ಶ್ಯಾಮಾಶಾಸ್ತ್ರಿ

Shyama Shastry

ಕ್ರಿ. ಶ. ಸುಮಾರು 1781 ನೇ ಇಸವಿ. ತಮಿಳುನಾಡಿನ ಅನೇಕ ಭಾಗಗಳಲ್ಲಿ ಯುದ್ಧ ಮಾಡಲೆಂದು ಹೈದರಾಲಿಯು ತನ್ನ ಬೃಹತ್ ಸೈನ್ಯವನ್ನು ತರುತ್ತಿದ್ದಾನೆಂದೂ, ಹೀಗೆ ಬರುವ ದಾರಿಯಲ್ಲಿ ಸೋಲಿಸಿದ ಭಾಗಗಳನ್ನು ಸರ್ವನಾಶ ಮಾಡಿ, ಜನರನ್ನು ಹಿಂಸಿಸಿ, ಹೀನಾಯವಾಗಿ ಮತಾಂತರಗಳನ್ನೂ ಮಾಡುತ್ತಿದ್ದಾನೆಂಬ ಸುದ್ದಿಯು ಕಾಳ್ಗಿಚ್ಚಿನಂತೆ ಹಬ್ಬುತ್ತಿತ್ತು. ಆ ಸಮಯದಲ್ಲಿ ಶ್ಯಾಮಾಶಾಸ್ತ್ರಿಗಳ ತಂದೆಯವರು ತಂಜಾವೂರು ದೊರೆಯಾದ ತುಳಜಾಜಿಯನ್ನು (1765 – 1787) ಭೇಟಿ ಮಾಡಿ, ತಮ್ಮ ಬಳಿ ಬಂಗಾರು ಕಾಮಾಕ್ಷಿ ದೇವರ ವಿಗ್ರಹವೂ, ದೇವರಿಗೆ ಸಂಬಂಧಿಸಿದ ಆಭರಣಗಳೂ ತಮ್ಮಲ್ಲಿ ಪರಂಪರಾಗತವಾಗಿ ಬಂದಿದ್ದು, ಅವು ತಮ್ಮ ರಕ್ಷಣೆಯಲ್ಲಿ ಇವೆಯೆಂದೂ, ಅದಕ್ಕಾಗಿ ತಮ್ಮ ಕುಟುಂಬಕ್ಕೆ ತಂಜಾವೂರಿನ ಕೋಟೆಯೊಳಗೆ ಇರಲು ಅಪ್ಪಣೆಯನ್ನು ನೀಡಿ, ರಕ್ಷಿಸಬೇಕೆಂದೂ ದೊರೆಯಲ್ಲಿ ಕೋರಿಕೊಂಡು 1781 ಶಾರ್ವರೀ ಸಂವತ್ಸರದಲ್ಲಿ ತಮ್ಮ ಸಂಸಾರದೊಡನೆ ಬಂದು ತಂಜಾವೂರಿನಲ್ಲಿ ನೆಲೆಸಿದರು. ಈ ಸಮಯದಲ್ಲಿ ಮಹಾರಾಜನು ಕೊಂಕಣೀಶ್ವರ ದೇವಾಲಯದಲ್ಲಿ ಐದು ವರ್ಷಗಳ ಕಾಲ ಬಂಗಾರು ಕಾಮಾಕ್ಷೀ ದೇವಿಯ ವಿಗ್ರಹವನ್ನೂ ಮಾತ್ರವಲ್ಲದೆ, ತಿರುವಾರೂರಿನ ದೇವರಾದ ತ್ಯಾಗರಾಜಸ್ವಾಮಿಯ ವಿಗ್ರಹವೂ ಸೇರಿದಂತೆ ಇನ್ನೂ ಅನೇಕಾನೇಕ ದೇವಸ್ಥಾನಗಳಲ್ಲಿ ಇದ್ದ ದೇವರ ವಿಗ್ರಹಗಳನ್ನೆಲ್ಲ ತಂದು ರಕ್ಷಿಸಿ ಇಟ್ಟರೆ, ಇನ್ನೂ ಅನೇಕಾನೇಕ ವೈಷ್ಣವ ದೇವಸ್ಥಾನಗಳಲ್ಲಿದ್ದ ವಿಗ್ರಹಗಳನ್ನು ತಂದು ತಂಜಾವೂರಿನ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿ ತಂದಿಟ್ಟು ರಕ್ಷಿಸಲು ರಾಜನು ವ್ಯವಸ್ಥೆಯನ್ನು ಮಾಡಿದನು. ಹೈದರಾಲಿಯ ಮರಣಾನಂತರ ಆಯಾಯಾ ದೇವಸ್ಥಾನಗಳಲ್ಲಿನ ಆಯಾಯಾ ದೇವತಾ ವಿಗ್ರಹಗಳನ್ನು ಪುನಃ ಪ್ರತಿಷ್ಠಾಪಿಸಲಾಯಿತು. ಮತ್ತೂ ಮೂರು ವರ್ಷಗಳ ಅನಂತರ ಬಂಗಾರು ಕಾಮಾಕ್ಷೀ ದೇವತೆಯ ಪ್ರತಿಷ್ಠೆ ಕುಂಭಾಭಿಷೇಕವು ನಡೆಯುವ ಸಂದರ್ಭದಲ್ಲಿ ಮಹಾರಾಜನು ಶ್ಯಾಮಾಶಾಸ್ತ್ರಿಗಳ ತಂದೆಯವರಿಗೆ ಅನೇಕಾನೇಕ ಭೂಮಿಗಳನ್ನು ದಾನವಾಗಿ ನೀಡಿದನು. ಆನಂತರವೂ ಹಲವು ಕಾಲ ಅವರ ಕುಲದವರೇ ಶ್ರೀ ದೇವರ ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬಂದರು.

ಬಾಲಕನಾಗಿದ್ದ ಶ್ಯಾಮಾಶಾಸ್ತ್ರಿಯವರು ತನ್ನ ಸೋದರಮಾವನವರಿಂದಲೇ ವಿದ್ಯಾಭ್ಯಾಸ ಮಾಡುತ್ತ, ತೆಲುಗು, ಸಂಸ್ಕೃತ, ಸಂಗೀತಗಳಲ್ಲಿ ಪಾಂಡಿತ್ಯವನ್ನು ಗಳಿಸಿದರು. ಶ್ಯಾಮಾಶಾಸ್ತ್ರಿಯವರು 18 ವರ್ಷದ ಯುವಕನಾಗಿದ್ದ ಸಮಯದಲ್ಲಿ ಆಂಧ್ರದಲ್ಲಿ ಮಹಾಪಂಡಿತರೂ ಮಹಾವಿದ್ವಾಂಸರೂ ಆಗಿದ್ದ ಸಂಗೀತಸ್ವಾಮಿ ಎಂಬ ಯತಿವರೇಣ್ಯರೊಬ್ಬರು ಇಡೀ ಭಾರತವನ್ನು ಸಂಚರಿಸುತ್ತ ಸಂಚರಿಸುತ್ತ ಶ್ಯಾಮಾಶಾಸ್ತ್ರಿಯವರು ಇದ್ದ ತಂಜಾವೂರಿಗೂ ಬಂದರು. ಸಂಗೀತಸ್ವಾಮಿ ಎನ್ನುವ ಹೆಸರೇ ಆಶ್ಚರ್ಯಕರವಾದ ಹೆಸರಲ್ಲವೇ? ಅವರಿಗೆ ಏಕೆ ಆ ಹೆಸರೆಂದರೆ ಸಂನ್ಯಾಸಿಯಾಗಿದ್ದರೂ ಆತ ಸಂಗೀತದಲ್ಲಿಯೂ ಮಹಾವಿದ್ವಾಂಸರಾಗಿದ್ದರು. ಆಗ ಚಾತುರ್ಮಾಸ್ಯವಾದ್ದರಿಂದ, ಯತಿಗಳು ಈ ಕಾಲದಲ್ಲಿ ಪ್ರಯಾಣ ಮಾಡಬಾರದೆಂಬ ನಿಯಮಾನುಸಾರವಾಗಿ ಈ ಸಂಗೀತಸ್ವಾಮಿಗಳು ತಂಜಾವೂರಿನಲ್ಲಿಯೇ ತಂಗಿದರು. ಆ ಸಮಯದಲ್ಲಿ ಒಂದು ದಿನ ಶ್ಯಾಮಾಶಾಸ್ತ್ರಿಯವರ ಮನೆಯಲ್ಲಿ ಯತಿಭಿಕ್ಷೆಯ ಸೇವೆಯನ್ನು ಸಂಗೀತಸ್ವಾಮಿಗಳಿಗೆ ಮಾಡಿದರು. ಅವರ ಮನೆಯಲ್ಲಿ ಭಿಕ್ಷೆಯನ್ನು ಸ್ವೀಕರಿಸಿದ ಸಂಗೀತಸ್ವಾಮಿಯವರಿಗೆ ಶ್ಯಾಮಾಶಾಸ್ತ್ರಿಯವರ ವಿದ್ಯೆ, ನಡೆ-ನುಡಿಗಳನ್ನು ನೋಡಿ ಆಶ್ಚರ್ಯವಾಗಿ ಈತ ಮಹಾನ್ ವ್ಯಕ್ತಿಯೂ ವಿದ್ಯಾವಂತನೂ ಭಕ್ತನೂ ಸಂಸ್ಕಾರವಂತನೂ ಆಗಿರುವುದರಲ್ಲಿ ಸಂಶಯವಿಲ್ಲ, ಎಂದು ಆಲೋಚಿಸಿ ಈತನನ್ನು ಅನುಗ್ರಹಿಸಬೇಕು ಎಂದು ತೀರ್ಮಾನ ಮಾಡಿದರು. ಅಂದಿನಿಂದಲೇ ಶ್ಯಾಮಾಶಾಸ್ತ್ರಿಯವರಿಗೆ ಸಂಗೀತಪಾಠವನ್ನು ಮಾಡಲು ಆರಂಭಿಸಿದರು. ತಾಳಶಾಸ್ತ್ರದಲ್ಲಿ ರಾಗಶಾಸ್ತ್ರದಲ್ಲಿ ಅಖಂಡ ಪಂಡಿತರಾಗಿದ್ದ ಸಂಗೀತಸ್ವಾಮಿಗಳು ತಮ್ಮ ಚಾತುರ್ಮಾಸ್ಯ ವ್ರತವು ಮುಗಿಯುವವರೆಗೂ ಎಡೆಬಿಡದೆ ತಮ್ಮ ಶಿಷ್ಯನಿಗೆ ವಿದ್ಯೆಯನ್ನು ಧಾರಾಳವಾಗಿ ಧಾರೆಯೆರೆದರು. ಚಾತುರ್ಮಾಸ್ಯವು ಮುಗಿದಾನಂತರ ಸಂಗೀತಸ್ವಾಮಿಯವರು ಕಾಶಿಗೆ ಹೊರಡುವಾಗ ತನ್ನ ಬಳಿ ಇದ್ದ ಗಾಂಧರ್ವ/ಸಂಗೀತವಿದ್ಯೆಯ ಗ್ರಂಥಗಳನ್ನೆಲ್ಲ ಶ್ಯಾಮಾಶಾಸ್ತ್ರಿಯವರಿಗೆ ನೀಡಿ, “ನೀನೀಗ ಸಂಗೀತಶಾಸ್ತ್ರವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದೀಯ. ಇನ್ನು ಮುಂದೆ ತಂಜಾವೂರು ಆಸ್ಥಾನ ವಿದ್ವಾಂಸರಾದ ಪಚ್ಚಿಮಿರಿಯಂ ಆದಿ ಅಪ್ಪಯ್ಯನವರ ಸಂಗೀತವನ್ನು ಹೆಚ್ಚು ಹೆಚ್ಚು ಕೇಳತ್ತಿರು” – ಎಂದು ಆಜ್ಞಾಪಿಸಿದರು. ತಮ್ಮ ಗುರುಗಳು ಅಪ್ಪಣೆ ಮಾಡಿದ್ದನ್ನೇ ಆದರಿಸಿ, ಮುಂದೆ ಶ್ಯಾಮಾಶಾಸ್ತ್ರಿಯವರು ಪಚ್ಚಿಮಿರಿಯಂ ಆದಿಅಪ್ಪಯ್ಯನವರ ಸ್ನೇಹವನ್ನು ಮಾಡಿಕೊಂಡು ಅವರ ಸಂಗೀತವನ್ನೇ ಕೇಳುತ್ತ, ಅದನ್ನೇ ಆಧರಿಸುತ್ತ ತಮ್ಮ ಸಂಗೀತಜ್ಞಾನ ಸಂಪತ್ತನ್ನೂ, ಅವರ ಮೇಲೆ ಭಕ್ತಿಯನ್ನೂ ಬೆಳೆಸಿಕೊಂಡರು. ಆದಿ ಅಪ್ಪಯ್ಯನವರಿಗೆ ಶ್ಯಾಮಾಶಾಸ್ತ್ರಿಯವರೆಂದರೆ ಅಪರಿಮಿತವಾದ ಪ್ರೇಮ, ಗೌರವಗಳು ಇದ್ದವು. ಆದಿ ಅಪ್ಪಯ್ಯನವರು ಶ್ಯಾಮಾಶಾಸ್ತ್ರಿಯವರನ್ನು ಅತ್ಯಂತ ಪ್ರೀತಿ ಗೌರವಗಳಿಂದ “ಕಾಮಾಕ್ಷಿ” ಎಂದು ಕರೆಯುತ್ತಿದ್ದರಂತೆ!

ಶ್ಯಾಮಾಶಾಸ್ತ್ರಿಯವರ ಜನನ

ಕ್ರಿ.ಶ.1565ರಲ್ಲಿ ಕರ್ಣಾಟ ಸಿಂಹಾಸನವೆಂದು ಪ್ರಖ್ಯಾತವಾಗಿದ್ದ ವಿಜಯನಗರ ಸಾಮ್ರಾಜ್ಯವು ಆದಿಲ್ ಷಾ ಎಂಬ ದೊರೆಯಿಂದ ಮೋಸದಿಂದ ಸೋಲಿಸಲ್ಪಟ್ಟು ನಾಶವಾಗಿಬಿಟ್ಟಿತು. ಅಂದಿನಿಂದ ಶ್ಯಾಮಾಶಾಸ್ತ್ರಿಯವರ ವಂಶದ ಹಿರಿಯರಿಗೆ ಬಹಳ ಕಷ್ಟಕಾರ್ಪಣ್ಯಗಳು ಸಾಲು ಸಾಲಾಗಿ ಬಂದೊದಗಿದವು. ಅವರುಗಳು ಜೀವ ಉಳಿಸಿಕೊಳ್ಳುವ ಸಲುವಾಗಿ ಅನೇಕ ವರ್ಷಗಳ ಕಾಲ ಕಾಡುಮೇಡುಗಳನ್ನು ತಿರುಗುತ್ತ ದಕ್ಷಿಣ ಮಾರ್ಗವಾಗಿ ಬರುತ್ತ ಬರುತ್ತ, ಅಲ್ಲಲ್ಲಿ ನೆಲೆಸುತ್ತ ಕಟ್ಟಕಡೆಗೆ ತಿರುವಾರೂರಿಗೆ ಬಂದು ನೆಲೆಸಿದರು. ಶಂಕರಾಚಾರ್ಯರು ಬಂಗಾರು ಕಾಮಾಕ್ಷಿಯ ಪೂಜೆಗೆಂದು ಅವರ ವಂಶಸ್ಥರನ್ನು ನೇಮಿಸಿದ್ದಿದ್ದರಿಂದ ಆ ದೇವರ ಅಮೂಲ್ಯ ಆಭರಣಗಳನ್ನು ಅವಿತಿಟ್ಟುಕೊಂಡು, ರಕ್ಷಿಸಿಕೊಂಡು, ತಮ್ಮ ಜೊತೆಗೆ ಹೇಗೋ ಸಾಗಿಸಿಕೊಂಡು ಬಂದರು.

ತಿರುವಾರೂರಿಗೆ ಬಂದ ಮೇಲೆ ಒಂದು ಅಗ್ರಹಾರದಲ್ಲಿ ಒಂದು ಮನೆಯಲ್ಲಿ ನೆಲೆಸಿ ಬಂಗಾರು ಕಾಮಾಕ್ಷಿಯ ಅರ್ಚನಾದಿಗಳನ್ನು ಮಾಡಿಕೊಳ್ಳುತ್ತ ಬಂದರು. ಹೀಗೇ ಅವರ ವಂಶವು ಮುಂದುವರೆಯುತ್ತ ಬಂದಾಗ ಆ ವಂಶದ ವೆಂಕಟಾದ್ರಿ ಅಯ್ಯರ್ ಎಂಬುವವರ ಪುತ್ರ ವಿಶ್ವನಾಥ ಅಯ್ಯರ್ ಅವರನ್ನೂ ಅವರ ಪತ್ನಿಯವರನ್ನೂ ಮುಂದಿನ ಬೀದಿಯಲ್ಲಿದ್ದ ಒಬ್ಬರು ತಾವು ಪ್ರತಿ ಶನಿವಾರವೂ ತಿರುಪತಿ ಶ್ರೀನಿವಾಸನ ಹೆಸರಿನಲ್ಲಿ ಅನ್ನಸಂತರ್ಪಣೆಯನ್ನು ಮಾಡುತ್ತಿರುವುದಾಗಿಯೂ, ತಾವುಗಳೂ ಭಗವದ್ಭಕ್ತರಾದ್ದರಿಂದ ಅನ್ನಸಂತರ್ಪಣೆಗೆ ಬಂದು ಶ್ರೀವಾರಿ ಪ್ರಸಾದನವನ್ನು ಸ್ವೀಕರಿಸಬೇಕಾಗಿಯೂ ಆಹ್ವಾನಿಸಿದರು.

ಆ ಶನಿವಾರದಂದು ವಿಶ್ವನಾಥ ಅಯ್ಯರ್ ದಂಪತಿಗಳು ತಮಗಿತ್ತ ಆಹ್ವಾನದ ಮೇರೆಗೆ ತಿರುಪತಿ ಶ್ರೀನಿವಾಸ ದೇವರ ಪೂಜೆಗೆ ತಮ್ಮನ್ನು ಆಹ್ವಾನಿಸಿದವರ ಮನೆಗೆ ಹೋದರು. ಅಲ್ಲಿ ಪೂಜೆಯು ಸಾಂಗವಾಗಿ ನಡೆಯುವಾಗ ನೆರೆದಿದ್ದ ಭಕ್ತರೊಬ್ಬರ ಮೇಲೆ ಶ್ರೀನಿವಾಸ ದೇವರೇ ಆವಿರ್ಭಾವವಾಗಿಬಿಟ್ಟರಂತೆ! ಆ ಭಕ್ತರ ಬಾಯಿಯ ಮೂಲಕ ಶ್ರೀನಿವಾಸ ದೇವರು – ವಿಶ್ವನಾಥ ಅಯ್ಯರ್ ಅವರ ಪತ್ನಿಯನ್ನು ಕರೆದು ಆಕೆಗೆ ಮುಂದಿನ ವರ್ಷದ ಚೈತ್ರಮಾಸದಲ್ಲಿ ಕೃತ್ತಿಕಾ ನಕ್ಷತ್ರ ಬರುವ ಒಂದು ಶನಿವಾರ ಒಂದು ಗಂಡು ಮಗುವು ತನ್ನ ಆಶೀರ್ವಾದದಿಂದ ಜನಿಸುತ್ತದೆಂದೂ, ಅದಕ್ಕಾಗಿ ನೂರು ಜನ ಮಂದಿ ಬಡವರಿಗೆ ಊಟ ಹಾಕಬೇಕೆಂದೂ ಅಪ್ಪಣೆ ಮಾಡಿತಂತೆ! ಆ ದಂಪತಿಗಳು ಅದೇ ರೀತಿಯಲ್ಲಿ ನೂರು ಮಂದಿ ಬಡವರಿಗೆ ಊಟ ಅನ್ನಸಂತರ್ಪಣೆಯನ್ನು ಮಾಡಿ ಶ್ರೀದೇವರನ್ನು ಪೂಜಿಸಿದರು. ಆನಂತರ ದೇವರು ಅಪ್ಪಣೆ ಕೊಡಿಸಿದಂತೆಯೇ ಮುಂದಿನ ವರುಷ ಒಂದು ಗಂಡು ಸಂತಾನವನ್ನು ಪಡೆದರು. ವೆಂಕಟೇಶ್ವರನ ದಯೆಯಿಂದ ಈ ಮಗುವು ಜನಿಸಿದ್ದರಿಂದ ಮಗುವಿಗೆ ವೆಂಕಟಸುಬ್ರಹ್ಮಣ್ಯಂ ಎಂದು ಹೆಸರಿಟ್ಟರು. ಮಗುವನ್ನು ಬಲು ಮುದ್ದಿನಿಂದ ಶ್ಯಾಮಕೃಷ್ಣ ಎಂದು ಕರೆದರು. ಈ ಶ್ಯಾಮಕೃಷ್ಣ ಎಂಬ ಹೆಸರೇ ಮುಂದೆ ಶ್ಯಾಮಾಶಾಸ್ತ್ರಿಯವರ ಕೀರ್ತನೆಗಳಿಗೆ ಅಂಕಿತವಾಗಿ ಪರಿಣಮಿಸಿತು. ಶ್ಯಾಮಾಶಾಸ್ತ್ರಿಯವರು ಬಹಳ ಬುದ್ಧಿಶಾಲಿಗಳಾಗಿ, ಬ್ರಹ್ಮ ತೇಜಸ್ಸಿನೊಡನೆ, ಬಹಳ ವಿದ್ಯಾವಂತರಾಗಿ, ಸಜ್ಜನರಾಗಿ, ಸಂಸ್ಕಾರವಂತರಾಗಿ ಬೆಳೆದರು.

ಶ್ಯಾಮಾಶಾಸ್ತ್ರಿಯವರ ನವರತ್ನಮಾಲಿಕಾ ಕೃತಿಗಳು

ಒಮ್ಮೆ ಶ್ಯಾಮಾಶಾಸ್ತ್ರಿಯವರನ್ನು ಅವರ ಪರಿಚಿತರೊಬ್ಬರು ಒತ್ತಾಯ ಮಾಡಿ ಪುದುಕ್ಕೋಟೈಗೆ ಬಂದೇ ಬರಬೇಕು ಎಂದು ಆಗ್ರಹ ಪಡಿಸಿದರಂತೆ. ಶಾಸ್ತ್ರಿಯವರು ಅವರ ಕೋರಿಕೆ ಮೇರೆಗೆ ಪುದುಕ್ಕೋಟೈಗೆ ಹೋದಾಗ ಅಲ್ಲಿ ಯಾರೋ ಒಬ್ಬ ಕಾಂತಿಯುಕ್ತನಾದ ಅಪರಿಚಿತ ವ್ಯಕ್ತಿ ಆವರ ಸಮೀಪಕ್ಕೆ ಬಂದು – “ಅಯ್ಯಾ, ನೀವು ಶ್ರೀವಿದ್ಯಾ ದೀಕ್ಷೆಯನ್ನು ಪಡೆದವರು. ಕಾಮಾಕ್ಷಿಯ ಭಕ್ತರು. ದಯವಿಟ್ಟು ನೀವು ಮಧುರೆಯ ಮೀನಾಕ್ಷೀ ಅಮ್ಮನವರ ಸನ್ನಿಧಾನಕ್ಕೆ ಹೋಗಿ ಕೀರ್ತನೆಗಳನ್ನು ರಚಿಸಿ ಆಕೆಯನ್ನು ಸ್ತುತಿಸಿ. ಆ ಮಾತೆಯು ನಿಮ್ಮ ಕೀರ್ತನೆಗಳಿಗಾಗಿ ಕಾಯುತ್ತಿದ್ದಾಳೆ!” ಎಂದನಂತೆ. ಶ್ಯಾಮಾಶಾಸ್ತ್ರಿಯವರಿಗೆ ಬಹಳ ಆಶ್ಚರ್ಯವಾದರೂ, ಇದು ಮಧುರೆಯ ಮೀನಾಕ್ಷೀ ಅಮ್ಮನವರದೇ ಅಪ್ಪಣೆ ಎಂದು ಭಾವಿಸಿ ಕುಂಭಕೋಣಂನಿಂದ ನೇರವಾಗಿ ಮಧುರೆಗೆ ಹೋಗಿ ಅಲ್ಲಿ ಒಂಬತ್ತು ಕೀರ್ತನೆಗಳನ್ನು ದೇಗುಲದಲ್ಲಿ ರಚಿಸಿ, ಹಾಡಿ ಸ್ತುತಿಸಿದರಂತೆ. ಈ ಕೃತಿಗಳ ಮಾಲಿಕೆಗೆ ನವರತ್ನ – ಮಾಲಿಕಾ ಎಂದು ಹೆಸರು. ಅಲ್ಲಿನ ದೇವಳದ ಅರ್ಚಕ ವೃಂದಕ್ಕೆ ಬಹಳ ಸಂತೋಷವಾಯಿತು. ‘ಆ ತಾಯಿಯೇ ನಿಮ್ಮನ್ನು ಇಲ್ಲಿ ಕರೆಸಿದ್ದು. ನೀವು ಹಾಡಿದ್ದು ಆಕೆಗೆ ಮಹದಾನಂದವಾಗಿದೆ’ – ಎಂದು ಹೇಳಿ, ದೇವರ ಮೇಲಿದ್ದ ವಸ್ತ್ರವನ್ನೇ ಶಾಸ್ತ್ರೀಯವರಿಗೆ ಹೊದಿಸಿ ಸನ್ಮಾನ ಮಾಡಿ ಗೌರವಿಸಿದರಂತೆ. ಈ ನವರತ್ನ – ಮಾಲಿಕಾ ಕೃತಿಗಳಲ್ಲಿ ಒಂದು ಯಾವುದು ಗೊತ್ತೇ? ಬಹಳ ರೂಢಿಯಲ್ಲಿ ಇರುವ, ಶಂಕರಾಭರಣ ರಾಗದ, ಆದಿತಾಳದ “ಸರೋಜದಳ ನೇತ್ರಿ”.

ಪಲ್ಲವಿ ಪಂಥ

ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ಯಾಮಾಶಾಸ್ತ್ರಿಯವರು ತಂಜಾವೂರು ಆಸ್ಥಾನದಲ್ಲಿದ್ದ ಕಾಲದಲ್ಲಿ ತಂಜಾವೂರನ್ನು ಆಳುತ್ತಿದ್ದುದು ಶರಭೋಜಿ ಮಹಾರಾಜ. ಆತನೂ ಬಹಳ ದೊಡ್ಡ ವಿದ್ವಾಂಸನಾಗಿದ್ದು ಅನೇಕ ಗ್ರಂಥಗಳನ್ನೂ, ಯಕ್ಷಗಾನಗಳನ್ನೂ ರಚಿಸಿದ್ದಾನೆ. ಹಿಂದೆಲ್ಲ ಎಲ್ಲ ರಾಜ – ಮಹಾರಾಜರುಗಳೂ ತಮ್ಮ ಆಸ್ಥಾನದಲ್ಲಿ ಎಲ್ಲ ವಿದ್ಯೆಗಳ ದೊಡ್ಡ ದೊಡ್ಡ ವಿದ್ವಾಂಸರುಗಳನ್ನು ಪ್ರೋತ್ಸಾಹಿಸಿ ಪೋಷಿಸುತ್ತಿದ್ದರು. ಮಾತ್ರವಲ್ಲದೆ ತಾವೂ ವಿದ್ಯೆಯನ್ನು ಕಲಿತು ವಿದ್ವಾಂಸರಾಗಿರುತ್ತಿದ್ದರು. ಇದರಿಂದ ಅವರ ದೇಶಗಳ ಮರ್ಯಾದೆ ಹೆಚ್ಚುತ್ತಿತ್ತು. ಇಲ್ಲವಾದಲ್ಲಿ ಯುದ್ಧ ಮಾಡದೆಯೇ ಬರೇ ವಿದ್ಯೆಗಳ ಪಂಥಗಳಿಂದಲೇ ಒಂದು ದೇಶವು ಇನ್ನೊಂದು ದೇಶಕ್ಕೆ ಸೋತು ಅಧೀನವಾಗುವ ಪರಿಸ್ಥಿತಿಗಳು ಎದುರಾಗುತ್ತಿದ್ದವು.

ಇಂತಹ ಈ ಕಾಲದಲ್ಲಿ ಬೊಬ್ಬಿಲಿ ಎಂಬ ಆಂಧ್ರದೇಶದ ಹಳ್ಳಿಯೊಂದು ಸಂಗೀತಕ್ಕೇ ಹೆಸರಾಂತ ಗ್ರಾಮವಾಗಿತ್ತು. ಇಲ್ಲಿನ ಬೊಬ್ಬಿಲಿ ಕೇಶವಯ್ಯ ಎಂಬ ಹಿರಿಯ ಮಹಾಸಂಗೀತ ವಿದ್ವಾಂಸರೊಬ್ಬರು ಅನೇಕ ದೇಶಗಳನ್ನೆಲ್ಲ ಸಂಚಾರ ಮಾಡಿ, ಅಲ್ಲಿದ್ದ ಅನೇಕಾನೇಕ ವಿದ್ವಾಂಸರುಗಳನ್ನು ಸಂಗೀತದ ಪಂಥಕ್ಕೆ ಆಹ್ವಾನ ಮಾಡಿ, ಅಲ್ಲಿನವರನ್ನೆಲ್ಲ ಸೋಲಿಸಿ ಧನ-ಕನಕ-ಖಿಲ್ಲತ್ತುಗಳನ್ನು ಪಡೆಯುತ್ತಿದ್ದರು. ಈತನಿಗೆ ಭೂಲೋಕ ಚಾಪ ಚುಟ್ಟಿ (ಎಂದರೆ ಭೂಮಿಯನ್ನೇ ಚಾಪೆಯಂತೆ ಸುತ್ತಿ ಇಡಬಲ್ಲ ಮಹಾಸಮರ್ಥ ಎಂದು ಅರ್ಥ) ಎಂಬ ಕೀರ್ತಿ ಇತ್ತು! ಇಂತಹ ಬೊಬ್ಬಿಲಿ ಕೇಶವಯ್ಯನವರು ತಂಜಾವೂರು ಸಂಸ್ಥಾನದ ಶರಭೋಜಿ ಮಹಾರಾಜರ ಆಸ್ಥಾನಕ್ಕೂ ಬಂದು ಮಹಾರಾಜರಿಗೆ ತಮ್ಮ ಸವಾಲು ಪತ್ರವನ್ನು ಸಲ್ಲಿಸಿದರು. ಕೇಶವಯ್ಯನವರ ಕೋರಿಕೆಯಂತೆ ಪಂದ್ಯದ ದಿನವೂ ನಿಶ್ಚಯವಾಯಿತು. ಆಗ ತಂಜಾವೂರು ಸಂಸ್ಥಾನದಲ್ಲಿ ಅನೇಕಾನೇಕ ಹಿರಿಯ ಮಹಾವಿದ್ವಂಸರುಗಳೇ ಇದ್ದರೂ ಈ ಕೇಶವಯ್ಯನವರ ಜಬರುದಸ್ತು, ಅವರ ವಿಶಾಲವಾದ ಕೀರ್ತಿ, ಬೇರೆಡೆ ಆತ ಗೆದ್ದು, ಗೆದ್ದಿದ್ದ ಆಯಾ ವಿದ್ವಾಂಸರುಗಳಿಂದ ಕಸಿದುಕೊಂಡಿದ್ದ ತಂಬೂರಿಗಳ ಭಂಡಾರ – ಇತ್ಯಾದಿ ವಿಷಯಗಳನ್ನೆಲ್ಲ ಕೇಳಿ ಬೆಕ್ಕಸ ಬೆರಗಾಗಿ, ತಂಜಾವೂರು ಆಸ್ಥಾನ ವಿದ್ವಾಂಸರುಗಳು ತಾವು ಸೋತುಬಿಟ್ಟರೆ ಗತಿಯೇನು ಎಂದು ಹೆದರಿ ಹೋದರು. ಕಡೆಗೆ ಈ ವಿದ್ವಾಂಸರೆಲ್ಲ ಒಟ್ಟುಗೂಡಿ ತಮ್ಮ ತಂಜಾವೂರಿನ ಆಸ್ಥಾನದ ಗೌರವವನ್ನು ಹೇಗಾದರೂ ಉಳಿಸಬೇಕು ಎಂದು ನಿಶ್ಚಯಿಸಿ ಶ್ಯಾಮಾಶಾಸ್ತ್ರಿಯವರ ಮನೆಗೆ ಹೋಗಿ ಅವರ ಮೊರೆ ಹೊಕ್ಕರು. ಧನದ ಹಾಗೂ ಕೀರ್ತಿಯ ಆಸೆಯಿಂದ ದೂರವಾಗಿದ್ದು, ಸಂಗೀತಕಲೆಯನ್ನು ತಪಸ್ಸಿನಂತೆ ಆಚರಿಸುತ್ತಿದ್ದ ಶ್ಯಾಮಾಶಾಸ್ತ್ರಿಯವರು ಈ ಪಂಥವನ್ನು ಎದುರಿಸಲು ಒಪ್ಪಿಗೆ ನೀಡಿ ತಮ್ಮ ಆರಾಧ್ಯ ದೈವವಾದ ಬಂಗಾರು ಕಾಮಾಕ್ಷಿಯನ್ನು ಉಪಾಸನೆಯಿಂದ ಆರಾಧಿಸಿ, ಪಂಥದಲ್ಲಿ ಭಾಗವಹಿಸುತ್ತಿರುವ ತಮಗೆ ಸರಿಯಾದ ಬುದ್ಧಿಶಕ್ತಿಯನ್ನು, ಕಂಠಶಕ್ತಿಯನ್ನೂ ನೀಡಿ, ತಮ್ಮ ರಾಜ್ಯದ ಸಂಗೀತ ಕಲಾಗೌರವದ ಪ್ರತಿಷ್ಠೆ, ಘನತೆಗಳನ್ನು ಕಾಪಾಡುವಂತೆ ಶಕ್ತಿಯನ್ನು ನೀಡಬೇಕೆಂದು ಪ್ರಾರ್ಥಿಸಿದರು.

ಮುಂದೆ, ಗೊತ್ತಾದ ವೇಳೆಗೆ ದೊಡ್ಡದಾಗಿ ರಾಜಸಭೆ ಸೇರಿತು. ಬೊಬ್ಬಿಲಿ ಕೇಶವಯ್ಯನವರ ಎದುರು ಶ್ಯಾಮಾಶಾಸ್ತ್ರಿಯವರು ಹಾಡುತ್ತಿದ್ದಾರೆಂಬ ಸುದ್ದಿಯು ಸಾಕಷ್ಟು ಹಬ್ಬಿ ಈ ಸಂಗೀತಪಂಥವನ್ನು ನೋಡಲು ಅನೇಕಾನೇಕ ರಾಜ್ಯಗಳಿಂದ ಹಿರಿಯ ಸಂಗೀತ ವಿದ್ವಾಂಸರುಗಳು ಬಂದು ಸೇರಿದರು. ಮಹಾರಾಜರು ಈ ಪಂದ್ಯದಲ್ಲಿ ಜಯಶೀಲರಾದ ವಿದ್ವಾಂಸರಿಗೆ ಅರ್ಪಿಸಲೆಂದು ಅನರ್ಘ್ಯವಾದ ಪಾರಿತೋಷಕಗಳನ್ನು ಚಿನ್ನದ ಹರಿವಾಣದಲ್ಲಿ ಪ್ರದರ್ಶಿಸಿ ಇಟ್ಟಿದ್ದರು. ಎಲ್ಲ ವಿದ್ವಾಂಸರಿಗೂ ತಮ್ಮ ರಾಜ್ಯದ ಗೌರವವು ಏನಾಗುತ್ತದೋ? ತಮ್ಮ ತಂಬೂರಿಗಳನ್ನೆಲ್ಲ ಕೇಶವಯ್ಯನವರಿಗೆ ನೀಡಬೇಕಾಗಿ ಬಂದುಬಿಡುತ್ತದೋ ಏನೋ? ತಮ್ಮ ಗೌರವವೆಲ್ಲ ಮಣ್ಣು ಪಾಲಾಗುತ್ತದೋ ಏನೋ? – ಇತ್ಯಾದಿ ಚಿಂತೆಗಳು ಅವರನ್ನು ಆವರಿಸಿದ್ದವು. ಏಕೆಂದರೆ ವಿದ್ಯೆಯಲ್ಲಿ ವಿದ್ವಾಂಸರು ಸೋತರೆ, ಯುದ್ಧವೇ ನಡೆಯದೆ ಆ ರಾಜ್ಯದ ಸೋಲಿಗೆ ವಿದ್ವಾಂಸರುಗಳೇ ಕಾರಣರಾಗುವಂತಹುದು ಹೆಚ್ಚು ಅಪಮಾನಕರವಾಗಿತ್ತು.

ಪಂಥದ ಸಮಯವು ಬಂದಿತು. ಆರಂಭದ ಸೂಚನೆಯು ದೊರೆತ ಕೂಡಲೇ ಸಂಗೀತಪಂದ್ಯವು ಆರಂಭವಾಗಿ ಮಹಾವಿದ್ವಾಂಸರಾಗಿದ್ದ ಬೊಬ್ಬಿಲಿ ಕೇಶವಯ್ಯನವರ ಗಾಯನವು ಆರಂಭವಾಯಿತು. ಕೇಶವಯ್ಯನವರು ಅವರ ಗಾಯನದ ಪಂಥಕ್ಕೆ 128 ಅಕ್ಷರಗಳ ಬೃಹತ್ತಾದ ಸಿಂದನಂದನವೆಂಬ ದೇಶೀ ತಾಳದ ಪಲ್ಲವಿಯನ್ನು ಆರಿಸಿಕೊಂಡಿದ್ದರು. ಕಚೇರಿ/ವಿನಿಕೆಯು ದಿವ್ಯವಾಗಿ ಆರಂಭವಾಯಿತು. ಪಲ್ಲವಿಯ ಆಲಾಪನೆಯು ಆರಂಭವಾಗಿ, ಆತನು ತನ್ನ ಜೀವಮಾನದಲ್ಲಿ ಗಳಿಸಿದ್ದ ವಿದ್ಯೆ, ಮನೋಧರ್ಮಗಳನ್ನೆಲ್ಲ ಪ್ರಯೋಗಿಸಿ, ಗತಿಜಾತಿಗ್ರಹಬೇಧಗಳನ್ನೆಲ್ಲ ಪ್ರಯೋಗಿಸಿ, ರಾಗಾಲಾಪ, ತಾನದ ಗಾಯನವನ್ನು ತನ್ನ ಮನೋಧರ್ಮ ಚಾತುರ್ಯದಿಂದ ಪ್ರದರ್ಶಿಸಿ ಜಮಾವಟ್ಟಿನಿಂದ ತ್ರಿಕಾಲಗಳಲ್ಲಿ ಪಲ್ಲವಿಯನ್ನು ಹಾಡಿ, ನೆರವಲ್ ಹಾಡಿ, ಸ್ವರ ಪ್ರಸ್ತಾರವನ್ನು ವಿಸ್ತಾರವಾಗಿ ಅನೇಕ ಲೆಕ್ಕಾಚಾರಗಳ ಸಮೇತನಾಗಿ ಮಾಡಿ ಅಲ್ಲಿನ ವಿದ್ವಜ್ಜನರನ್ನೆಲ್ಲ ಬೆರಗುಗೊಳಿಸಿದ್ದಲ್ಲದೆ ಅತ್ಯಂತ ಭಯವನ್ನೂ ಉಂಟುಮಾಡಿದರು. ಕಚೇರಿ ಮುಗಿಸಿ ಆಸ್ಥಾನವನ್ನು ಒಮ್ಮೆ ಸಿಂಹಾವಲೋಕನ ಮಾಡಿ ತಮಗೆ ಯಾರಾದರೂ ಎದುರಾಳಿಗಳು ಇದ್ದಾರೆಯೇ ಎಂದು ಗರ್ವದಿಂದಲೇ ನೋಡಿದರು.

ಈಗ ಶ್ಯಾಮಾಶಾಸ್ತ್ರಿಯವರ ಗಾಯನ ಸರದಿ. ಅಹಂಕಾರಗಳಿಂದ, ಕೀರ್ತಿಕಾಮನೆಯಿಂದ ದೂರರಾದ ಶ್ಯಾಮಾಶಾಸ್ತ್ರಿಯವರು ತಮ್ಮ ಇಷ್ಟ ಹಾಗೂ ಕುಲದೈವವಾದ ಬಂಗಾರು ಕಾಮಾಕ್ಷಿಯನ್ನು ಅನನ್ಯವಾಗಿ ಭಕ್ತಿಯಿಂದ ಪ್ರಾರ್ಥಿಸಿ, ಆಕೆಯೇ ಸಂಗೀತಸರಸ್ವತಿಯಾಗಿ ತನ್ನ ನಾಲಿಗೆಯ ಮೇಲೆ ನಲಿದು ತನ್ನ ರಾಜ್ಯವನ್ನು ಅವಮರ್ಯಾದೆಯಿಂದ ರಕ್ಷಿಸಬೇಕೆಂದು ಪ್ರಾರ್ಥಿಸಿ ತಮ್ಮ ದೈವಿಕವಾದ ಗಾಯನವನ್ನು ಆರಂಭಿಸಿದರು. ಮೊದಲು ಬೊಬ್ಬಿಲಿ ಕೇಶವಯ್ಯನವರು ಹಾಡಿದ ಸಿಂಹನಂದನಪಲ್ಲವಿಯನ್ನು ಲೀಲಾಜಾಲವಾಗಿ, ಅತ್ಯಂತ ಮಧುರವಾಗಿ, ಶೋಭೆಯಿಂದ ಹಾಡಿದ್ದು ಮಾತ್ರವಲ್ಲದೆ, ಸಿಂಹಕ್ಕಿಂತಲೂ ಬಲಶಾಲಿ ಪ್ರಾಣಿ ಎಂದು ಪುರಾಣಗಳಲ್ಲಿ ಉಲ್ಲೇಖವಾದ ಶರಭ ಎಂಬ ಹೆಸರಿನ ಪ್ರಾಚೀನ ಪ್ರಾಣಿಯ ಹೆಸರನ್ನು ಉಪಯೋಗಿಸಿ ಶರಭನಂದನ ಎಂಬ 79 ಅಕ್ಷರಗಳ ದೇಶೀ ತಾಳವನ್ನು ಆಗಿಂದಾಗ್ಗೆ ಸೃಜಿಸಿ ಅದರಲ್ಲಿಯೂ ಲೀಲಾಜಾಲವಾಗಿ ರಾಗ ತಾನ ಪಲ್ಲವಿಗಳನ್ನು ಎಷ್ಟೋ ದಿನಗಳು ನಿರಂತರವಾಗಿ ಅಭ್ಯಾಸವನ್ನು ಮಾಡುತ್ತಿದ್ದರೇನೋ ಎಂಬಂತೆ, ನಿರರ್ಗಳವಾಗಿ ಗಾಯನ ಮಾಡಿಬಿಟ್ಟರು! 79 ಎಂಬುದು ಯಾವುದರಿಂದಲೂ ಭಾಗವಾಗದ ಸಂಖ್ಯೆ! ಅದು ಮಾತ್ರವಲ್ಲದೆ ಅದರಲ್ಲಿ ಅಂದಿಗೆ ರೂಢಿಯಿಂದ ತಪ್ಪಿಹೋಗಿದ್ದ ವಿರಾಮ ಎಂಬ ಅಂಗವನ್ನೂ ಆ ಶರಭನಂದನ ತಾಳವು ಹೊಂದಿದ್ದು ಬಹಳ ಬಹಳ ಕಠಿಣವಾದ ತಾಳವಾಗಿತ್ತು! ಅಂತಹುದನ್ನು ಅವರು ಸೃಜಿಸಿ ಲೀಲಾಜಾಲವಾಗಿ ಮನೋಧರ್ಮಯುಕ್ತವಾಗಿ ಹಾಡಿದ್ದನ್ನು ನೋಡಿ ಮಹಾರಾಜರೂ, ನೆರೆದ ವಿದ್ವಾಂಸರೂ, ಸಭಿಕರೂ ಬೆರಗಾಗಿ ಬಿಟ್ಟರು. ಜೊತೆಗೆ ತಮ್ಮ ರಾಜ್ಯದ ಗೌರವವು ಮುಕ್ಕಾಗಲಿಲ್ಲವಲ್ಲ ಎಂಬ ಸಮಾಧಾನದ ನಿಟ್ಟುಸಿರನ್ನೂ ಬಿಟ್ಟರು. ಕೇಳಿ ದಂಗುವಡೆದಿದ್ದ ಬೊಬ್ಬಿಲಿ ಕೇಶವಯ್ಯನವರು ಶ್ಯಾಮಾಶಾಸ್ತ್ರಿಯವರಿಗೆ ಉದ್ದಂಡವಾಗಿ ಸಾಷ್ಟಾಂಗ ನಮಸ್ಕಾರವನ್ನು ಮಾಡಿ, ತಾವು ಸೋತವೆಂದೂ, ತಾವು ಗೆದ್ದ ತಂಬೂರಿ. ಖಿಲ್ಲತ್ತು. ರಾಜಗೌರವಗಳೆಲ್ಲ ಇನ್ನು ಮುಂದೆ ಶ್ಯಾಮಾಶಾಸ್ತ್ರಿಯವರದ್ದೆಂದೂ, ತಾವು ಇನ್ನು ಮುಂದೆ ಶ್ಯಾಮಾಶಾಸ್ತ್ರಿಯವರ ಶಿಷ್ಯರಾಗಿ ಇದ್ದು ಸೇವೆ ಮಾಡಿಕೊಂಡು ಇರುತ್ತೇವೆಂದೂ, ತಮ್ಮನ್ನು ಶಿಷ್ಯನನ್ನಾಗಿ ಪರಿಗ್ರಹಿಸಬೇಕೆಂದೂ ಪ್ರಾರ್ಥಿಸಿದರು. ಆಗ ಶ್ಯಾಮಾಶಾಸ್ತ್ರಿಯವರು ವಿದ್ಯೆಗೆ ವಿನಯವೇ ಭೂಷಣವೆಂದು ಕೇಶವಯ್ಯನವರಿಗೆ ಬೋಧಿಸಿ, ಆತನೂ ಮಹಾವಿದ್ವಾಂಸನಾದ್ದರಿಂದ ಆತನನ್ನು ಸಮ್ಮಾನಿಸಬೇಕೆಂದು ಮಹಾರಾಜನಲ್ಲಿ ಪ್ರಾರ್ಥಿಸಿಕೊಂಡರು. ಮಹಾರಾಜನು ಆ ಇಬ್ಬರು ವಿದ್ವಾಂಸರುಗಳಿಗೂ ಹಿರಿದಾದ ಪಾರಿತೋಷಕಗಳನ್ನು ಇತ್ತು ಗೌರವಿಸಿದನು. ಇಂದಿಗೂ ತಂಜಾವೂರು ಬೃಹದೀಶ್ವರ ದೇವಸ್ಥಾನದ ಬಳಿಯ ಅಗ್ರಹಾರದಲ್ಲಿ ಪೂಜ್ಯ ಶ್ಯಾಮಾಶಾಸ್ತ್ರಿಯವರ ಮನೆ ಇದೆ.

ಜ್ಯೋತಿಷ್ಯದ ಉದ್ದಾಮಪಂಡಿತ

ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ಯಾಮಾಶಾಸ್ತ್ರಿಯವರು ಸಂಗೀತದಲ್ಲಿ ಮಾತ್ರವಲ್ಲದೆ ಜ್ಯೋತಿಷ್ಯದಲ್ಲೂ ಉದ್ದಾಮ ಪಂಡಿತರಾಗಿದ್ದರು. ಮುಖ ನೋಡಿದೊಡನೆ ಆಗಂತುಕ ವ್ಯಕ್ತಿಯದ್ದೇ ಆದರೂ ಅವರ ಭವಿಷ್ಯವನ್ನು ಹೇಳುತ್ತಿದ್ದರಂತೆ! ಇದು ಅವರಿಗೆ ಬಂಗಾರು ಕಾಮಾಕ್ಷಿಯಿಂದ ಅನುಗ್ರಹವಾದ ವಿದ್ಯೆ. ಶ್ಯಾಮಾಶಾಸ್ತ್ರಿಯವರಿಗೆ ಪಂಜು ಶಾಸ್ತ್ರಿ ಹಾಗೂ ಸುಬ್ಬರಾಯ ಶಾಸ್ತ್ರಿ ಎಂಬ ಇಬ್ಬರು ಗಂಡುಮಕ್ಕಳೂ ಮತ್ತು ಅನೇಕ ಶಿಷ್ಯರೂ ಇದ್ದರು. ಒಂದು ದಿನ ಈ ಎಲ್ಲರನ್ನೂ ಶ್ಯಾಮಾಶಾಸ್ತ್ರಿಯವರು ಕರೆದು ತನ್ನ ಪತ್ನಿಯು ಮುಂದೆ ಇಷ್ಟು ದಿನಗಳಲ್ಲಿ ಬಂಗಾರು ಕಾಮಾಕ್ಷಿಯ ಪಾದಾರವಿಂದವನ್ನು ಸೇರುತ್ತಾಳೆಂದೂ, ಆಕೆ ಪರಂಧಾಮವನ್ನೈದಿದ ಐದು ದಿನಗಳಲ್ಲೇ ತಾನೂ ಭಗವತಿಯ ಪಾದವನ್ನು ಸೇರುತ್ತೇನೆಂದೂ ಭವಿಷ್ಯವನ್ನು ನುಡಿದರು. ಅವರ ಮಕ್ಕಳು ಶಿಷ್ಯರಾದಿಯಾಗಿ ಎಲ್ಲರೂ ಬಹಳ ದುಃಖಿಸಿದಾಗ ಅವರಿಗೆ ಹಲವಾರು ವೇದಾಂತ ತತ್ತ್ವಗಳನ್ನು ಬೋಧಿಸಿ ಅವರನೆಲ್ಲ ಮಾನಸಿಕವಾಗಿ ಸಿದ್ಧಪಡಿಸಿದರು. ಶ್ಯಾಮಾಶಾಸ್ತ್ರಿಯವರು ಭವಿಷ್ಯ ನುಡಿದಂತೆಯೇ ಆಯಿತು! ತಮ್ಮೆದುರೇ ತಮ್ಮ ಪತ್ನಿಯವರನ್ನು ಪರಂಧಾಮಕ್ಕೆ ಕಳುಹಿಸಿ, ಅದಾದ ಐದು ದಿನಗಳ ಅನಂತರ ಎಂದರೆ ಕ್ರಿ. ಶ. 1827 ರ ವ್ಯಯ ಸಂವತ್ಸರದ ಶುಕ್ಲದಶಮಿಯ ದಿನದಂದು ಬಂಗಾರು ಕಾಮಾಕ್ಷಿಯನ್ನು ಕುರಿತಾದ ತಮ್ಮ ಭೈರವಿ ಸ್ವರಜತಿಯನ್ನು ಹಾಡುತ್ತ ಹಾಡುತ್ತ ತಾವೂ ಪರಂಧಾಮವನ್ನೈದಿದರು.

ಅಪ್ಪುಕುಟ್ಟಿ ಪ್ರಸಂಗ

ಅಪ್ಪುಕುಟ್ಟಿ ಎಂಬ ನಟುವರ (ನಟ್ಟುವಾಂಗದವನು) ಒಬ್ಬ ಇದ್ದ. ಆತ ನೇಗಪಟಂ ಎಂಬ ಊರಿನವ. ಆತನಿಗೆ ತನ್ನ ವಿದ್ಯೆಯ ಬಗ್ಗೆ ಎಷ್ಟು ಜಂಬ ಮತ್ತು ಅಹಂಕಾರಗಳು ಇದ್ದವೆಂದರೆ ಆತನ ದೃಷ್ಟಿಗೆ ಬಿದ್ದ ವಿದ್ವಾಂಸರಿಗೆ ತನ್ನ ವಿದ್ಯೆಯ ಮೂಲಕವಾಗಿ ಹೇಗೆ ಅವಮರ್ಯಾದೆಯನ್ನು ಮಾಡುವುದು ಎಂಬುದರಲ್ಲೇ ಮಗ್ನವಾಗಿರುತ್ತಿದ್ದ. ಅವನಿಗೆ ವಿದ್ಯೆಗೆ ವಿನಯವೇ ಭೂಷಣ ಎಂಬ ವಿಷಯವೇ ತಿಳಿಯದು.

ಒಮ್ಮೆ ಶ್ಯಾಮಾಶಾಸ್ತ್ರಿಯವರು ತಮ್ಮ ಸ್ವಕಾರ್ಯಕ್ಕಾಗಿ ನೇಗಪಟಂ ಊರಿಗೆ ಹೋಗಬೇಕಾಯಿತು. ಅವರು ಆ ಊರಿಗೆ ಬಂದ ಸುದ್ದಿ ತಿಳಿದು, ಆ ಊರಿನ ಎಲ್ಲ ವಿದ್ವಾಂಸರೂ ಸೇರಿ, ಶ್ಯಾಮಾಶಾಸ್ತ್ರಿಯವರನ್ನು ಭೇಟಿಯಾಗಿ ತಮಗೆ ಆ ಅಪ್ಪುಕುಟ್ಟಿಯಿಂದ ಆಗುತ್ತಲೇ ಇದ್ದ ಅವಮಾನವನ್ನು ಹೇಳಿ, ಇದಕ್ಕೇನಾದರೂ ಉಪಾಯ ಮಾಡಿ ತಮ್ಮನ್ನು ಅವಮಾನಗಳಿಂದ ಕಾಪಾಡಬೇಕೆಂದು ಕೋರಿದರು.

ಶ್ಯಾಮಾಶಾಸ್ತ್ರಿಯವರು ತಿಳಿಸಿದಂತೆಯೇ ಆ ಊರಿನ ವಿದ್ವಾಂಸರುಗಳು ಅಂದು ರೂಢಿಯಿದ್ದಂತೆ ಸಂಗೀತಸ್ಪರ್ಧೆಯ ಒಂದು ಕಾರ್ಯಕ್ರಮವನ್ನು ನೀಲಾಯತಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ಏರ್ಪಡಿಸಿ ಈ ಕುರಿತಾಗಿ ಅಪ್ಪುಕುಟ್ಟಿಗೆ ಪಂಥಾಹ್ವಾನವನ್ನೂ ನೀಡಿದರು. ಈಗಾಗಲೇ ಬಹಳ ಕೀರ್ತಿಯು ಇದ್ದ ಶ್ಯಾಮಾಶಾಸ್ತ್ರಿಯವರ ಹೆಸರನ್ನು ಕೇಳಿ ತಿಳಿದಿದ್ದ ಅಪ್ಪುಕುಟ್ಟಿಗೆ ಶ್ಯಾಮಾಶಾಸ್ತ್ರಿಯವರನ್ನು ಸೋಲಿಸಿದರೆ ತನಗೆ ಇನ್ನಷ್ಟು ಗರಿ ಮೂಡುತ್ತದೆಯಾದ್ದರಿಂದ ಅವರನ್ನು ಸೋಲಿಸಿಯೇ ಬಿಡಬೇಕೆಂಬ ಕೆಟ್ಟ ಅವಿವೇಕದ ಉತ್ಸಾಹವಿದ್ದದ್ದರಿಂದಲೂ, ತನಗೆ ಯಾರಲ್ಲೂ ಸೋಲದಷ್ಟು ವಿದ್ಯೆ ಹಾಗೂ ಯೋಗ್ಯತೆಗಳು ಇವೆಯೆಂಬ ದುರಹಂಕಾರದ ನಂಬುಗೆ ಇದ್ದದ್ದರಿಂದಲೂ ಅವಿವೇಕಾತಿಶಯದಿಂದ ಇದಕ್ಕೆ ಸಂತೋಷವಾಗಿಯೇ ಒಪ್ಪಿಗೆಯನ್ನು ನೀಡಿಬಿಟ್ಟನು.

ಈ ಸಂಗೀತಪಂಥದ ಪಣವನ್ನು ಇಟ್ಟ ನಿಯಮವೆಂದರೆ — ಅಪ್ಪುಕುಟ್ಟಿಯೇನಾದರೂ ಸೋತರೆ, ಆತನು ತನ್ನ ತಾಳವನ್ನೂ ತಂಬೂರವನ್ನೂ ಕೊಟ್ಟುಬಿಟ್ಟು, ಮುಂದೆಂದೂ ಆ ಊರಿನಲ್ಲಿ ಸಂಗೀತವನ್ನೇ ಹಾಡುವಂತೆಯೇ ಇಲ್ಲ ; ಶ್ಯಾಮಾಶಾಸ್ತ್ರಿಯವರೇನಾದರೂ ಸೋತರೆ ಆತ ಎಲ್ಲವನ್ನೂ ತ್ಯಾಗ ಮಾಡಿ ಸಂನ್ಯಾಸವನ್ನು ಸ್ವೀಕರಿಸಬೇಕು. ಈ ಪಣದ ನಿಯಮಕ್ಕೆ ಇಬ್ಬರೂ ಒಪ್ಪಿಗೆಯನ್ನು ನೀಡಿದಾನಂತರ ಸಂಗೀತಪಂಥವು ಆರಂಭವಾಗಿ ಪಲ್ಲವಿಗಳನ್ನು ಹಾಡಿದರು. ಮೊದಲೇ ತಾಳಬ್ರಹ್ಮರನಿಸಿಕೊಂಡು ಪ್ರಸಿದ್ಧರಾಗಿದ್ದ ಶ್ಯಾಮಾಶಾಸ್ತ್ರಿಯವರ ಎದುರು ಅಪ್ಪುಕುಟ್ಟಿಯು ಸುಲಭವಾಗಿಯೇ ಸೋತು ಬಿಟ್ಟ. ಆತನ ಗರ್ವವು ಅಡಗಿತು. ಆದ್ದರಿಂದ ಮೊದಲೇ ಒಪ್ಪಿದಂತೆ ಆತನು ಆ ಊರನ್ನೇ ಬಿಟ್ಟು ಮೈಸೂರಿಗೆ ಹೋಗಿ ರಾಜಾಶ್ರಯವನ್ನು ಪಡೆದು ಅಲ್ಲಿ ನೆಲೆಸಿದನಂತೆ! ಆದರೆ ಅಲ್ಲಿ ಮಹಾರಾಜರಲ್ಲಿ ಎಲ್ಲ ಸಂಗತಿಯನ್ನೂ ತಿಳಿಸಿ ಮಹಾತ್ಮರಾಗಿದ್ದ ಶ್ಯಾಮಾಶಾಸ್ತ್ರಿಯವರ ವಿದ್ಯೆಯ ಬಾಹುಳ್ಯದ, ಪ್ರತಿಭೆಯ, ದೈವಭಕ್ತಿಯ – ಮುಂತಾದ ಎಲ್ಲ ವಿಷಯಗಳನ್ನೂ ಹೇಳಿದ. ಮೈಸೂರು ಮಹಾರಾಜರಿಗೆ ಶ್ಯಾಮಾಶಾಸ್ತ್ರಿಯವರನ್ನು ತಮ್ಮ ಆಸ್ಥಾನಕ್ಕೆ ಕರೆಯಿಸಬೇಕು ಎಂಬ ಹಂಬಲವು ಉಂಟಾಗಿ ಅವರನ್ನು ಮೈಸೂರಿಗೆ ಕರೆತರುವಂತೆ ಅಪ್ಪುಕುಟ್ಟಿಗೆ ಹೇಳಿದರು. ಮಹಾರಾಜರ ಆಜ್ಞೆಯನ್ನು ಶಿರಸಾ ವಹಿಸಿ ಅಪ್ಪುಕುಟ್ಟಿ ನಟ್ಟುವನಾರನು ತಂಜಾವೂರಿಗೆ ಬಂದು ಶ್ಯಾಮಾಶಾಸ್ತ್ರಿಯವರನ್ನು ಭೇಟಿಯಾಗಿ, ತನಗೆ ದೊರಕಿದ್ದ ಎಲ್ಲ ಬಿರುದುಬಾವಳಿಗಳನ್ನೂ ಖಿಲ್ಲತ್ತುಗಳನ್ನೂ ಅವರ ಪದತಲದಲ್ಲಿಟ್ಟು ಅವರ ಚರಣಗಳಿಗೆ ನಮಸ್ಕರಿಸಿದನು. ಹಾಗೆಯೇ, ತಾನು ಅವರ ಬಗ್ಗೆ ಮೈಸೂರು ಮಹಾರಾಜರಿಗೆ ಹೇಳಿದ್ದಾಗಿಯೂ, ಮೈಸೂರು ಮಹಾರಾಜರು ಅವರನ್ನು ತಮ್ಮ ಆಸ್ಥಾನಕ್ಕೆ ಆಹ್ವಾನಿಸಿದ್ದಾಗಿಯೂ, ಶ್ಯಾಮಾಶಾಸ್ತ್ರಿಯವರಿಗೆ ಮಹಾರಾಜರು ಕನಕಾಭಿಷೇಕ ಮಾಡುವುದಾಗಿ ತಿಳಿಸಿದ್ದಾರೆಂದೂ ವಿಷಯವನ್ನು ತಿಳಿಸಿ, ಭಯಭಕ್ತಿಗಳಿಂದ ಆಹ್ವಾನವನ್ನು ನೀಡಿದನು. ಆಗ ಶ್ಯಾಮಾಶಾಸ್ತ್ರಿಯವರು – “ಅಯ್ಯಾ ಅಪ್ಪುಕುಟ್ಟಿ ನಿನಗೀಗ ಸಂಗೀತವಿದ್ಯೆಯ ಮೇಲಣ ನಿಜವಾದ ಅಭಿಮಾನ ಭಕ್ತಿಗಳು ಹುಟ್ಟಿದ್ದು, ನೀನು ನಿಗರ್ವಿಯಾದದ್ದೂ ಬಹಳ ನನಗೆ ಬಹಳ ಸಂತೋಷವನ್ನುಂಟು ಮಾಡಿತು. ಆದರೆ ನನಗೆ ಈಗ ಯಾವ ಮನ್ನಣೆಯ ಆಕರ್ಷಣೆಯಾಗಲೀ ರಾಜಾಶ್ರಯದ ಆಸೆಯಾಗಲಿ, ಧನಕನಕಗಳ ಬಗ್ಗೆ ಅಪೇಕ್ಷೆಯಾಗಲೀ ಕಿಂಚಿತ್ತೂ ಇಲ್ಲ. ನನಗೆ ಎಂದೂ ಅವುಗಳ ಯಾವುದರ ಮೇಲೂ ಆಸಕ್ತಿಯಾಗಲೀ ಪ್ರಲೋಭನೆಯಾಗಲೀ ಇಲ್ಲವೇ ಇಲ್ಲ. ಅಲ್ಲದೆ, ನನ್ನ ಈ ಜೀವನದ ಕೊನೆಯ ದಿನಗಳೂ ಸಮೀಪದಲ್ಲಿದೆಯಾದ್ದರಿಂದ ನಾನು ಎಲ್ಲಿಗೂ ಬರಲಾರೆ” – ಎಂದುಬಿಟ್ಟರು. ಆ ನಟ್ಟುವನು ನಿರಾಶನಾಗಿ ಮನಸ್ಸಿಲ್ಲದ ಮನಸ್ಸಿನಿಂದ ಮೈಸೂರಿಗೆ ಹಿಂತಿರುಗಿ, ಎಲ್ಲ ವಿಷಯಗಳನ್ನೂ ಮಹಾರಾಜರಿಗೆ ತಿಳಿಸಿ, ಇನ್ನು ಈ ಕುರಿತು ಪ್ರಯತ್ನವನ್ನು ಪಟ್ಟರೂ ಪ್ರಯೋಜನವಿಲ್ಲವೆಂದು ತಿಳಿಸಿಬಿಟ್ಟನು. ಈ ಘಟನೆಯು ಕ್ರಿ. ಶ. 1826 ರಲ್ಲಿ ನಡೆಯಿತು. ಇದಾದ ಆರು ತಿಂಗಳುಗಳ ಕಾಲ ಮಾತ್ರ ಶ್ಯಾಮಾಶಾಸ್ತ್ರಿಯವರು ಇದ್ದು ಆನಂತರ ಬಂಗಾರು ಕಾಮಾಕ್ಷಿಯ ಪಾದಗಳನ್ನು ಸೇರಿಬಿಟ್ಟರು.

ತ್ರಿಮೂರ್ತಿಗಳಲ್ಲಿ ತ್ಯಾಗರಾಜರಿಗೂ, ಮುದ್ದುಸ್ವಾಮಿ ದೀಕ್ಷಿತರಿಗೂ ಪ್ರಖ್ಯಾತವಾದ ಸಂಗೀತಪರಂಪರೆಯೇ ಇತ್ತು. ಮಾತ್ರವಲ್ಲದೆ ಸಂಗೀತವಿದ್ಯೆಯನ್ನು ಸಾಧಿಸಲು ಪ್ರೋತ್ಸಾಹವೂ ಇತ್ತು. ಆದರೆ ಗ್ರಹಚಾರವಶಾತ್ ಶ್ಯಾಮಾಶಾಸ್ತ್ರಿಯವರ ಕುಟುಂಬದವರಿಗೆ ಆ ರೀತಿಯಾಗಿ ಸಂಗೀತ ಪರಂಪರೆಯೂ ಇರಲಿಲ್ಲ, ಜೊತೆಗೆ ಆಸಕ್ತಿಯೂ ಇರಲಿಲ್ಲ! ಅವರ ಕುಟುಂಬದಲ್ಲಿ ಪರಂಪರೆಯಾಗಿ ಬಂದದ್ದು ವೇದ ಮತ್ತು ಜ್ಯೋತಿಷ ಮಾತ್ರ. ಆದರೆ ಅದೇನೋ ಪೂರ್ವಪುಣ್ಯದಿಂದ ಶ್ಯಾಮಾಶಾಸ್ತ್ರಿಯವರಿಗೆ ತಮ್ಮ ಪರಂಪರೆಯಿಂದ ಬಳುವಳಿಯಾಗಿ ವೇದ ಮತ್ತು ಜ್ಯೋತಿಷಗಳ ಪ್ರತಿಭೆಯೊಂದಿಗೆ ಅಗಾಧವಾದ ಸಂಗೀತ ಪ್ರತಿಭೆಯೂ ದೈವದತ್ತವಾಗಿ ಬಂದುಬಿಟ್ಟಿತ್ತು. ಅವರ ಸೋದರಮಾವನಿಗೆ ಸ್ವಲ್ಪ ಸಂಗೀತವು ಬರುತ್ತಿದಿತಾದರೂ ಹೇಳಿಕೊಳ್ಳುವ ಪಾಂಡಿತ್ಯವೇನೂ ಇರಲಿಲ್ಲ. ಜೊತೆಗೆ ಆತನಿಗೆ ಶ್ಯಾಮಾಶಾಸ್ತ್ರಿಯವರಿಗಿದ್ದ ಪ್ರತಿಭೆಯನ್ನು ನೋಡಿ ಹೊಟ್ಟೆಕಿಚ್ಚೂ ಮತ್ಸರವೂ ಬಂದುಬಿಟ್ಟಿತ್ತು!

ಶ್ಯಾಮಾಶಾಸ್ತ್ರಿಯವರು ಇನ್ನೂ ಬಾಲಕನಾಗಿದ್ದಾಗ ಅವರ ತಂದೆಯವರು ಅವರಿಗೆ ಅಂದು ಬೇರೆ ಕಾರ್ಯದಲ್ಲಿ ಪಕ್ಕದೂರಿಗೆ ಹೋಗಬೇಕಾದದ್ದರಿಂದ ಬಾಲಕ ಶ್ಯಾಮಾಶಾಸ್ತ್ರಿಗೆ ಬಂಗಾರು ಕಾಮಾಕ್ಷಿಯಮ್ಮನಿಗೆ ಅಂದಿನ ಪೂಜೆಯನ್ನು ವಹಿಸಿ ಅವರು ಹೊರಟರು. ಬಾಲಕ ಶ್ಯಾಮಕೃಷ್ಣನು ಬಹಳ ಶ್ರದ್ಧಾ ಭಕ್ತಿಗಳಿಂದ ಪೂಜೆಯನ್ನು ಮಾಡುವಾಗ ಆಯಾ ಮಂತ್ರಗಳಿಗೆ ರಾಗವನ್ನು ಅಳವಡಿಸಿ ಬಹಳ ಸುಶ್ರಾವ್ಯವಾಗಿ, ಮಾಧುರ್ಯಭರಿತವಾಗಿ ಗಾಯನ ಮಾಡುತ್ತ ಪೂಜೆಯನ್ನು ಮಾಡುತ್ತಿದ್ದನು. ಆ ಸಮಯದಲ್ಲಿ ಅರ್ಚನೆ ಮಾಡಿಸಲೆಂದು ಬಂದಿದ್ದ ಭಕ್ತರೊಬ್ಬರಿಗೆ ಶ್ಯಾಮಕೃಷ್ಣನ ಮಂತ್ರದ ಗಾಯನವು ಎಷ್ಟು ಪ್ರೀತಿಯಾಯಿತೆಂದರೆ, ಆ ಕೂಡಲೇ ಆತ ಅಂಗಡಿಯೊಂದಕ್ಕೆ ಹೋಗಿ ಬೆಲೆಬಾಳುವ ಶಾಲೊಂದನ್ನು ತಂದು ಶ್ಯಾಮಕೃಷ್ಣನಿಗೆ ಅತ್ಯಂತ ಪ್ರೀತಿಯಿಂದ ಹೊದಿಸಿ, ದೊಡ್ಡ ಸಂಗೀತ ವಿದ್ವಾಂಸನಾಗು ಎಂದು ಆಶೀರ್ವದಿಸಿರಂತೆ! ಶ್ಯಾಮಕೃಷ್ಣನು ಆತನಿಗೆ ಗೌರವದಿಂದ ನಮಸ್ಕರಿಸಿದನು. ಪೂಜೆಯ ವಿಧಿಗಳೆಲ್ಲ ಮುಗಿದಾನಂತರ ಬಾಲಕ ಶ್ಯಾಮಕೃಷ್ಣನು ಬಹಳ ಸಂತೋಷದಿಂದ ತನಗೆ ಸಂಗೀತದ ಬಾಲಪಾಠಗಳನ್ನು ಹೇಳಿಕೊಡುತ್ತಿದ್ದ ತನ್ನ ಸೋದರಮಾವನ ಮನೆಗೆ ಹೋಗಿ, ಆತನಲ್ಲಿ ನಡೆದ ಸಂಗತಿಗಳನ್ನೆಲ್ಲ ತಿಳಿಸಿ, ದೇವಸ್ಥಾನದಲ್ಲಿ ಆ ಭಕ್ತರು ತನಗಾಗಿ ತಂದುಕೊಟ್ಟಿದ್ದ ಆ ಬೆಲೆಬಾಳುವ ಶಾಲನ್ನು ತೋರಿಸಿ, ತನ್ನ ಗುರುವಾಗಿದ್ದ ಆತನಿಗೆ ಭಕ್ತಿಯಿಂದ ನಮಸ್ಕರಿಸಿದನು. ಈ ಘಟನೆಯಿಂದ ಸಂತೋಷ ಪಡಬೇಕಾಗಿದ್ದ ಆ ಸೋದರಮಾವನಿಗೆ ಅತಿಯಾದ ಮತ್ಸರವೇ ಮೇಲೆದ್ದು ಕುಣಿಕುಣಿಯಿತು! ಅದರ ಫಲಿತಾಂಶವೆಂದರೆ ಶ್ಯಾಮಕೃಷ್ಣನ ಸಂಗೀತ ಪುಸ್ತಕಗಳನ್ನೆಲ್ಲಾ ಹರಿಹರಿದು, ಬಿಸಾಡಿ, ಇನ್ನು ಪಾಠವನ್ನು ಮಾಡುವುದಿಲ್ಲವೆಂದು ಕೋಪದಿಂದ ಹೇಳಿ, ದುರ್ದಾನ ತೆಗೆದುಕೊಂಡವರಂತೆ ಹೋಗಿಬಿಟ್ಟರು!! ಇಂತಹ ಒಂದು ಸಂದರ್ಭವು ಬಂದೀತು ಎಂದು ನಿರೀಕ್ಷೆಯೇ ಮಾಡದ ಬಾಲಕ ಶ್ಯಾಮಕೃಷ್ಣನಿಗೆ ಬಹಳ ದುಃಖವಾಯಿತು, ನಿರಾಸೆಯಾಯಿತು, ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯಿತು. ಆತನು ಸೋದರಮಾವನ ಮನೆಯಿಂದ ಮನೆಗೆ ಬಂದು ದುಃಖದಿಂದ ಅಳತೊಡಗಿದನು. ಆತನಿಗೆ ತನ್ನ ಸೋದರಮಾವನು ತನ್ನ ಸಂಗೀತದ ಪುಸ್ತಕಗಳನ್ನು ಹರಿದು ಹಾಕಿದ್ದು ಮಾತ್ರವಲ್ಲದೆ ಇನ್ನು ಮುಂದೆ ಸಂಗೀತಪಾಠವನ್ನು ಮಾಡುವುದಿಲ್ಲವೆಂದು ಹೇಳಿದ್ದು ಇನ್ನೂ ಹೆಚ್ಚಿನ ದುಃಖವನ್ನುಂಟುಮಾಡಿತ್ತು. ತಂದೆಯು ಮನೆಗೆ ಹಿಂತಿರುಗಿದಾಗ ಅಳುತ್ತಿದ್ದ ತನ್ನ ಮಗನಲ್ಲಿ ಕಾರಣವೇನೆಂದು ವಿಚಾರಿಸಿದಾಗ, ನಡೆದ ಸಂಗತಿಗಳನ್ನೆಲ್ಲ ಬಾಲಕ ಶ್ಯಾಮಕೃಷ್ಣನು ತನ್ನ ತಂದೆಗೆ ಚ-ತು ತಪ್ಪದೆ ತಿಳಿಸಿದನು. ತಂದೆಯು ತನ್ನ ಮಗನಿಗೆ ಸಮಾಧಾನವನ್ನು ಮಾಡಿ, ಆತನ ಸೋದರಮಾವನಿಗೆ ಸಂಗೀತ ಪಾಠವನ್ನು ಮುಂದುವರೆಸಲು ಹೇಳುತ್ತೇನೆ ಎಂದು ಆಶ್ವಾಸನೆ ನೀಡುವ ಬದಲು – “ಅಲ್ಲ, ಶ್ಯಾಮಕೃಷ್ಣ! ನಿನಗೆ ಸಂಗೀತ ಏಕಾಗಿ ಬೇಕು? ಸಂಗೀತ – ಗಿಂಗೀತವೆಲ್ಲ ನಮ್ಮಂತಹವರಿಗೇಕೆ? ಬ್ರಾಹ್ಮಣರಿಗೆ ವೇದಮಂತ್ರಗಳು ತಿಳಿದಿದ್ದರೆ ಸಾಕು. ನೀನು ಸಂಗೀತವನ್ನು ಕಲಿಯುವ ಅವಶ್ಯಕತೆ ಇಲ್ಲ… ಎಂದು ಹೇಳಿಬಿಡೋದೇ!..!? ಈ ಮಾತುಗಳಿಂದ ಶ್ಯಾಮಕೃಷ್ಣನಿಗೆ ಸಿಡಿಲು ಬಡಿದಂತೆ ಇನ್ನೂ ಒಂದು ದೊಡ್ಡ ಆಘಾತವಾಯಿತಾದರೂ ಆತನಿಗೆ ಆ ಕ್ಷಣದಲ್ಲಿಯೇ ತನಗೆ ಭಗವತಿಯಾದ ಬಂಗಾರು ಕಾಮಾಕ್ಷಿಯು ಸಂಗೀತವನ್ನು ಅನುಗ್ರಹಿಸಿದ್ದಾಳೆಂದೂ ನಂಬಿಕೆಯೂ ಹುಟ್ಟಿತು. ಏನೇ ಕಷ್ಟ ಬಂದರೂ ತಾನು ಬಿಡದೆ, ಸಾಧನೆ ಮಾಡಿ ಸಂಗೀತವಿದ್ಯೆಯನ್ನು ಪಡೆದೇ ಪಡೆಯುತ್ತೇನೆಂದು ತೀರ್ಮಾನವನ್ನು ಮಾಡಿ ಛಲದಿಂದ ಅದರಂತೆಯೇ ನಡೆದುಕೊಂಡನು.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಮೂವರಿಗೂ ಎಂದರೆ ಶ್ಯಾಮಾಶಾಸ್ತ್ರಿಯವರು, ತ್ಯಾಗರಾಜರು ಹಾಗೂ ಮುದ್ದುಸ್ವಾಮಿ ದೀಕ್ಷಿತರು — ಈ ಮೂವರಿಗೂ ಅನುಗ್ರಹ ಹಾಗೂ ನಿಗ್ರಹ ಶಕ್ತಿಗಳು ಸಿದ್ಧಿಯಾಗಿದ್ದವು. ಅನುಗ್ರಹ ಎಂದರೆ ವರವನ್ನು ನೀಡುವುದು, ನಿಗ್ರಹ ಎಂದರೆ ಶಾಪವನ್ನು ನೀಡುವುದು. ಹಾಗೆಂದು ಅವರುಗಳು ಎಲ್ಲರಿಗೂ ಅನುಗ್ರಹವನ್ನು ಮಾಡುತ್ತಿದ್ದರೋ ಹೊರತು ಎಂದಿಗೂ ಶಾಪವನ್ನು ನೀಡುತ್ತಿರಲಿಲ್ಲ. ಆದರೆ ಮಹಾ ಸಜ್ಜನರಾಗಿ, ತಪಸ್ವಿಗಳಾಗಿ, ಪರೋಪಕಾರವನ್ನು ಮಾಡುತ್ತ, ದೈವಭಕ್ತರಾಗಿ ಬಾಳುತ್ತಿದ್ದ ಅವರುಗಳಿಗೆ ಯಾರಾದರೂ ಉಪದ್ರವವನ್ನೂ ತೊಂದರೆಗಳನ್ನು ಮಾಡಿದರೆ, ಮಾಡಿದವರಿಗೆ ಅದೇ ಶಾಪವಾಗಿ ಪರಿಣಮಿಸಿ, ಅವರ ಕರ್ಮಗಳೇ ಹಾನಿಯ ರೂಪಕ್ಕೆ ತಿರುಗಿ ಬುದ್ಧಿಯನ್ನು ಕಲಿಸುತ್ತಿತ್ತು.

ಒಂದು ದಿನ ಸಂಜೆ ಶ್ಯಾಮಾಶಾಸ್ತ್ರಿಯವರು ತಮ್ಮ ಸ್ನೇಹಿತರಾಗಿದ್ದ ಅನ್ನಕುಟ್ಟಿ ಐಯ್ಯರ್ ಜೊತೆಗೆ ತಂಜಾವೂರಿನ ಮನೋಜಿಯಪ್ಪ ಎನ್ನುವ ರಸ್ತೆಯಲ್ಲಿ ಬೀದಿಯಲ್ಲಿ ಏನನ್ನೋ ಮಾತನಾಡುತ್ತ ನಡೆದು ಹೋಗುತ್ತಿದ್ದರು. ಅಲ್ಲಿದ್ದ ದ್ರೌಪದಿ ಅಮ್ಮನವರ ದೇವಸ್ಥಾನದ ಎದುರು ಬದಿಯಲ್ಲಿದ್ದ ಪಟಾಕಿ ಅಂಗಡಿಯವನು ಯಾರ ಬಳಿಯಲ್ಲೋ ಬಹಳ ಕುಹಕ – ತಾತ್ಸಾರದಿಂದ “ನೋಡು!, ನೋಡು! ಆ ಕಾಮಾಕ್ಷಿಯಮ್ಮನ ದೇವಸ್ಥಾನದ ಅರ್ಚಕ ಹೇಗೆ ಹೋಗುತ್ತಿದ್ದಾನೆ! ಎಂದುಬಿಟ್ಟನು. ಶ್ಯಾಮಾಶಾಸ್ತ್ರಿಯವರು ಗಹನ ವಿಷಯವನ್ನು ಮಾತನಾಡುತ್ತಿದ್ದುದರಿಂದ ಈ ಮಾತು ಅವರಿಗೆ ಕಿವಿಗೆ ಬೀಳಲಿಲ್ಲ. ಆದರೆ ಅಂಗಡಿಯವನು ಕುಹಕದಿಂದ ಆಡಿದ ಈ ಮಾತುಗಳು ಶ್ಯಾಮಾಶಾಸ್ತ್ರಿಯವರ ಸ್ನೇಹಿತನ ಕಿವಿಗೆ ಬಿದ್ದು, ಅನ್ನಕುಟ್ಟಿಯು ಶ್ಯಾಮಾಶಾಸ್ತ್ರಿಯವರಿಗೆ ಈ ವಿಷಯವನ್ನು ಹೇಳಿದಾಗ ಅವರು – “ಆತನಿಗೇನೋ ಕೇಡುಗಾಲ ಬಂದಿದೆಯೆಂದು ತೋರುತ್ತದೆ! ಇಲ್ಲವಾದರೆ, ಅಮ್ಮನವರ ಪೂಜೆ ಮಾಡುವುದು ಅವನಿಗೆ ಇಷ್ಟು ಅಗ್ಗವಾಗಿ ತೋರುತ್ತಿರಲಿಲ್ಲ!” ಎಂದು ಹೇಳಿ ಮುಂದೆ ಹೋದರು. ಶ್ಯಾಮಾಶಾಸ್ತ್ರಿಯವರು ಈ ಮಾತನ್ನು ಹೇಳಿ ಅರ್ಧಗಂಟೆಯೂ ಆಗಿರಲಿಲ್ಲ, ಅಂಗಡಿಯಿದ್ದ ಜಾಗದ ಭಾಗದಲ್ಲಿ ದೊಡ್ಡ ಸ್ಫೋಟದ ಶಬ್ದವು ಕೇಳಿತು. ಯಾರೋ ಗಿರಾಕಿಯು ಧೂಮ್ರಪಾನ ಮಾಡಿ ಬಿಸಾಡಿದ್ದ ಬೆಂಕಿಕಡ್ಡಿಯು ಸರಿಯಾಗಿ ಆರದೆ, ಇಡೀ ಪಟಾಕಿಯೇ ಸಿಡಿದು, ಅಂಗಡಿಯೂ ಅಂಗಡಿಯ ಆ ಮಾಲಿಕನೂ ಉರಿದು ಹೋದರು. ಅರ್ಧ ಗಂಟೆ ಕಳೆದು ಅದೇ ದಾರಿಯಲ್ಲಿ ಶ್ಯಾಮಾಶಾಸ್ತ್ರಿಯವರು ವಾಪಸ್ ಮನೆಗೆ ಬರುವಾಗ ಅವರಿಗೆ ಹೊತ್ತು ಉರಿದು ಬೂದಿಯಾಗಿಬಿಟ್ಟಿದ್ದ ಅಂಗಡಿಯನ್ನೂ ಅಂಗಡಿಯವನನ್ನೂ ನೋಡಿ ಅವರಿಗೆ ಬಹಳ ದುಃಖವಾಯಿತು.

ಜ್ಯೋತಿಷ ಪಂಡಿತ ಶ್ಯಾಮಾಶಾಸ್ತ್ರಿಯವರು

ತ್ರಿಮೂರ್ತಿಗಳೆಂದು ಪ್ರಖ್ಯಾತರಾದ ತ್ಯಾಗರಾಜರೂ ಮುದ್ದುಸ್ವಾಮಿ ದೀಕ್ಷಿತರೂ ಮತ್ತು ಶ್ಯಾಮಾಶಾಸ್ತ್ರಿಯವರು ಮೂವರೂ ಸಹ ಸಂಗೀತ ಮಾತ್ರವಲ್ಲದೆ ಜ್ಯೋತಿಷದಂತಹ ಎಲ್ಲ ವೇದಾಂಗಗಳಲ್ಲಿಯೂ ಮಹಾ ವಿದ್ವಾಂಸರಾಗಿದ್ದವರೇ. ಶ್ಯಾಮಾಶಾಸ್ತ್ರಿಯವರಿಗೆ ಒಮ್ಮೆ ಒಬ್ಬರ ಮುಖ ನೋಡಿದರೆ ಸಾಕು, ಅವರ ಜೀವನದಲ್ಲಿ ಮುಂದೆ ಸಂಭವಿಸಬಹುದಾದ ಘಟನೆಗಳು ಅವರ ಮನಸ್ಸಿನಲ್ಲಿ ಗೋಚರವಾಗಿಬಿಡುತ್ತಿದ್ದವು!

ಒಂದು ದಿನ ಶ್ಯಾಮಾಶಾಸ್ತ್ರಿಯವರು ತನ್ನ ಮನೆಯ ಜಗುಲಿಯಲ್ಲಿ ಕುಳಿತು ತಮ್ಮ ಸ್ನೇಹಿತರೊಂದಿಗೆ ಯಾವುದೋ ಗಹನವಾದ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ಆ ದಾರಿಯಲ್ಲೇ ಹೋಗುತ್ತಿದ್ದಾಗ ಶ್ಯಾಮಾಶಾಸ್ತ್ರಿಯವರಿಗೆ ಅವನ ಮುಂದಿನ ಜೀವನದಲ್ಲಿ ಸಂಭವಿಸುವ ಘಟನೆ ಧುತ್ತೆಂದು ಮನಸ್ಸಿಗೆ ಗೋಚರವಾಯಿತು. ಅವರು ಆ ವ್ಯಕ್ತಿಯನ್ನು ಕರೆದು – “ಅಯ್ಯಾ, ನನಗೆ ಮುಂದಿನ ವಿಷಯವನ್ನು ನಿನ್ನಲ್ಲಿ ಹೇಳಲು ಬೇಸರವಾದರೂ ನಿನ್ನನ್ನು ಎಚ್ಚರಿಸುವ ಜವಾಬ್ದಾರಿ ನನಗಿದೆ. ನಿನ್ನ ಆಯುಷ್ಯವಿರುವುದು ಇನ್ನು ಎಂಟೇ ದಿನಗಳು ಮಾತ್ರ. ಆದ್ದರಿಂದ ನಿನ್ನ ಮನೆಯವರಿಗೆ ಹೇಳಿ ಅವರ ಜೀವಿತಕ್ಕೆ ನಿನಗಾಗುವಷ್ಟು ವ್ಯವಸ್ಥೆ ಮಾಡು, ನೀನೂ ಮಾನಸಿಕವಾಗಿ ಸಿದ್ಧನಾಗಿ ದೈವಧ್ಯಾನದಲ್ಲಿ ಈಗಿನಿಂದಲೇ ತೊಡಗಿಕೋ” – ಎಂದು ಹೇಳಿಬಿಟ್ಟರು! ಈ ಮಾತುಗಳನ್ನು ಕೇಳಿ, ಶ್ಯಾಮಾಶಾಸ್ತ್ರಿಯವರ ಪಕ್ಕದಲ್ಲೇ ಇದ್ದ ಸ್ನೇಹಿತರಿಗೆಲ್ಲ ಬಹಳವಾದ ಆಶ್ಚರ್ಯವುಂಟಾಯಿತು. ಆ ವ್ಯಕ್ತಿಗೆ ದುಃಖವುಂಟಾದರೂ ಮುಂದಿನದನ್ನು ಎದುರಿಸಲು ಆತ ಮಾನಸಿಕವಾಗಿ ಸಿದ್ಧನಾದ. ಶ್ಯಾಮಾಶಾಸ್ತ್ರಿಯವರು ಭವಿಷ್ಯ ನುಡಿದಂತೆಯೇ ಆ ಎಂಟನೇ ದಿನವೇ ಆತ ಪರಂಧಾಮವನ್ನೈದುಬಿಟ್ಟ.

ಇನ್ನೊಂದು ಬಾರಿ ಏನಾಯಿತೆಂದರೆ, ಶ್ಯಾಮಾಶಾಸ್ತ್ರಿಯವರ ಸ್ನೇಹಿತನೊಬ್ಬನು ತಂಜಾವೂರು ಸಂಸ್ಥಾನದ ಆಸ್ಥಾನಕ್ಕೆ ಸಂಬಂಧಿಸಿದ ಜ್ಯೋತಿಷರಲ್ಲಿ ತನ್ನ ಜಾತಕವನ್ನು ನೀಡಿ ಆತನ ಭವಿಷ್ಯವನ್ನು ಹೇಳಬೇಕೆಂದು ಕೋರಿಕೊಂಡ. ಆ ಜ್ಯೋತಿಷರು ಆತನ ಜಾತಕವನ್ನು ಬಹಳವಾಗಿ ತಿರುತಿರುವಿ ಹಾಕಿ, ಶ್ಯಾಮಾಶಾಸ್ತ್ರಿಯವರ ಆ ಗೆಳೆಯನ ಅಂತ್ಯವೇ ಸಮೀಪಿಸಿದೆ ಎಂಬ ಘೋರ ಸ್ಫೋಟಕ ಭವಿಷ್ಯವನ್ನೇ ಆತನಿಗೆ ಹೇಳಿಬಿಟ್ಟರು! ಶ್ಯಾಮಾಶಾಸ್ತ್ರಿಯವರ ಗೆಳೆಯನ ತಲೆಗೆ ಸಿಡಿಲೇ ಬಡಿದಂತಾಗಿ, ಆತನು ಭಯಭೀತನಾಗಿ, ಅಳುತ್ತಾ ಶ್ಯಾಮಾಶಾಸ್ತ್ರಿಯವರಲ್ಲಿ ಬಂದು ಈ ಸಂಗತಿಯನ್ನು ತಿಳಿಸಿದನು. ಶ್ಯಾಮಾಶಾಸ್ತ್ರಿಯವರು ಒಮ್ಮೆ ಆತನ ಜಾತಕದತ್ತ ನೋಡಿ, “ಅಯ್ಯೋ ಗೆಳೆಯ! ಈಗೇಕೆ ಚಿಂತಿಸುತ್ತೀ? ನಿನಗೆ ಇನ್ನೂ ಹತ್ತು ವರ್ಷಗಳ ಕಾಲ ಆಯುಷ್ಯವಿದೆ. ಈಗ ಧೈರ್ಯವಾಗಿರು. ಆಗಿನ ಕಾಲದ ಮುಂದಿನ ವ್ಯವಸ್ಥೆಯತ್ತ ನಿನ್ನ ಗಮನವಿಡು” – ಎಂದರಂತೆ. ಶ್ಯಾಮಾಶಾಸ್ತ್ರಿಯವರು ಹೇಳಿದ್ದ ಭವಿಷ್ಯವೇ ಸತ್ಯವಾಯಿತು.

(ಗಾನಕಳಾಬೋಧಿನಿ — ಎನ್. ಸಿ. ಪಾರ್ಥಸಾರಥಿ ಮತ್ತು ದ್ವಾರಕೀ ಪಾರ್ಥಸಾರಥಿಯವರ ಪುಸ್ತಕದಿಂದ ಸಂಪಾದಿಸಿಕೊಟ್ಟವರು ವಿದುಷಿ ರೋಹಿಣಿ ಸುಬ್ಬರತ್ನಂ)