಾದಿ ರೂಪಕ] ಗಳಲ್ಲಿಯೂ ಆಸಾರಿತಾದಿ ಪ್ರಾಚೀನ ಪ್ರಕರಣಗೀತಿಗಳಲ್ಲಿಯೂ ಪ್ರಯುಕ್ತವಾಗುತ್ತಿದ್ದವು. ಚಚ್ಚತ್ಪುಟವು ಚತುರಶ್ರ ಜಾತಿಯದು ; ಉಳಿದ ನಾಲ್ಕು ತ್ರ್ಯಶ್ರ. ಚತುರಶ್ರ,–ತ್ರ್ಯಶ್ರಗಳು ಇಂದಿನ ಅದೇ ಹೆಸರಿನ ನಡೆಗಳಿಗೆ ಪರಸ್ಪರವಾಗಿದ್ದವು. ಚತುರಶ್ರದಲ್ಲಿ 2, 4, 8, 16, 32 – ಹೀಗೆ ಉತ್ತರೋತ್ತರವಾಗಿ ದ್ವಿಗುಣವಾಗುವ ಆವರ್ತ ವಿಸ್ತಾರಗಳೂ ತ್ರ್ಯಶ್ರದಲ್ಲಿ 3, 6, 12, 24…ಹೀಗೆ ತ್ರಿಗುಣ ವಿಸ್ತಾರಗಳೂ ದೊರೆಯುತ್ತಿದ್ದವು. ಈ ಬಗೆಯ ವಿಸ್ತರಣಕ್ಕೆ ಏಕಕಲೆ, ದ್ವಿಕಲೆ, ಚತುಷ್ಕಲೆ, ಅಷ್ಟಕಲೆ….. ಎಂದೂ ತ್ರಿಕಲೆ, ಷಟ್ಕಲೆ ದ್ವಾದಶಕಲೆ…. ಎಂದೂ ಸಂಜ್ಞೆಯಿತ್ತು. ”ಚತುರಶ್ರ -ತ್ರ್ಯಶ್ಯಗಳ” ಮಿಶ್ರಣದಿಂದ ಹುಟ್ಟಿದ ಮಿಶ್ರ ಎಂಬ ಮೂರನೆಯ ಬಗೆಯನ್ನೂ ಭರತನು ಹೇಳುತ್ತಾನಾದರೂ ವಿವರಗಳನ್ನು ಕೊಡುವುದಿಲ್ಲ. ಇದಲ್ಲದೆ ಈ ತಾಲಗಳಲ್ಲಿ ಇನ್ನೂ ಒಂದು ಬಗೆಯ ಶಬಲೀಕರಣವು ಅವುಗಳಿಗೆ ಏರ್ಪಟ್ಟು ಕ್ರಿಯಾ-ಅನುಕ್ರಮದಿಂದಲೂ ಉಂಟಾಗುತ್ತಿತ್ತು. ಇವುಗಳಲ್ಲಿ ಲಘು, ಗುರು, ಪ್ಲುತ ಎಂಬ ಮೂರು ಬಗೆಯ ಅಂಗಗಳನ್ನು ಮಾತ್ರ ಬಳಸಲಾಗುತ್ತಿತ್ತು. (ದೇಶೀತಾಲಗಳಲ್ಲಿ ದ್ರುತ ಮತ್ತು ಕಾಕಪಾದ ಅಥವಾ ನಿಃಶಬ್ದ ಎಂಬ ಇನ್ನೆರಡು ಆಂಗಗಳನ್ನೂ ಉಪಯೋಗಿಸಬಹುದಿತ್ತು. ). ಈ ಐದು ತಾಲಗಳ ಅಂಗನಿರ್ದೇಶನವನ್ನು ಈ ಪುಸ್ತಕದಲ್ಲಿಯೇ ತಿಳಿದುಕೊಳ್ಳಬೇಕು. ಒಂದೊಂದು ಅಂಗವನ್ನೂ ಕ್ರಿಯೆ ಎಂಬ ಹಸ್ತವ್ಯಾಪಾರದಿಂದ ನಡೆಸಬೇಕು. ಕ್ರಿಯೆಯು ಸಶಬ್ದ, ನಿಃಶಬ್ದ ಎಂದು ಎರಡು ವಿಧ. ತಾಳಾವರ್ತದಲ್ಲಿರುವ ಇಂತಿಂತಹ ಅಂಗವನ್ನು ಇಂತಹದೇ ಕ್ರಿಯೆಯಿಂದ ನಿರ್ವಹಿಸಬೇಕೆಂಬ ವಿಧಿಯೂ, ಈ ಕ್ರಿಯೆಗೆ ಇಷ್ಟೇ ಕಲಾ ಎಂಬ ಕಾಲಪ್ರಮಾಣವೆಂಬ ವಿಧಿಯೂ, ಇದನ್ನು ನಿರ್ಣಯಿಸುವ ಮಾರ್ಗವೆಂಬ ತಂತ್ರವೂ ಏರ್ಪಟ್ಟಿದ್ದವು. ಎಂದರೆ ಕ್ರಿಯೆಗಳ ಅನುಕ್ರಮದಿಂದ ತಾಲಾವರ್ತದ ಮಾದರಿಯೂ, ಇದರಿಂದ ಇಂತಿಂತಹ (ಗೀತ, ವಾದನ ನರ್ತನ, ನಾಟ್ಯ, ಆಸಾರಿತ ಇತ್ಯಾದಿ) ರೀತಿಗಳಲ್ಲಿ ಪ್ರಯುಕ್ತವಾಗಬೇಕೆಂಬ ವಿನಿಯೋಗವೂ, ಏಕಕಲೆ, ದ್ವಿಕಲೆ ಮುಂತಾದವುಗಳಿಂದ ಗುಣಕಗಳಲ್ಲಿ ಆವರ್ತ ವಿಸ್ತಾರವೂ, ಚತುರಶ್ರ, ತ್ರ್ಯಶ್ರ, ಮಿಶ್ರಗಳಿಂದ ವಿವಿಧ ನಡೆಗಳೂ ದೊರೆಯುತ್ತಿದ್ದವು. ಈ ಅಧಿಕರಣವನ್ನು “ಕರ್ನಾಟಕದಲ್ಲಿ ಕಲೆಗಳು-ಸಂಗೀತ” ಹಾಗೂ ‘ಪುಂಡರೀಕಮಾಲಾ’ (ನರ್ತನನಿರ್ಣಯ, ತಾಲಧರ್ತೃ ಪ್ರಕರಣ) ಗಳಲ್ಲಿಯೂ ವಿವೇಚಿಸಿದ್ದೇನೆ ; ಇಲ್ಲಿ ಪುನಃ ಹೇಳಬೇಕಾದುದಿಲ್ಲ.
ಚಚ್ಚತ್ಪುಟಾದಿ ಐದು ತಾಲಗಳು ಪಾಚೀನತಮವೆಂದು ಈಗಾಗಲೇ ಹೇಳಿದೆಯಷ್ಟೆ. ಇವುಗಳ ರೂಪ ಮತ್ತು ಪ್ರಯುಕ್ತಿಗಳನ್ನು ಸ್ವಲ್ಪವೂ ವ್ಯತ್ಯಾಸವಾಗದಂತೆ ಉಳಿಸಿಕೊಳ್ಳಲು ಮಾಡಿದ್ದ ಪ್ರಯತ್ನವನ್ನು ಗಾಂಧರ್ವ ಎಂಬ ಹೆಸರಿನಲ್ಲಿ ಭರತನೂ ಮಾರ್ಗ ಎಂಬ ಹೆಸರಿನಲ್ಲಿ ಶಾರ್ಙ್ಗದೇವನೂ ವಿವರಿಸುತ್ತಾರೆ. ಗಾಂಧರ್ವವೆಂಬ ಸಂಗೀತ ಪ್ರಕಾರವು ಸ್ವರ, ಪದ, ತಾಲ ಎಂದು ಮೂರು ವಿಧ. ಅದು ದೇವತೆಗಳಿಗೆ ಪ್ರೀತಿಕರ, ಗಂಧರ್ವರಿಂದ ಮಾತ್ರ ಪ್ರಯುಕ್ತ ಮತ್ತು ನಿಯತವಾಗಿ ನಿಃಶ್ರೇಯಸಪ್ರದ. ಮಾರ್ಗ ಸಂಗೀತವು ಗೀತವಾದನನರ್ತನಗಳೆಂದು ಮೂರು ವಿಧ. ಗೀತದಲ್ಲಿ ರಾಗ, ತಾಳ ಮತ್ತು ಮಾತುಗಳು ಸೇರಿರುತ್ತಿದ್ದವು. ಮಾರ್ಗಸಂಗೀತವನ್ನು ಬ್ರಹ್ಮನೇ ಮೊದಲಾದ ದೇವತೆಗಳು ಹುಡುಕಿ ಕಂಡುಹಿಡಿದರು. ಅದನ್ನು ಭರತಾದಿಗಳು ಶಂಭುವಿನ ಮುಂದೆ ಪ್ರದರ್ಶಿಸಿ ಲೋಕದಲ್ಲಿ ಪ್ರಸಾರಮಾಡಿದರು. ಸುಮಾರು ಸಾವಿರ ವರ್ಷಗಳಷ್ಟು ಹಿಂದೆ ಚಚ್ಚತ್ಪುಟಾದಿ ತಾಳಗಳಿಗೆ ಮಾರ್ಗಸಂಜ್ಞೆಯೂ ಸ್ಥಾನಮಾನಗಳೂ ದೊರೆತವು. ಇವುಗಳನ್ನು ತಾಲಪ್ರಕೃತಿಗಳೆಂದೂ ಉಳಿದೆಲ್ಲ ತಾಲಗಳೂ ಇವುಗಳ ವಿಕೃತಿಗಳೆಂದೂ ಭಾವಿಸಲಾಯಿತು. ಇದನ್ನು ಬೇರೆಡೆ ಹೇಳಿದ್ದೇನೆ. ಚಚ್ಚತ್ಪುಟಾದಿ ಐದು ತಾಲಗಳು ಈಶ್ವರನ ಸದ್ಯೋಜಾತಾದಿ ಐದು ಮುಖಗಳಿಂದ ಕ್ರಮವಾಗಿ ಹುಟ್ಟಿದವೆಂಬ ಕಲ್ಪನೆಯೂ ಸುಮಾರು 12 – 13ನೆಯ ಶತಮಾನದ್ದು ಮಾತ್ರ.
ದೇಶೀತಾಳಗಳು
ಬೇರೆ ಬೇರೆ ದೇಶಗಳಲ್ಲಿರುವ ಜನಗಳ ಅಭಿರುಚಿಗೆ ತಕ್ಕಂತೆ ಆಗಾಗ ವ್ಯತ್ಯಾಸವಾಗುತ್ತ ಬೆಳೆಯುವ ಗೀತವಾದನನೃತ್ತಗಳಿಗೆ ದೇಶೀ ಎಂಬ ಹೆಸರನ್ನು ಶಾರ್ಙ್ಗದೇವನು ಕೊಟ್ಟಿದ್ದಾನೆ. ಹಾಗೆ ವ್ಯತ್ಯಾಸವಾಗದೆ ಮೂಲರೂಪದಲ್ಲಿಯೇ ಉಳಿಯುವುದು ಮಾರ್ಗ. ಮಾರ್ಗವಲ್ಲದ ತಾಲಗಳೆಲ್ಲವೂ ದೇಶೀ. ಅವುಗಳಲ್ಲಿ ಚತುರಶ್ರ, ಮಿಶ್ರ, ಖಂಡ, ಸಂಕೀರ್ಣಗಳೆಂಬ ವಿಧಗಳನ್ನೂ ಭಂಗ, ಉಪಭಂಗ, ವಿಭಂಗ, ಮರ್ಮ ಮೊದಲಾದ ಬಗೆಗಳನ್ನೂ ಪೂರ್ವಾಚಾರ್ಯರು ಹೇಳಿದ್ದಾರೆ.
ದೇಶೀತಾಲಗಳಲ್ಲಿ ದ್ರುತ, ಲಘು, ಗುರು, ಪ್ಲುತ ಮತ್ತು ನಿಃಶಬ್ದ (ಕಾಕಪಾದ) ಎಂಬ ಐದು ಅಂಗಗಳು ವಿವಿಧ ಸಂಖ್ಯೆಗಳಲ್ಲಿಯೂ ವಿವಿಧ ಅನುಕ್ರಮಗಳಲ್ಲಿಯೂ ಪ್ರಯುಕ್ತವಾಗುತ್ತವೆ. ಇವಲ್ಲದೆ ವಿರಾಮ ಎಂಬ ಒಂದು ಅನುಬಂಧವು 12ನೆಯ ಶತಮಾನದಲ್ಲಿ ಸೇರಿತು. ಇದು 16ನೆಯ ಶತಮಾನದಲ್ಲಿ ಅಣು(-ನು) ದ್ರುತವೆಂಬ ಹೆಸರಿನಲ್ಲಿ ಒಂದು ಸ್ವತಂತ್ರ ಅಂಗವಾಗಿಯೇ ಏರ್ಪಟ್ಟಿತು. ನಾಟ್ಯಶಾಸ್ತ್ರದಲ್ಲಿ ದೇಶೀ ತಾಲಗಳ ಪ್ರಸ್ತಾಪವಿಲ್ಲ ; ಆದರೆ ಬೃಹದ್ದೇಶಿಯಲ್ಲಿ ಅನೇಕ ದೇಶೀತಾಲಗಳನ್ನು ಹೆಸರಿಸಿದೆ. ಆದುದರಿಂದ ಇವು ಕ್ರಿ. ಶ. 3-5ನೆಯ ಶತಮಾನಗಳಲ್ಲಿ ಹುಟ್ಟಿರಬಹುದೆಂದು ತೋರುತ್ತದೆ. ಇವುಗಳು ದೇಶೀರಾಗಗಳಿಗಿಂತ ನೂರು ಪಟ್ಟು ಬೆಳೆದು ಹುಚ್ಚು ಹೊಳೆಯಾಗಿ ಹರಿಯಿತು. ಕ್ರಿ. ಶ. 17ನೆಯ ಶತಮಾನದ ವೇಳೆಗೆ ಪರಾಕಾಷ್ಠೆಯನ್ನು ಮುಟ್ಟಿದವು ; ಸಾವಿರಾರು ದೇಶೀತಾಲಗಳು ಹುಟ್ಟಿಕೊಂಡವು. ಒಂದೇ ಅಕ್ಷರಕಾಲದ ಚಿತ್ರ (= ಅಥವಾ ಬಲಿ, ಘೊಟ್ಟರಿ) ತಾಲದಿಂದ ಮೊದಲುಗೊಂಡು ಮೋಕ್ಷಪತಿ (384 ಅಕ್ಷರಕಾಲ) ಮತ್ತು ಇಂದ್ರಮಂಡಲಿ(388 ಅಕ್ಷರಕಾಲ)ಯವರೆಗೂ ಇವು ವ್ಯಾಪಿಸಿದ್ದವು. ಇವುಗಳ ನಿರ್ಮಾಣದಲ್ಲಿ ತಾರ್ಕಿಕತೆಗಿಂತ ಕಲ್ಪನೆ, ವೈಯಕ್ತಿಕ ಸಮೀಕರಣಗಳೇ ಮುಖ್ಯವಾಗಿದ್ದವು.
ಶ್ರೀ ಬಿ. ಎಂ. ಸುಂದರಂರವರು ಬಹು ಶ್ರಮವನ್ನು ವಹಿಸಿ 36 ವಿವಿಧ ಆಕರಗಳಿಂದ 1024 ದೇಶೀತಾಲಗಳನ್ನು ಸಂಶೋಧಿಸಿ, ತಮ್ಮ ತಾಲಸಂಗ್ರಹವೆಂಬ ಪುಸ್ತಕದಲ್ಲಿ ಸುವ್ಯಸ್ಥಿತವಾಗಿ ಸಂಗ್ರಹಿಸಿದ್ದಾರೆ. ಇದನ್ನು ಬೆಂಗಳೂರಿನ ಪರ್ಕಸಿವ್ ಆರ್ಟ್ಸ್ ಸೆಂಟರ್ ಪ್ರಕಟಸಿದೆ. ಶ್ರೀ ಸುಂದರಂರವರು ವಿವರಪೂರ್ಣ ಪಾಂಡಿತ್ಯಕ್ಕಾಗಿ ಅಭಿನಂದನೀಯರು. ಆದರೆ ಆಕರಗಳ ಮತ್ತು ತಾಲಗಳ ಸಂಖ್ಯೆಗೆ ಇದು ಮಿತಿಯೆಂದು ಭಾವಿಸಬಾರದು. ಬೇರೆ ಆಕರಗಳೂ ಇವೆ; ಈ ತಾಲಸಂಖ್ಯೆಯು ದ್ವಿಗುಣವಾದರೆ ಆಶ್ಚರ್ಯವಿಲ್ಲ. ಅವರು ಉಪಯೋಗಿಸಿರುವ ಆಕರಗಳಲ್ಲಿ ಅರ್ಜುನಭರತಂ, ಗಾಯಕಲೋಚನಂ, ಸೌತ್ ಇಂಡಿಯನ್ ಮ್ಯೂಸಿಕ್, ಸಂಗೀತ ಚಂದ್ರಿಕೆ, ಸ್ವರಪ್ರಸ್ತಾರಸಾಗರಗಳು ಅರ್ವಾಚೀನ ; ಅವಕ್ಕೆ ಪ್ರಾಥಮಿಕ ಆಕರದ ಸ್ಥಾನ ಮತ್ತು ಮೌಲ್ಯಗಳಿಲ್ಲ. ವೀಣಾಲಕ್ಷಣದಲ್ಲಿ ದೇಶೀತಾಲಗಳ ಪ್ರಸ್ತಾಪವಿಲ್ಲ. ಸಂಗೀತಸಾರಾಮೃತದ ತಾಲಾಧ್ಯಾಯವು ಸಂಗೀತ ರತ್ನಾಕರದ ಉದ್ಧೃತಿ ಮಾತ್ರ ; ಅವರ ಸಂಗೀತಚೂಡಾಮಣಿಯು ಜಗದೇಕಮಲ್ಲನ ಸಂಗೀತಚೂಡಾಮಣಿಯ ಮೂಲಗ್ರಂಥವಲ್ಲ; 14-15 ನೆಯ ಶತಮಾನದ ಸುಮಾರಿನಲ್ಲಿ ಕೇರಳದಲ್ಲಿ ಪರಿಷ್ಕೃತವಾದ ಅದರ ಸಂಕ್ಷೇಪಕೃತ ಗ್ರಂಥ. ಹರಿಪಾಲದೇವನ ಸಂಗೀತ ಸುಧಾಕರದ ಕಾಲವು ಸು. ಕ್ರಿ. ಶ. 1175. ನಾರದೀಯ ಸಂಗೀತಮಕರಂದದ ಹಲವು ಅಂಶಗಳು 17 ನೆಯ ಶತಮಾನದಷ್ಟು ಅರ್ವಾಚೀನ. ನಾರದೀಯ ಪಂಚಮಸಾರಸಂಹಿತೆಯೂ ಸು. 17 ನೆಯ ಶತಮಾನದ್ದು.
“ತಾಲಸಂಗ್ರಹ” ಗ್ರಂಥವು ಬಳಸದಿರುವ ಇನ್ನೂ ಕೆಲವು ಆಕರಗಳನ್ನು ಇಲ್ಲಿ ಹೆಸರಿಸಬಹುದು ; ಉಮಾಪತಿಯ ಔಮಾಪತಂ, ಪಂಡರೀಕವಿಟ್ಠಲನ ನರ್ತನನಿರ್ಣಯ, ನಾರಿದೇವನ ತಾಲಕಲಾವಿಲಾಸ, ಅಚ್ಯುತರಾಯನ ತಾಲಕಲಾಬ್ಧಿ, ನರಹರಿಚಕ್ರವರ್ತಿಯ ಸಂಗೀತಸಾರಸಂಗ್ರಹ, ಲಕ್ಷ್ಮೀನಾರಾಯಣನ ಸಂಗೀತಸೂರ್ಯೋದಯ, ಅಹೋಬಲನ ಸಂಗೀತಪಾರಿಜಾತ, ನಾರಾಯಣದೇವನ ಸಂಗೀತನಾರಾಯಣ, ಗೋಪತಿಪ್ಪೇಂದ್ರನ ತಾಲದೀಪಿಕಾ, ಕೋಹಲನ (?) ಕೋಹಲಮತಂ, ಭರತಸಿದ್ಧಾಂತಂ, ಕೆಳದಿ ಬಸಪ್ಪನಾಯಕನ ಶಿವತತ್ತ್ವರತ್ನಾಕರ ; ಅಚ್ಯುತರಾಯನು ಸಂಗೀತ ವಿದ್ಯಾವಿನೋದ, ಚತುರಸಭಾವಿಲಾಸ, ಪರಮೇಶ್ವರನ ತಾಲಕಲಾವಿಲಾಸ, ಜೈನಮತ, ಸಂಗೀತಮಾರ್ಗ, ಆಂಜನೇಯಮತ, ನೃತ್ತಚೂಡಾಮಣಿ, ಸಂಗೀತಮಣಿದರ್ಪಣ, ಕಾತ್ಯಾಯನೀಯ, ಸಂಗೀತಾರ್ಣವ, ಕಪರ್ದಿ, ರಂಗರಾಜ ಭರತಭಾಷ್ಯ ಎಂಬ ತಾಲನಿಷಯವನ್ನೊಳಗೊಂಡ ಆಕರಗಳನ್ನು ಸ್ಮರಿಸುತ್ತಾನೆ ಅಥವಾ ಉದ್ಧರಿಸಿಕೊಳ್ಳುತ್ತಾನೆ. ಇವು ಇಂದು ಅನುಪಲಬ್ಧವಾಗಿಯೇ ಉಳಿದಿವೆ. ಮೇಲೆ ಹೇಳಿದ ಆಕರಗಳೇ ಅಲ್ಲದೆ ಹಲವು ತಾಲವಿಷಯಕ ಹಸ್ತಪ್ರತಿಗಳು ಹಲವು ಹಸ್ತಪ್ರತಿ ಗ್ರಂಥಭಂಡಾರಗಳಲ್ಲಿ ದೊರೆಯುತ್ತವೆ. ಉದಾ. ತಾಲಕಲಾವಿಲಾಸ (ಅನ್ಯಕೃತ), ಲಕ್ಷ್ಮೀಧರನು ತನ್ನ ಶ್ರುತಿರಂಜನಿಯಲ್ಲಿ ಉದ್ಧರಿಸಿಕೊಳ್ಳುವ ಇದೇ ಹೆಸರಿನ ಇನ್ನೊಂದು ಗ್ರಂಥ, ತಾಲಚಂದ್ರಿಕಾ, ಅಷ್ಟಾವಧಾನ ಸೋಮನಾರ್ಯಕೃತ ಸ್ವರರಾಗ ಸುಧಾರಸದ ತಾಲದಶಪ್ರಾಣಪ್ರಕರಣ ತಾಲಪ್ರಕರಣ–ತಾಲಾಧ್ಯಾಯವೆಂದು ಹೆಸರುಳ್ಳ (ಸಂಗೀತ ರತ್ನಾಕರದ ತಾಲಾಧ್ಯಾಯವನ್ನೂ ಒಳಗೊಂಡಂತೆ) ಹಲವು ಗ್ರಂಥಗಳು, ತಾಲಪ್ರಕಾಶ, ತಾಲಪ್ರಸ್ತಾರ ಎಂಬ ಹೆಸರಿನ ಹಲವು ಪ್ರಕರಣಗ್ರಂಥಗಳು, ತಾಲಮಂಜರೀ, ತಾಲಲಕ್ಷಣವೆಂಬ ಹೆಸರಿನ ಹಲವು ಅಜ್ಞಾತಕೃತ ಹಸ್ತಪ್ರತಿ ಗ್ರಂಥಗಳು, ಕೋಹಲೀಯ ತಾಲಲಕ್ಷಣ, ನಂದಿಕೇಶ್ವರ ರಚಿತ ತಾಲಲಕ್ಷಣ, ತಾಲ ವಿಷಯ ತಾಲಸರ್ವಸ್ವಸಾರ ಸಂಗ್ರಹ, ತಾಲೋಪನಿಷದ್ (? ), ತಾಲಾದಿಲಕ್ಷಣಂ ಇತ್ಯಾದಿ, ಇತ್ಯಾದಿ.
ಕ್ರಿ. ಶ್ರ. 15-16ನೆಯ – ಶತಮಾನಗಳ ವೇಳೆಗೆ ದೇಶೀತಾಲಗಳ ಸೃಷ್ಟಿಯು ಶಾಸ್ತ್ರೀಯ ಲಕ್ಷಣ, ಪ್ರಯೋಗಕ್ಷಮತೆಗಳನ್ನು ಉಪೇಕ್ಷಿಸಿ ಅತಿರೇಕವಾಯಿತು. ಕ್ಲಿಷ್ಟತೆ, ಜಬಲತೆ, ದೈರ್ಘ್ಯ, ವೈಚಿತ್ರ್ಯ, ಪ್ರಭುವಿನ ಅಥವಾ ಇತರ ಆಶ್ರಯದಾತನ ಸಂತೋಷ, ವಾಗ್ಗೇಯಕಾರನ ಹೆಸರನ್ನು ಶಾಶ್ವತಗೊಳಿಸುವ ಪ್ರಯತ್ನ – ಇಂತಹ ಗೀತನೃತ್ಯಗಳ ಸ್ವನಿಷ್ಠಾರ್ಥೇತರ ಕಾರಣಗಳೇ ತಾಲಗಳ ನಾಮರೂಪಗಳಿಗೆ ಮೂಲವಾದವು. ಇಷ್ಟೇ ಅಲ್ಲದೆ 13 – 14ನೆಯ ಶತಮಾನಗಳಲ್ಲಿಯೇ ಸದೃಶನಾಮ-ವಿಸದೃಶ ಲಕ್ಷಣ, ಸದೃಶ ಲಕ್ಷಣ-ವಿಸದೃಶನಾಮಗಳ ಗೊಂದಲವು ಗೋಚರವಾಗಿದ್ದುದು 15 ನೆಯ ಶತಮಾನದಲ್ಲಿ ಪರಾಕಾಷ್ಠೆಯನ್ನು ಮುಟ್ಟಿತು. ಈ ಕಾಲದಲ್ಲಿಯೇ ವಿರಾಮದ ಅನಿಶ್ಚಿತ ಪ್ರಮಾಣದಿಂದಲೂ ಲಘುವಿನ ಮನುಷ್ಯ, ದೇಶ್ಯ ಮತ್ತು ದಿವ್ಯ ಎಂಬ ಕ್ರಮವಾಗಿ 4, 5 ಮತ್ತು 6 ಅಕ್ಷರ ಕಾಲಪ್ರಮಾಣದ ಸಂದಿಗ್ಧ ಪ್ರಯೋಗದಿಂದಲೂ ತಾಲಾವರ್ತದ ಪ್ರಮಾಣದಲ್ಲಿಯೂ ಆದುದರಿಂದ ತಾಲಕಲ್ಪನೆಯಲ್ಲಿಯೂ ನೈಋತ್ಯವು ತಪ್ಪಿಹೋಯಿತು. ಇದರಿಂದ ದೇಶೀತಾಳಗಳ ನಿರ್ಮಾಣವು 17-18 ನೆಯ ಶತಮಾನಗಳವರೆಗೆ ಅಷ್ಟಿಷ್ಟು ಮುಂದುವರೆದರೂ ಅವುಗಳ ವ್ಯವಹಾರ ಕ್ಷಮತೆಯು ಮಾಸುತ್ತ ಬಂದು ಅವುಗಳ ಬದಲು ಕರ್ನಾಟಕದ ಹರಿದಾಸರು ಸುಳಾದಿ ತಾಲಗಳನ್ನು ಸುಭದ್ರವಾಗಿ ಸ್ಥಾಪಿಸಿದರು. ಅವುಗಳ ಅಂತಿಮ ಲಕ್ಷ್ಯದರ್ಶನವಾಗುವುದು ಕ್ರಿ. ಶ. 18ನೆಯ ಶತಮಾನದ ರಾಮಸ್ವಾಮಿ ದೀಕ್ಷಿತನ ಅಷ್ಟೋತ್ತರ ಶತ ರಾಗ-ತಾಲಮಾಲಿಕೆಯಲ್ಲಿ ; ತಮಿಳುನಾಡಿನ ತಿರುಪ್ಪುಗಳ ಅಪರೂಪದ ಗಾಯನದಲ್ಲಿ, ಅಲ್ಲೊಂದು ಇಲ್ಲೊಂದರಂತೆ ಪಲ್ಲವಿಗಳ ಗಾಯನದಲ್ಲಿ. ದೇಶೀತಾಲಗಳು ಸುಳಾದಿ ತಾಲಗಳಿಗೆ ಎಡೆಮಾಡಿಕೊಟ್ಟ ಸಂದರ್ಭವನ್ನೂ ರೀತಿಯನ್ನೂ ನಾನು ಬೇರೆಡೆ (ಸುಳಾದಿಸ್ ಅ್ಯಂಡ್ ಉಗಾಭೋಗಸ್ ಆಫ್ ಕರ್ನಾಟಕ ಮ್ಯೂಸಿಕ್, ಮ್ಯೂಸಿಕ್ ಆಫ್ ದಿ ಮಾಧ್ವ್ವ ಮಾಂಕ್ಸ್ ಆಫ್ ಕರ್ನಾಟಕ, ನರ್ತನನಿರ್ಣಯದ ವ್ಯಾಖ್ಯೆ, ಕರ್ನಾಟಕದಲ್ಲಿ ಕಲೆಗಳು-ಸಂಗೀತ ಇತ್ಯಾದಿ ಎಡೆಗಳಲ್ಲಿ) ವಿವೇಚಿಸಿದ್ದೇನೆ. ದೇಶೀತಾಲಗಳ ಸಂಖ್ಯೆಯನ್ನು ಕುರಿತು ಕೆಲವು ಮಾತುಗಳನ್ನು ಬರೆಯುವುದು ಪ್ರಸಕ್ತವಾಗಿದೆ. ಏಕೆಂದರೆ ಈ ಪುಸ್ತಕದಲ್ಲೂ ಅದರ ಮುಂದಿನ ಸಂಪುಟ ಗಳಲ್ಲೂ 108 ತಾಳಗಳಲ್ಲಿ ರಚಿತವಾದ ಪಲ್ಲವಿಗಳನ್ನು ಪ್ರಕಟಿಸುವುದೆಂಬ ಪ್ರತಿಜ್ಞೆ ಇದೆ. ಅಲ್ಲದೆ ಚಚ್ಚತ್ಪುಟಾದಿ ಐದು ತಾಲಗಳೂ ಸೇರಿದಂತೆ 108 ಎಂದು ತಾಲಗಳನ್ನು ಎಣಿಸಿಕೊಳ್ಳಲಾಗಿದೆ. ಹೀಗಾಗಿ ಮಾರ್ಗ-ದೇಶೀ ಎಂದು ವರ್ಗ ಮಾಡುತ್ತಿದ್ದ ಎರಡು ತಾಲಜಾತಿಗಳನ್ನೂ ಸಮಷ್ಟಿಯಲ್ಲಿ ಪರಿಗಣಿಸಲಾಗಿದೆ. ಅಲ್ಲದೆ ಸುಳಾದಿ ತಾಲಗಳಲ್ಲದ ಎಲ್ಲ ತಾಲಗಳನ್ನೂ ಮಾರ್ಗವೆಂದೇ ತಿಳಿಯುವ ಪ್ರವೃತ್ತಿಯೂ ಅಲ್ಲಲ್ಲಿ ಕಂಡುಬರುತ್ತದೆ. ಒಂದು ದೃಷ್ಟಿಯಲ್ಲಿ ಇದು ಸರಿಯಾದರೂ, ದೇಶೀ ಶಬ್ದಕ್ಕೆ ಸಂಗೀತ ಶಾಸ್ತ್ರಗ್ರಂಥಗಳು ಇಟ್ಟುಕೊಂಡ ಅರ್ಥವು ಸುಳಾದಿ ತಾಲಗಳಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಇವುಗಳ ಪ್ರಯೋಗವು ಜನಾಭಿರುಚಿಯನ್ನು ಅವಲಂಬಿಸಿ ಕಾಲದೇಶಗಳಲ್ಲಿ ವ್ಯತ್ಯಾಸವಾಗುತ್ತಿಲ್ಲ, ಸಾರ್ವತ್ರಿಕವಾಗಿದೆ. ಆದುದರಿಂದ ಸಂಗೀತ ರತ್ನಾಕರ, ಸಂಗೀತಸುಧಾಕರ ಇತ್ಯಾದಿ ಗ್ರಂಥಗಳು ದರ್ಪಣ, ಚರ್ಚರೀ, ನಿಃಸಾರು ಮುಂತಾದ ತಾಲಗಳಿಗೆ ಕೊಡುವ ದೇಶೀ ಸಂಜ್ಞೆಯನ್ನೇ ಉಳಿಸಿಕೊಳ್ಳುವುದು ಉಚಿತವಾಗಿದೆ. ಮಾರ್ಗದೇಶೀಭೇದಗಳನ್ನು ಲೆಕ್ಕಿಸದೆ ಚಚ್ಚತ್ಪುಟಾದಿ ತಾಲಗಳನ್ನೂ, ದರ್ಪಣಾದಿ ತಾಲಗಳನ್ನೂ ಸಗಟುಮೇರಾಗಿ ವ್ಯವಹರಿಸುವ ಪದ್ಧತಿಯು 12ನೆಯ ಶತಮಾನದಿಂದಲೇ ಕಂಡುಬಂದರೂ ಅವುಗಳನ್ನು ಪ್ರತ್ಯೇಕ ವರ್ಗಗಳೆಂದು ವ್ಯವಹರಿಸುವುದೂ 17ನೆಯ ಶತಮಾನಗಳಲ್ಲಿ ಸಹ ಕಂಡುಬರುತ್ತದೆ. ಮೊದಲನೆಯದನ್ನು ಏಕೋತ್ತರ ಶತ (101) ತಾಲಗಳ ವರ್ಣನೆಯಲ್ಲಿ ಸಾಮಾನ್ಯವಾಗಿ ನೋಡಬಹುದು.
ತಾಲಗಳನ್ನು ನೂರೆಂಟೆಂದು ವ್ಯವಹರಿಸುವುದು ಸುಮಾರು ಹದಿನೆಂಟನೆಯ ಶತಮಾನದಿಂದ ಪ್ರಾರಂಭವಾಗಿರಬಹುದು. ಈ ಸಂಖ್ಯೆಗೆ ಅಂಟಿಕೊಂಡ ಪವಿತ್ರ ಭಾವನೆಯು ಇದನ್ನು ಪ್ರೇರಿಸಿರುವುದು ಅಸಂಭವವಲ್ಲ. ಅಷ್ಟೋತ್ತರಶತತಾಲ ಲಕ್ಷಣಂ ಹಾಗೂ ಈ ಶತಮಾನದಲ್ಲಿಯೇ ರಚಿತವಾದ ಸಂಗೀತಚಂದ್ರಿಕಾ, ಸ್ವರಪ್ರಸ್ತಾರಸಾಗರಮು ಮುಂತಾದ ಕೆಲವು ಗ್ರಂಥಗಳು ಮಾತ್ರ 108 ತಾಲಗಳನ್ನು, ಹೆಸರಿಸಿ ವರ್ಣಿಸುತ್ತವೆ. ಈ ತಾಲಗಳಾದರೂ ಬಹುತೇಕ 101 ಮತ್ತು 120 ತಾಲಸಮೂಹಗಳಿಂದ ಆಯ್ದುಕೊಂಡವುಗಳೇ ಆಗಿವೆ. ಪ್ರಾಚೀನಕಾಲದಿಂದಲೂ ಸಂಗೀತಶಾಸ್ತ್ರ ಗ್ರಂಥಗಳು ದೇಶೀತಾಲಗಳನ್ನು ವಿವಿಧ ಸಂಖ್ಯೆಗಳಲ್ಲಿ ಕೊಟ್ಟಿವೆ. ಆದರೆ ನೂರೆಂಟರಲ್ಲಿ ಅಲ್ಲ. ಇಂತಹ ಕೆಲವು ಆಕರಗಳನ್ನು ಇಲ್ಲಿ ಉದಾಹರಿಸಬಹುದು (ತಾಳಸಂಖ್ಯೆಯನ್ನು ಕಂಸಗಳಲ್ಲಿ ಕೊಟ್ಟಿದೆ) ; ಸೋಮೇಶ್ವರನ ಅಭಿಲಷಿತಾರ್ಥಚಿಂತಾಮಣಿ (32), ಜಗದೇಕಮಲ್ಲನ ಸಂಗೀತಚೂಡಾಮಣಿ (ಮೂಲಗ್ರಂಥ : 101) ಹರಿಪಾಲದೇವನ ಸಂಗೀತಸುಧಾಕರ (101), ಪಾರ್ಶ್ವದೇವನ ಸಂಗೀತ ಸಮಯಸಾರ (101 ; ವರ್ಣನೆ – 35; ಭಂಗ 12, ಉಪಭಂಗ 6, ವಿಭಂಗ 17) ಶಾರ್ಙ್ಗದೇವನ ಸಂಗೀತರತ್ನಾಕರ (120), ನಂದಿಕೇಶ್ವರನ ಭರತಾರ್ಣವ (112) ಸುಧಾಕಲಶನ ಸಂಗೀತೋಪನಿಷತ್ ಸಾರೋದ್ಧಾರ (74), ಉಮಾಪತಿಯ ಔಮಾಪತಂ (101 ; ಸಂಪೂರ್ಣವಾಗಿ ವಿಭಿನ್ನ ಮತ್ತು ಪ್ರಬಂಧತಾಲಗಳು 94), (ಸಂಗೀತ ಚೂಡಾಮಣಿಯೆಂಬ ಹೆಸರಿನಲ್ಲಿ ಬರೋಡ ಗಾಯಕವಾಡ್ ಪ್ರಾಚ್ಯ ಗ್ರಂಥಮಾಲೆಯಲ್ಲಿ ಪ್ರಕಟಗೊಂಡಿರುವ ಕೇರಳೀಯ) ಸಂಗೀತಚೂಡಾಮಣಿಸಾರ (101 ; ಚಚ್ಚತ್ಪುಟ ಪ್ರಕಾರ ಗಳು 13, ಚಾಚಪುಟ ಪ್ರಕಾರಗಳು 7, ಷಟ್‌ಪಿತಾಪುತ್ರಕ ಪ್ರಕಾರಗಳು 8, ಸಂಪಕ್ವೇಷ್ಟಾಕ ಪ್ರಕಾರಗಳು 42, ಉದ್‌ಘಟ್ಟ ಪ್ರಕಾರಗಳು 28; ಚತುರಸ್ರ 45, ತ್ರ್ಯಸ್ರ ಖಂಡಗಳು 56) ಕೋಹಲನ (?) ಕೋಹಲಮತಂ (101), ಸಾಳ್ವ ಗೋಪತಿಪ್ಪೇಂದ್ರನ ತಾಲದೀಪಿಕಾ (223), ಅಷ್ಟೋತ್ತರಶತತಾಲ ಲಕ್ಷಣಂ (108), ಶುಭಂಕರನ ಸಂಗೀತದಾಮೋದರ (101) ಭಂಡಾರು ಲಕ್ಷೀನಾರಾಯಣನ ಸಂಗೀತ ಸೂರ್ಯೋದಯ (111) ಪಂಡರೀಕ ವಿಟ್ಠಲನ ನರ್ತನ ನಿರ್ಣಯ (86), ಶ್ರೀಕಂಠನ ರಸಕೌಮುದೀ (37), ನಾರದನ ಸಂಗೀತಮಕರಂದ (101 ; ಶಬ್ದಾಡಂಬರ ಇತ್ಯಾದಿ ಪಂಚಕಾರ್ಯ ಪ್ರಬಂಧಗಳು 5, ತಾಲಪ್ರಬಂಧಗಳು 10, ಯಕ್ಷಪತಿ ಇತ್ಯಾದಿ ಅಂಗ ತಾಲಪ್ರಬಂಧಗಳು 12) ; ನಾರದನ ಪಂಚಮಸಾರಸಂಹಿತೆ (99 ಉತ್ತರಭಾರತದಲ್ಲಿ ; ವರ್ಣನೆ 12 ; ದಕ್ಷಿಣ ಭಾರತ, ಲಂಕೆಗಳಲ್ಲಿ 108), ನರಹರಿ ಚಕ್ರವರ್ತಿ (ಘನಶ್ಯಾಮದಾಸ) ಯ ಸಂಗೀತಸಾರ ಸಂಗ್ರಹ (101), ಗೀತಚಂದ್ರೋದಯದ ತಾಲಾರ್ನವ (101), ಚತುರದಾಮೋದರನ ಸಂಗೀತದರ್ಪಣಂ (ಸಂಗೀತ ರತ್ನಾಕರದ 120, ಮತಾಂತರ 72, ಮಂಠವಿಧಗಳು 32 ಒಟ್ಟು 224), ಪೋಲೂರಿ ಗೋವಿಂದ ಕವಿಯ ರಾಗತಾಲಚಿಂತಾಮಣಿ (124), ಅಹೋಬಲ ಪಂಡಿತನ ಸಂಗೀತ ಪಾರಿಜಾತ (159, 8 ರಿಚ್ಛ ಕಾಲಗಳು, ಸೂಡಗಳು ಮತ್ತು ಪುಷ್ಪಬಾಣ, ಭಂಗ, ಉಪಭಂಗ, ವಿಭಂಗಗಳು) ಪಾರ್ಲಕಿಮಿಡಿಯ ಜಗನ್ನಾಥ ನಾರಾಯಣದೇವನ ಸಂಗೀತನಾರಾಯಣ (101) ಹೀಗೆ ‘ನೂರೆಂಟುತಾಲ’ಗಳ ವರ್ಗೀಕರಣವು ಪ್ರಾಸಂಗಿಕ, ಅಪರೂಪ, ಅರ್ವಾಚೀನ. ಕೆಳದಿಯ ಬಸವಪ್ಪ ನಾಯಕನ ಶಿವತತ್ವರತ್ನಾಕರ (ಸಂಗೀತ ಸಮಯ ಸಾರದ 101), ತುಳಜನ ಸಂಗೀತಸಾರಾಮೃತ (ಸಂಗೀತ ರತ್ನಾಕರದ 120), ಶೌರೀಂದ್ರ ಮೋಹನ ಠಾಕೂರನ ಸಂಗೀತ ಸಾರಸಂಗ್ರಹ (ಸಂಗೀತದರ್ಪಣದ 224).
ತಾಲಸಾಧನಗಳು
ಮಾರ್ಗತಾಲಗಳನ್ನು ಪ್ರತ್ಯಕ್ಷೀಕರಿಸಿಕೊಳ್ಳಲು ಕ್ರಿಯಾ, ಮಾರ್ಗ, ಕಳೆ ಎಂಬ ಸಾಧನಗಳಿರುವಂತೆ ದೇಶೀತಾಲಗಳನ್ನು ಪ್ರಯೋಗಿಸಲು ಕ್ರಿಯಾ, ಮಾರ್ಗ, ಗ್ರಹ, ಪರಿವೃತ್ತ, ಲಯ ಮತ್ತು ಯತಿ ಎಂಬ ಆರು ಸಾಧನಗಳನ್ನು ಶಾಸ್ತ್ರವು ಬೋಧಿಸಿದೆ. ಕ್ರಿಯೆಯು ಸಶಬ್ಧ, ನಿಃಶಬ್ದ ಮತ್ತು ಸಶಬ್ದಾಶಬ್ದ ಎಂದು ಮೂರು ವಿಧ. ನಿಃಶಬ್ದ ಕ್ರಿಯೆಯು ಆವಾಪ, ನಿಷ್ಕ್ರಾಮ, ವಿಕ್ಷೇಪ, ಮತ್ತು ಪ್ರವೇಶವೆಂದು ನಾಲ್ಕು ಬಗೆ. ಸಶಬ್ದಕ್ರಿಯೆಯು ಧ್ರುವ, ಶಮ್ಯಾ, ತಾಲ, ಸನ್ನಿಪಾತವೆಂದು ನಾಲ್ಕು ವಿಧ. ಈ ಕ್ರಿಯೆಗಳನ್ನು ಬೇರೆ ಬೇರೆ ಗ್ರಂಥಗಳು ಬೇರೆಬೇರೆಯಾಗಿ ವರ್ಣಿಸಿವೆ. ಉದಾಹರಣೆಗೆ, ಸಂಗೀತರತ್ನಾಕರದಲ್ಲಿ ಹೀಗಿದೆ – ಆವಾಪ – ಬೆರಳುಗಳನ್ನು ಚಾಚಿ ಕೈಯನ್ನು ಮೇಲಕ್ಕೆತ್ತಿ ಬೆರಳುಗಳನ್ನು ಮಡಚುವುಡು ; ನಿಷ್ಕ್ರಾಮ-ಕೈಯನ್ನು ಇಳಿಸಿ ಬೆರಳುಗಳನ್ನು ಚಾಚುವುದು ; ವಿಕ್ಷೇಪ-ಬೆರಳುಗಳು ಚಾಚಿರುವಂತೆಯೇ ಕೈಯನ್ನು ಬಲಪಕ್ಕಕ್ಕೆ (ಸ್ವಲ್ಪವಾಗಿ) ಸರಿಸುವುದು; ಪ್ರವೇಶ-ಇದನ್ನು ಕೆಳಕೆ ಸರಿಸಿ ಬೆರಳುಗಳನ್ನು ಮಡಚುವುದು. ಆದರೆ ನರ್ತನನಿರ್ಣಯದಲ್ಲಿ ಆವಾಪ-ಕಿರು ಬೆಟ್ಟಿನಿಂದ ಮೊದಲಾಗುವ ಬೆರಳುಗಳನ್ನು ಎದುರಿನಿಂದ ಎದೆಯೆಡೆಗೆ ತರುವುದು ; ನಿಷ್ಕ್ರಾಮ-ಅದನ್ನೇ ಎದೆಯಿಂದ ಎದುರಿಗೆ ಹೊರಪಡಿಸುವುದು ; ವಿಕ್ಷೇಪ – ತೋರು ಬೆಟ್ಟಿನಿಂದ ಮೊದಲುಮಾಡಿಕೊಂಡು ಬೆರಳುಗಳನ್ನು ಹೃದಯದಿಂದ ಪಕ್ಕಕ್ಕೆ ತೆಗೆದುಕೊಂಡುಹೋಗುವುದು ; ಪ್ರವೇಶ-ಅದನ್ನೇ ಪಕ್ಕದಿಂದ ಹೃದಯದೆಡೆಗೆ ತರುವುದು; ಧ್ರುವ – ಚಿಟಿಕೆಯನ್ನು ಹಾಕುತ್ತ ಕೈ ಕೆಳಗೆ ಚಲಿಸುವುದು ; ಶಮ್ಯಾ-ಬಲಗೈ ಕೆಳಗೆ ಬೀಳುವುದು ; ತಾಲ-ಎಡಗೈ ಕೆಳಗೆ ಬೀಳುವುದು ; ಸನ್ನಿಪಾತ-ಎರಡೂ ಕೈಗಳು ಕೆಳಗೆ ಬೀಳುವುದು.
ಕೆಲವು ಶಾಸ್ತ್ರಕಾರರು ದೇಶೀತಾಲಗಳಿಗೆ ಧ್ರುವಕಾ, ಸರ್ಪಿಣೀ, ಕೃಷ್ಯಾ, ಪದ್ಮಿನೀ, ವಿಸರ್ಜಿತಾ, ವಿಕ್ಷಿಪ್ತಾ, ಪತಾಕಾ ಮತ್ತು ಪತಿತಾ ಎಂಬ ಕ್ರಿಯೆಗಳನ್ನು ಪ್ರತ್ಯೇಕವಾಗಿ ಹೇಳುತ್ತಾರೆ. (ಉದಾ. ಅಚ್ಯುತರಾಯನ ತಾಲಕಲಾಬ್ಧಿ). ಧ್ರುವಕಾ ಎಂಬುದು ಸಶಬ್ದಕ್ರಿಯೆ. ಸರ್ಪಿಣಿಯಲ್ಲಿ ಕೈ ಎಡಗಡೆಗೂ ಕೃಷ್ಯಾದಲ್ಲಿ ಬಲಗಡೆಗೂ, ಪದ್ಮಿನಿಯಲ್ಲಿ ಕೆಳಮುಖವಾಗಿಯೂ ಹೋಗುತ್ತದೆ. ವಿಸರ್ಜಿತಾದಲ್ಲಿ ಕೈ ಹೊರಗಡೆಗೆ ಹೋಗುತ್ತದೆ. ವಿಕ್ಷಿಪ್ತಾದಲ್ಲಿ ಕೈ ಕೊಂಕುತ್ತದೆ. ಪತಾಕಾದಲ್ಲಿ ಮೇಲುಮುಖವಾಗಿ ಚಲಿಸುತ್ತದೆ. ಪತಿತಾದಲ್ಲಿ ಕೈ ಕೆಳಗೆ ಬೀಳುತ್ತದೆ.
ಪ್ರತಿಯೊಂದು ಕ್ರಿಯೆಗೂ ನಿರ್ದಿಷ್ಟವಾದ ಕಾಲಪ್ರಮಾಣವಿದೆ ; ಇದರಿಂದಲೇ ತಾಳಾಂಗದ ಮತ್ತು ಅದರಿಂದ ತಾಳಾವರ್ತದ ಪ್ರಮಾಣವು ಇಯತ್ತಾ ಪೂರ್ವಕವಾಗುತ್ತದೆ. ಇದನ್ನು ಮಾಡುವುದು ಮಾರ್ಗ. ಧ್ರುವ ಮಾರ್ಗದಲ್ಲಿ ಒಂದು ಘಾತವು ಮಾತ್ರ ; ಚಿತ್ರಮಾರ್ಗದಲ್ಲಿ ಧ್ರುವಕಾ, ಪತಿತಾ ಕ್ರಿಯೆಗಳು, ವಾರ್ತಿಕದಲ್ಲಿ ಧ್ರುವಕಾ ಸರ್ಪಿಣೀ, ಪತಾಕಾ, ಪತಿತಾ ; ದಕ್ಷಿಣ ಮಾರ್ಗದಲ್ಲಿ ಎಲ್ಲ ಎಂಟು ಕ್ರಿಯೆಗಳು. ಸಂಗೀತಚೂಡಾಮಣಿಯು 12ನೆಯ ಶತಮಾನದಲ್ಲಿಯೇ ದಕ್ಷಿಣ, ವಾರ್ತಿಕ, ಚಿತ್ರ, ಚಿತ್ರತರ, ಚಿತ್ರತಮ, ಅತಿಚಿತ್ರತಮ ಎಂಬ ಆರು ಮಾರ್ಗಗಳನ್ನೂ ಅವುಗಳಿಗೆ ಕ್ರಮವಾಗಿ 8, 4, 2, 1, 0.5, 0.25 ಮಾತ್ರಾ (ಕಚಟತಪ ಎಂಬ ಐದು ಲಘ್ವಕ್ಷರಗಳ ಉಚ್ಚಾರಕ್ಕೆ ಬೇಕಾಗುವ ಕಾಲ) ಪ್ರಮಾಣವನ್ನು ಹೇಳುತ್ತದೆ. ಸಂಗೀತಸಮಯಸಾರವು ಕಡೆಯ ಮೂರು ದೇಶೀತಾಲಗಳಲ್ಲಿ ಅನ್ವಯವಾಗುವ ಮಾರ್ಗಗಳೆಂದೂ ಕಡೆಯದಕ್ಕೆ ಅನುದ್ರುತವೆಂಬ ಸಂಜ್ಞಾಂತರವಿದೆಯೆಂದೂ ಹೇಳುತ್ತದೆ.
ಗ್ರಹವು ತಾಲಾವರ್ತದ – ಗೀತಪ್ರಾರಂಭಗಳ ಸಂಬಂಧವನ್ನು ಸೂಚಿಸುತ್ತದೆ. ಇದು ಸಮ ವಿಷಮವೆಂದು ಎರಡು ಬಗೆ ; ವಿಷಮವು ಅತೀತ, ಅನಾಗತವೆಂದು ಎರಡು ವಿಧ. ಗೀತಾದಿಯಲ್ಲಿ ಘಾತವೂ ಬಿದ್ದರೆ ಸಮ, ಗೀತಾದಿಯು ಮೊದಲಾಗಿದ್ದು ತಾಳ ಪ್ರಾರಂಭವು ಆಮೇಲಾದರೆ ಅತೀತ, ತಾಳಾದಿಯು ಮೊದಲಾಗಿದ್ದು ಗೀತಾದಿಯು ಆಮೇಲಾದರೆ ಅನಾಗತಗ್ರಹ. ಕೆಲವರು ಇವು ಯಾವುವೂ ಅಲ್ಲದ ಒಂದು ಪರಸ್ಪರ ಸಂಬಂಧವನ್ನು ವಿಷಮವೆನ್ನುತ್ತಾರೆ.
ಪರಿವರ್ತವೆಂದರೆ ದ್ವಿಕಲೆ ಚತುಷ್ಕಲೆ ಇತ್ಯಾದಿಗಳಿಂದ ಚತುರಶ್ರ ತಾಲಗಳಲ್ಲಿಯೂ ತ್ರಿಕಲೆ, ಷಟ್ಕಲೆ ಇತ್ಯಾದಿಗಳಿಂದ ತ್ರ್ಯಶ್ರ ತಾಲಗಳಲ್ಲಿಯೂ ಆವರ್ತ ವಿಸ್ತಾರವನ್ನು ಮಾಡುವುದು.
ಎರಡು ಅವ್ಯವಹಿತ ತಾಲಕ್ರಿಯೆಗಳ ನಡುವೆ ಇರುವ ವ್ಯವಧಾನಕ್ಕೆ ಲಯವೆಂದು ಹೆಸರು. ಇದು ವಿಲಂಬಿತ, ಮಧ್ಯ, ದ್ರುತವೆಂದು ಮೂರು ಬಗೆ, ಇವು ಉತ್ತರೋತ್ತರವಾಗಿ ಎರಡೆರಡರಷ್ಟು ವೇಗವನ್ನು ಪಡೆದಿರುತ್ತವೆ. ವಿಲಂತ ವಿಲಂಬಿತ, ವಿಲಂಬಿತ ಮಧ್ಯ ಇತ್ಯಾದಿ ಒಂಬತ್ತು ಪ್ರಭೇದಗಳನ್ನು ಕೆಲವರು ಹೇಳುತ್ತಾರೆ. ಮಾರ್ಗವು ಕ್ರಿಯೆಯನ್ನು ನಿಯಂತ್ರಿಸಿದರೆ, ಮಾರ್ಗವನ್ನು ಲಯವು ನಿಯಂತ್ರಿಸುತ್ತದೆ. ಏಕೆಂದರೆ ಇಂತಿಂತಹ ಮಾರ್ಗಕ್ಕೆ ಇಂತಿಂತಹ ಲಯವಿರಬೇಕೆಂದು ಕೆಲವು ಸಂಗೀತಶಾಸ್ತ್ರಗ್ರಂಥಗಳು ವಿಧಿಸುತ್ತವೆ.
ಲಯಪ್ರವೃತ್ತಿ ನಿಯಮವು ಯತಿ ; ಎಂದರೆ ತಾಲದ ಅಂಗಾಂಗಗಳ ನಡುವೆ ಕಾಲಪ್ರಮಾಣವು ಹೇಗೆ ವ್ಯತ್ಯಾಸವಾಗುತ್ತ ನಡೆಯುತ್ತದೆ ಎಂಬದನ್ನು ತಿಳಿಸುವ ಸಂಜ್ಞೆ. ಇದು ಸಮ, ಖರ್ಜೂರಿಕಾ, ಸ್ರೋತೋಗತಾ, ಗೋಪುಚ್ಛ, ಪಿಪೀಲಿಕಾ, ಮೃದಂಗವೆಂದು ಆರು ಬಗೆ. ಇವು ಆಯಾ ಹೆಸರಿಗೆ ತಕ್ಕಂತೆ ತಾಲಾಂಗಗಳ ವಿನ್ಯಾಸದ ಆಕಾರವನ್ನು ಸೂಚಿಸುತ್ತದೆ.
ದೇಶೀತಾಲಗಳ ಕರ್ತವ್ಯ, ಲಕ್ಷಣ ಮೊದಲಾದವುಗಳನ್ನೆಲ್ಲ ವ್ಯಾಪಕವಾಗಿ ಒಳಗೊಂಡು ನಿರೂಪಿಸಲು ಅನುಕೂಲಿಸುವಂತೆ, ಸಾಧನಗಳ ಕಲ್ಪನೆಯನ್ನು ವಿಸ್ತರಿಸಿ ದಶಪ್ರಾಣಗಳ ಕಲ್ಪನೆಯನ್ನು ಪ್ರತಿಪಾದಿಸಲಾಯಿತು. ಸಂಗೀತಸಮಯಸಾರದಲ್ಲಿಯೇ ಇದರ ಮೂಲವು ಕಂಡುಬಂದರೂ, ಇದು (ರಾಗದಶಪ್ರಾಣಗಳಿಂದ ಸ್ಫೂರ್ತಿ ಸಡೆದು) ತಾಳದಶಪ್ರಾಣಗಳೆಂಬ ಸಮಷ್ಟಿ ನಾಮವನ್ನೂ ವ್ಯವಹಾರವನ್ನೂ ಪಡೆದುದು ಹದಿನಾರು-ಹದಿನೇಳನೆಯ ಶತಮಾನಗಳಲ್ಲಿ. ತಾಲದೀಪಿಕೆಯಲ್ಲಿ ತಾಲದಶಪ್ರಾಣಗಳ ಪ್ರಥಮೋಲ್ಲೇಖವೂ ಸಂಗೀತಸೂರ್ಯೋದಯ, ರಸಕೌಮುದೀ, ಸಂಗೀತದರ್ಪಣ, ತಾಲದಶಪ್ರಾಣದೀಪಿಕಾ, ರಾಗತಾಲಚಿಂತಾಮಣಿ ಮುಂತಾದ ಗ್ರಂಥಗಳಲ್ಲಿ ಇವುಗಳ ನಿರೂಪಣೆಯೂ ಕಂಡುಬರುತ್ತವೆ. ಇದು ಹೀಗೆ ಲಕ್ಷ್ಯವ್ಯಪದೇಶವನ್ನು ಪಡೆದು ಸ್ಥಿರಗೊಂಡಿದ್ದು ಕರ್ನಾಟಕದ ಹರಿದಾಸರುಗಳ ಸಂಘಟಿತ, ನಿರಂತರ ಪ್ರಯತ್ನದಿಂದ. ಕಾಲ, ಮಾರ್ಗ, ಕ್ರಿಯಾ, ಅಂಗ; ಜಾತಿ, ಲಯ, ಗ್ರಹ, ಕಲಾ, ಯತಿ, ಪ್ರಸ್ತಾರಗಳೇ ದಶಪ್ರಾಣಗಳು. ಹೀಗೆ ಸಾಧನಗಳಿಗೆ ಕಾಲ, ಅಂಗ, ಜಾತಿ ಮತ್ತು ಪ್ರಸ್ತಾರಗಳನ್ನು ಸೇರಿಸಲಾಯಿತು. ಅಂಗವೆಂದರೆ ತಾಲಾವರ್ತದಲ್ಲಿ ಬರುವ ಅನುದ್ರುತ, ದ್ರುತ ಇತ್ಯಾದಿ ಅಂಗಗಳ ಸಂಖ್ಯೆ ಮತ್ತು ಅನುಕ್ರಮ. ಕಾಲ ಇವುಗಳನ್ನು ನಿರ್ವಹಿಸುವ ವೇಗ; ಜಾತಿಯು ಲಘುವಿನಲ್ಲಿರುವ ಅಕ್ಷರ ಪ್ರಮಾಣ ; ಇದು 3, 4, 5, 7, 9 ರಷ್ಟಿದ್ದರೆ ತ್ರ್ಯಶ್ರ, ಚತುರಶ್ರ, ಖಂಡ, ಮಿಶ್ರ ಮತ್ತು ಸಂಕೀರ್ಣಗಳೆಂಬ ಸಂಜ್ಞೆಗಳನ್ನು ಪಡೆಯುತ್ತದೆ ; ಆದರೆ ದೇಶೀತಾಲಗಳಲ್ಲಿ ಇದು ಚತುರಶ್ರವೆಂಬ ವಿಧದಲ್ಲಿ ಮಾತ್ರ ಉಳಿದುಕೊಂಡಿದೆ. ಪ್ರಸ್ತಾರವು ಒಂದು ತಾಲ ಪ್ರತ್ಯಯ ; ಒಂದು ನಿರ್ದಿಷ್ಟ ಕಾಲ ಪ್ರಮಾಣವನ್ನು ವಿವಿಧ ಅಂಗವಿನ್ಯಾಸಗಳಲ್ಲಿ ಹೇಗೆ ಗಣಿತಶಾಸ್ತ್ರೀಯ ಕ್ರಮದಲ್ಲಿ ಏರ್ಪಡಿಸಬಹುದು ಎಂಬುದನ್ನು ತಿಳಿಸುತ್ತದೆ. ಪ್ರಸ್ತಾರ, ಸಂಖ್ಯೆ, ನಷ್ಟ, ಉದ್ದಿಷ್ಟ, ಏಕದ್ವ್ಯಾದಿಲಗಕ್ರಿಯಾ, ಅಧ್ವಯೋಗ ಎಂಬ ಛಂದಶಾಸ್ತ್ರ ಪ್ರಣೀತ ಷಟ್ ಪ್ರತ್ಯಯಗಳನ್ನು ಸಂಗೀತಶಾಸ್ತ್ರವು ದೇಶೀತಾಲಗಳಿಗೆ ಅನ್ವಯಿಸಿದೆ. ಇದನ್ನು ಪಾರ್ಶ್ವದೇವನು ಸಂಗೀತಶಾಸ್ತ್ರದಲ್ಲಿ ಉದ್ಘಾಟಿಸಿದನು. ತಾಳದಶಪ್ರಾಣಗಳ ವಿವರಪೂರ್ಣ ವಿವೇಚನೆಯನ್ನು ಕರ್ನಾಟಕದಲ್ಲಿ ಕಲೆಗಳು – ಸಂಗೀತ, ನರ್ತನನಿರ್ಣಯದ ವ್ಯಾಖ್ಯಾನ, ಮ್ಯೂಸಿಕ್ ಆಫ್ ದಿ ಮಾಧ್ವ ಮಾಂಕ್ಸ್ ಆಫ್ ಕರ್ನಾಟಕ – ಎಂಬ ನನ್ನ ಗ್ರಂಥಗಳಲ್ಲಿ ಮಾಡಿದ್ದೇನೆ. ಆದರ ಪುನರುಕ್ತಿಯು ಇಲ್ಲಿ ಅನಾವಶ್ಯಕ.
(ಸಂಗ್ರಹ : ಮೈಸೂರು ಸಹೋದರರಲ್ಲಿ ಹಿರಿಯರಾಗಿದ್ದ ವಿದ್ದಾನ್. ರಾ. ಚಂದ್ರಶೇಖರಯ್ಯನವರ “ಚಂದ್ರಶೇಖರ ಕೃತಿರತ್ನ ಮಾಲಾ” – ಪುಸ್ತಕದ ಮುನ್ನುಡಿಯಿಂದ)