ತ್ಯಾಗರಾಜ

Tyagaraja

ತ್ಯಾಗರಾಜರು ಮಹಾಗಾಯಕರೂ ವಾಗ್ಗೇಯಕಾರರೂ ಮಾತ್ರವಲ್ಲ, ಬಹಳ ಸೊಗಸಾಗಿ ವೀಣೆಯನ್ನು ನುಡಿಸುವ ವೈಣಿಕರೂ ಆಗಿದ್ದರು! ದಿನ ದಿನವೂ ವೀಣೆಯನ್ನು ನುಡಿಸುತ್ತ ಹಾಡುತ್ತ ರಾಮನ ಪೂಜಾ ಸೇವೆಯನ್ನು ಮಾಡುತ್ತಿದ್ದರು. ದೇವರಕೋಣೆಯಲ್ಲಿ ಶ್ರೀರಾಮಚಂದ್ರನ ಪಕ್ಕದಲ್ಲೇ ಆ ವೀಣೆಗೂ ವಾಸ. ಒಂದು ದಿನ ಬೆಳಿಗ್ಗೆ ತ್ಯಾಗರಾಜರು ಭಕ್ತಿಯಿಂದ ವೀಣೆಯನ್ನು ನುಡಿಸುತ್ತ ಹಾಡುತ್ತ ಕಣ್ಮುಚ್ಚಿ ರಾಮಧ್ಯಾನದಲ್ಲಿದ್ದಾರೆ! ಆಗಲೇ ಒಬ್ಬ ಸಂನ್ಯಾಸಿಯು ಅಲ್ಲಿಗೆ ಬಂದು ಅವರ ಸಂಗೀತವನ್ನು ಕೇಳುತ್ತ ಭಕ್ತಭಾವಪರವಶನಾಗಿ ಕೇಳುತ್ತ ಕುಳಿತುಬಿಟ್ಟರು. ತ್ಯಾಗರಾಜರು ಆ ಕೀರ್ತನೆಯು ಮುಗಿದಾನಂತರ ಕಣ್ಣು ಬಿಟ್ಟು ನೋಡುತ್ತಾರೆ! ಎದುರು ಸಂನ್ಯಾಸಿ! ಗಡಬಡನೆ ಎದ್ದು ಗೌರವದಿಂದ ಆ ಸಂನ್ಯಾಸಿಯ ಪಾದವನ್ನು ಮುಟ್ಟಿ ನಮಸ್ಕರಿಸಿದರು. ಆ ಸಂನ್ಯಾಸಿಯು ತನ್ನಲ್ಲಿದ್ದ ಕೆಲವು ಸಂಗೀತಶಾಸ್ತ್ರಗ್ರಂಥಗಳ ತಾಳೆಗರಿ ಓಲೆಗಳ ಕಟ್ಟುಗಳನ್ನು ನೀಡಿ, ತಾನು ನದಿಗೆ ಹೋಗಿ ತನ್ನ ಸ್ನಾನ, ಜಪ, ತಪಾದಿಗಳನ್ನು ಮುಗಿಸಿ ಮಧ್ಯಾಹ್ನದ ಭಿಕ್ಷೆಗೆ (ಆಹಾರ ಸ್ವೀಕಾರ) ಗೆ ಬರುವುದಾಗಿ ಹೇಳಿ ಹೊರಟುಹೋದರು. ತ್ಯಾಗರಾಜರು ಸಂನ್ಯಾಸಿಯು ಭಿಕ್ಷೆಗೆ ಬರುವುದಾಗಿ ಹೇಳಿದ್ದರಿಂದ ತಾನೂ ಆಹಾರವನ್ನೇನೂ ಸ್ವೀಕರಿಸದೆ ಗೌರವದಿಂದ ಆತನಿಗಾಗಿ ಕಾದುಕುಳಿತರು. ಕಾದರು, ಕಾದರು, ನಿರಾಹಾರವಾಗಿ ಇಡೀ ದಿನವೇ ಕಾಯುತ್ತಲೇ ಕುಳಿತರೂ ಆ ಸಂನ್ಯಾಸಿಯು ಬರಲೇ ಇಲ್ಲ! ಅಂದು ತ್ಯಾಗರಾಜರು ನಿರಾಶರಾಗಿ, ನಿಟ್ಟುಪವಾಸ ಮಾಡುತ್ತ ರಾತ್ರಿ ದೇವರಧ್ಯಾನ ಮಾಡುತ್ತ ಹಾಗೆಯೇ ಮಲಗಿಬಿಟ್ಟರು. ಆಗ ಅವರಿಗೆ ಆ ಸಂನ್ಯಾಸಿಯು ಕನಸಿನಲ್ಲಿ ಬಂದು “ಎಲೈ ಕಂದ, ತ್ಯಾಗರಾಜ! ನಾನು ನಾರದ, ನಿನಗೆ ಸಂಗೀತಗ್ರಂಥಗಳನ್ನು ನೀಡಲೆಂದೇ ನಾನು ಬಂದದ್ದು. ಆದರೂ ನನಗೇಕೋ ನಿನ್ನ ಶ್ರದ್ಧೆಯನ್ನು ಪರೀಕ್ಷೆ ಮಾಡಬೇಕೆಂದು ಅನ್ನಿಸಿ, ಇಂದು ನಿನ್ನನ್ನು ಉಪವಾಸ ಕೆಡವಿದೆ. ಆದರೆ ನೀನು ನನ್ನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದೀಯೆ! ನೀನು ಈಗಾಗಲೇ ರಾಮಭಕ್ತಿಯನ್ನು ಮೆರೆದಿದ್ದೀಯೆ. ಆ ಸಂಗೀತಗ್ರಂಥಗಳನ್ನು ಅಧ್ಯಯನ ಮಾಡಿ, ಸಂಗೀತವಿದ್ಯೆಯನ್ನು ಸೂಕ್ತ ರೀತಿಯಲ್ಲಿ ಲೋಕದಲ್ಲಿ ಹರಡು” – ಎಂದು ಹೇಳಿ ಮಾಯವಾದರು. ಅದರಂತೆಯೇ ಮರುದಿನ ತ್ಯಾಗರಾಜರು ತಮ್ಮ ಪ್ರಾತಃವಿಧಿಗಳನ್ನೆಲ್ಲ ಮುಗಿಸಿ ಸಂನ್ಯಾಸಿಯ ವೇಷದಲ್ಲಿ ನಾರದರು ಬಂದು ಕೊಟ್ಟಿದ್ದ ಗ್ರಂಥದ ಕಟ್ಟನ್ನು ಬಿಚ್ಚಿದಾಗ ಹಲವು ಸಂಗೀತಗ್ರಂಥಗಳು ಇದ್ದವು. ಅದರಲ್ಲಿ ಸ್ವರಾರ್ಣವ ಮತ್ತು ನಾರದೀಯಂ ಎಂಬ ಗ್ರಂಥಗಳೂ ಸೇರಿದ್ದವು.

ಸಂಗೀತ ತ್ರಿಮೂರ್ತಿಗಳ ಜೀವನವನ್ನು ನಾವು ಸರಿಯಾಗಿ ಗಮನಿಸಿ ನೋಡಿದರೆ ಅವರುಗಳ ಜೀವನದ ಮುಖ್ಯವಾದ, ನಿರ್ಣಾಯಕವಾದ ಹಂತದಲ್ಲಿ ಸಂನ್ಯಾಸಿಗಳು ಬಂದು ಅವರುಗಳನ್ನೂ ಉದ್ಧರಿಸಿ ತನ್ಮೂಲಕ ಸಂಗೀತಲೋಕವನ್ನೂ ಉದ್ಧರಿಸಿದ್ದನ್ನು ಗಮನಿಸಬಹುದು.

ಒಂದು ಬಾರಿ ಕಾಂಚೀಪುರಕ್ಕೇ ಭೂಷಣನಾದ, ಕರುಣಾಮಯಿಯಾದ ಒಬ್ಬ ಮಹಿಮಾನ್ವಿತನು ತ್ಯಾಗರಾಜರ ಮನೆಗೆ ಬಂದು ಅವರಿಗೆ ವಂದಿಸಿದರು. ತ್ಯಾಗರಾಜರಿಗೆ ಆತನನ್ನು ನೋಡಿ ಭಗವಂತನಾದ ಮಹೇಶ್ವರನೇ ಈ ರೂಪದಲ್ಲಿ ಬಂದಿದ್ದಾನೆಂಬ ಭಾವನೆಯು ಬಂದಿತು. ಬಂದ ಆ ಮಹಾಮಹಿಮನು ತ್ಯಾಗರಾಜರನ್ನು ಕುರಿತು “ಎಲೈ ಮಂಗಳಕರನಾದ ತ್ಯಾಗರಾಜನೇ ನಾನು ವಿರಕ್ತ. ಸಂನ್ಯಾಸಿ. ನಿನಗೆ ಶ್ರೇಯಸ್ಸನ್ನು ಉಂಟುಮಾಡುವಂತಹ ರಾಮತಾರಕ ಮಂತ್ರವನ್ನು ಉಪದೇಶ ಮಾಡಬೇಕೆಂದು ನನಗೆ ಬ್ರಹ್ಮನಿಂದಲೇ ಆಜ್ಞೆಯಾಗಿದೆ. ಪಾರ್ವತೀಪತಿಯನ್ನು ಕುರಿತು ನಾನು ಬಹಳ ಪ್ರಕಾರವಾಗಿ ಪೂಜೆ ಮಾಡಿ, ಬಹಳ ಕಾಲ ತಪಸ್ಸನ್ನು ಮಾಡಿ, ಈ ಸಂಸಾರದ ಮೋಹದಿಂದ ಪಾರು ಮಾಡುವ ರಾಮತಾರಕಮಂತ್ರೋಪದೇಶವನ್ನು ಸಾಕ್ಷಾತ್ ಮಹೇಶ್ವರನ ಮುಖಾರವಿಂದದಿಂದಲೇ ಪಡೆದಿದ್ದೇನೆ. ಈ ಮಂತ್ರವನ್ನು ನಾನು ನೂರು ಕೋಟಿ ಸಲ ಜಪಿಸಿ ಸಿದ್ಧಿಯನ್ನು ಪಡೆದಿದ್ದೇನೆ. ನೀನೂ ಸಹ ಹೃದಯದಲ್ಲಿ ಶ್ರೀರಾಮನನ್ನೇ ಕಾಣುತ್ತ ತೊಂಭತ್ತಾರು ಕೋಟಿ ಬಾರಿ ಈ ರಾಮಮಂತ್ರವನ್ನು ಜಪಿಸು. ಆಗ ನಿನಗೆ ಆ ಪರಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳಿ ತ್ಯಾಗರಾಜರಿಗೆ ಆ ರಾಮತಾರಕ ಮಂತ್ರದ ಉಪದೇಶವನ್ನು ವೇದೋಕ್ತ ಪ್ರಕಾರವಾಗಿ ಉಪದೇಶಿಸಿದರು. ಕ್ಷಣಮಾತ್ರದಲ್ಲಿ ರಾಮಮಂತ್ರದಲ್ಲಿ ತಲ್ಲೀನನಾಗಿ ಆ ಯೋಗಿಯು ಅದೃಶ್ಯನಾದನು. ಆ ಯೋಗಿಯು ಬೋಧಿಸಿದಂತೆಯೇ ತ್ಯಾಗರಾಜರು ತಲ್ಲೀನರಾಗಿ ಪ್ರತಿದಿನವೂ ಸಂಖ್ಯೆಯಲ್ಲಿ ಒಂದೂಕಾಲು ಲಕ್ಷದಂತೆ ರಾಮತಾರಕ ಜಪವನ್ನು ಏಕಾಗ್ರತೆಯಿಂದ ಮಾಡಿದರು. ಹೀಗೇ ಹಲವು ವರ್ಷಗಳ ಕಾಲ ಅವರ ರಾಮತಾರಕ ಮಂತ್ರಜಪವು ನಡೆಯಿತು.

ಒಂದು ದಿನ ತ್ಯಾಗರಾಜರು ರಾಮದರ್ಶನ ದೀಕ್ಷಾಬದ್ಧರಾಗಿ ರಾಮತಾರಕಮಂತ್ರ ಜಪವನ್ನು ಮಾಡುತ್ತಲೇ ಇದ್ದಾರೆ. ಅವರ ಮನೆಯ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಅದನ್ನು ಕೇಳಿದ ಸಾಧ್ವೀಮಣಿಯಾದ ತ್ಯಾಗರಾಜರ ಪತ್ನಿ ಬಾಗಿಲನ್ನು ತೆರೆದು ನೋಡುತ್ತಾರೆ… ಮೇಘಶ್ಯಾಮನಾದ, ಸೀತಾಲಕ್ಷ್ಮಣಸಹಿತನಾಗಿ ಹನುಮಂತನಿಂದ ಸೇವಿಸಲ್ಪಡುತ್ತಿರುವ, ಕೋದಂಡಪಾಣಿಯಾದ, ಸತ್ಪುರುಷರಿಗೆ ಅಭಯವನ್ನು ನೀಡುವ, ಸರ್ಪರಾಜನ ಹೆಡೆಯಂತಹ ಹಸ್ತದಿಂದ ಶೋಭಿತನಾದ, ಶ್ರೀರಾಮಚಂದ್ರನ ದರ್ಶನ ಭಾಗ್ಯವು ಆ ದಂಪತಿಗಳಿಗೆ ಉಂಟಾಯಿತು! ತ್ಯಾಗರಾಜರು ಪರಮಾನಂದದಿಂದ ಅನೇಕಾನೇಕ ಕೀರ್ತನೆಗಳನ್ನು ಮಧುರವಾಗಿ ಹಾಡುತ್ತ, ಸ್ತುತಿಸುತ್ತ ಹೃತ್ಪೂರ್ವಕವಾಗಿ ಶ್ರೀರಾಮಚಂದ್ರನನ್ನು ಸಂತೋಷಗೊಳಿಸಿದರು. ತ್ಯಾಗರಾಜರಿಗೆ ಹೀಗೆ ದರ್ಶನ ಭಾಗ್ಯವನ್ನು ಕರುಣಿಸಿದ ಆ ದೇವದೇವನು ಅಂತರ್ಧಾನನಾದನು. ಬಹಿರ್ದೃಷ್ಟಿಗೆ ಅಂತರ್ಧಾನನಾದರೂ ತ್ಯಾಗರಾಜರ ಅಂತರ್ದೃಷ್ಟಿಯಲ್ಲಿ ಶ್ರೀ ಸೀತಾರಾಮಲಕ್ಷ್ಮಣ ಹನುಮಂತರು ಶಾಶ್ವತವಾಗಿ ನೆಲೆಸಿದರು.

ತ್ಯಾಗರಾಜರ ಗಾಯನ ಮಾಧುರ್ಯ, ಅವರ ರಾಮಭಕ್ತಿ, ಗುರುದಕ್ಷಿಣೆಯನ್ನೇ ತೆಗೆದುಕೊಳ್ಳದೆ ಪಾಠವನ್ನು ಮಾಡುವ ರೀತಿ, ಅಗ್ರಹಾರಗಳಲ್ಲಿ ಉಂಛವೃತ್ತಿ ಮಾಡುತ್ತ ಭಕ್ತಿಯಿಂದ ಸುಶ್ರಾವ್ಯವಾಗಿ ಗಾಯನ ಮಾಡುತ್ತಿದ್ದ ಪರಿ, ಆ ಸಮಯದಲ್ಲಿ ಅವರು ರಚಿಸಿ ಹಾಡುತ್ತಿದ್ದ ಉತ್ಕೃಷ್ಟವಾದ ಕೀರ್ತನೆಗಳ ಮಾಧುರ್ಯ, ರಾಮನಿಗೆ ಮಾಡುತ್ತಿದ್ದ ಸರ್ವೋಪಚಾರ ಪೂಜೆಗಳು, ಅವರ ಸಜ್ಜನಿಕೆ, ಶ್ರದ್ಧೆ ಇತ್ಯಾದಿಗಳು ಜನಜನಿತವಾಗಿ ಹೆಸರುವಾಸಿಯಾದದ್ದಲ್ಲದೆ ಅದು ತಂಜಾವೂರು ದೊರೆಯಾಗಿದ್ದ ಶರಭೋಜಿ ಮಹಾರಾಜನನ್ನೂ ಮುಟ್ಟಿತು.

ಶರಭೋಜಿ ಮಹಾರಾಜನು ತನ್ನ ಆಸ್ಥಾನದಲ್ಲಿ ಶ್ರೀತ್ಯಾಗರಾಜರ ಗಾಯನವನ್ನು ಕೇಳಬೇಕು, ತನ್ನ ಆಸ್ಥಾನದ ವಿದ್ವಾಂಸನನ್ನಾಗಿ ಮಾಡಿಕೊಂಡು ಆತನ ಗಾಯನವನ್ನು ತನ್ನ ಇಷ್ಟಬಂದಾಗಲೆಲ್ಲ ಕೇಳುವಂತಾಗಬೇಕು ಎಂಬ ಅಪೇಕ್ಷೆಯಿಂದ ಒಂದು ದಿನ ತನ್ನ ರಾಜಭಟರನ್ನು ಉತ್ತಮವಾದ ಬೆಲೆಬಾಳುವ ಉಡುಗೊರೆಗಳ ಸಮೇತ ಅವರ ಮನೆಗೆ ಕಳುಹಿಸಿ ಅವರಿಗೆ ರಾಜನ ಆಸ್ಥಾನಕ್ಕೆ ಆಹ್ವಾನವನ್ನಿತ್ತನು. ಆ ರಾಜಭಟರು ಬಂದು ತ್ಯಾಗರಾಜರಿಗೆ ರಾಜಾಜ್ಞೆಯನ್ನು ತಿಳಿಸಿದರು. ಆದರೆ ತ್ಯಾಗರಾಜರು “ನಾನು ಶ್ರೀರಾಮಚಂದ್ರನ ಭಕ್ತ. ನಾನು ಬಡವನಾದರೂ ಹಣಕ್ಕಾಗಿ ಮನುಷ್ಯರ ಸಂತೋಷಕ್ಕಾಗಿ ಹಾಡಲಾರೆ. ನಾನು ಹಾಡುವುದೇನಿದ್ದರೂ ಆ ಭಗವಂತನಿಗೆ ಮಾತ್ರ, ರಾಮಚರಣದ ಸೇವೆ ಮಾತ್ರ ನನ್ನ ಗುರಿ. ನಾನು ಬರಲಾರೆ” – ಎಂದುಬಿಟ್ಟರು! ಅದನ್ನು ಕೇಳಿದ ರಾಜನಿಗೆ ಬಹಳ ಕೋಪ ಬಂದಿತು. ಪುನಃ ಬಲವಂತರಾದ ಭಟರನ್ನು ತ್ಯಾಗರಾಜರ ಬಳಿಗೆ ಅವರನ್ನು ಬಲಾತ್ಕರಿಸಿಯಾದರೂ ಕರೆದುಕೊಂಡೇ ಬರಬೇಕೆಂದು ಆಜ್ಞೆ ಮಾಡಿ ಕಳುಹಿಸಿದನು. ಆದರೆ ಆ ಭಟರೂ ತ್ಯಾಗರಾಜರ ಪೂಜೆಯನ್ನು ನೋಡುತ್ತ, ಭಜನೆಯನ್ನು ಕೇಳುತ್ತ ಕೇಳುತ್ತ ರಾಜಾಜ್ಞೆಯನ್ನೇ ಮರೆತು ಅಲ್ಲೇ ತ್ಯಾಗರಾಜರ ಮನೆಯಲ್ಲೇ ಉಳಿದುಬಿಟ್ಟರು.. ತ್ಯಾಗರಾಜರಂತಹ ಪರಮಭಕ್ತರನ್ನು ಬಲಾತ್ಕರಿಸಲು ಅವರಿಗೆ ಧೈರ್ಯ ಬರಲಿಲ್ಲ. ಆಮೇಲೆ ಅವರುಗಳು ವಾಪಸ್ ಹೊರಟುಹೋದರು. ಈ ಮಧ್ಯೆ ಶರಭೋಜಿ ಮಹಾರಾಜನಿಗೆ ತಡೆಯಲಾಗದಷ್ಟು, ಯಾವ ಮದ್ದಿಗೂ ಗುಣವಾಗದಂತಹ ಹೊಟ್ಟೆ ನೋವು ಬಂದುಬಿಟ್ಟಿತು. ಆ ರಾಜನು ಹೊಟ್ಟೆಯ ಬಾಧೆಯನ್ನು ತಡೆಯಲಾಗದೆ ಬಹಳ ಪರಿತಪಿಸಿಬಿಟ್ಟನು. ಆಗ ಬುದ್ಧಿವಂತನಾದ, ವಿವೇಕವುಳ್ಳ ಮಂತ್ರಿಯೊಬ್ಬನು ಮಹಾರಾಜನಿಗೆ ಹೀಗೆ ಹೇಳಿದನು – “ಮಹಾರಾಜರೇ, ನೀವು ಮಹಾಮಹಿಮರಾದ, ಭಕ್ತರಾದ ಶ್ರೀ ತ್ಯಾಗರಾಜರನ್ನು ನಿಮ್ಮ ಸ್ವಂತ ಸುಖಕ್ಕಾಗಿ ಬಳಸಿಕೊಳ್ಳಬೇಕೆಂಬ ಇರಾದೆಯಿಂದ ಭಟರನ್ನು ಕಳುಹಿಸಿದ್ದರಿಂದ ನಿಮಗೆ ಈ ಸಂಕಟವು ಬಂದಿತು. ನೀವು ಅವರಿಗೆ ಶರಣು ಹೋದರೆ ದಯಾಳುವೂ ಪರಮಸಾತ್ತ್ವಿಕರೂ ಆದ ತ್ಯಾಗರಾಜರು ನಿಮ್ಮ ಅಪರಾಧವನ್ನು ಮನ್ನಿಸುತ್ತಾರೆ. ಆಗಲೇ ನಿಮಗೆ ಈ ಉದರಬಾಧೆಯಿಂದ ಮುಕ್ತಿ”.

ಇದನ್ನು ಕೇಳಿದ ಮಹಾರಾಜನು ಆ ಕ್ಷಣದಲ್ಲಿಯೇ ರೋಗದಿಂದ ಪಾರಾಗಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ಆಸೆಯಿಂದ ತ್ಯಾಗರಾಜರ ಬಳಿ ಹೋಗಲು ಸಂಕಲ್ಪವನ್ನು ಮಾಡಿದನು. ಆ ಸಂಕಲ್ಪಮಾತ್ರದಿಂದಲೇ ಆತನ ಹೊಟ್ಟೆ ನೋವು ಕಡಿಮೆಯಾಯಿತು. ಇದರಿಂದ ರಾಜನು ತ್ಯಾಗರಾಜರ ಮಹಿಮೆಯನ್ನು ತಿಳಿದವನಾಗಿ, ಅವರ ಬಳಿಗೆ ಬಂದು ಅವರ ಚರಣಗಳಿಗೆ ನಮಸ್ಕರಿಸಿ ತಾನು ಮಾಡಿದ ಅಕ್ಷಮ್ಯ ಅಪರಾಧವನ್ನು ಕ್ಷಮಿಸುವಂತೆ ಕೋರಿಕೊಂಡನು. ಆತನಿಗೆ ತ್ಯಾಗರಾಜರು ಭಕ್ತಿಯನ್ನು ಬಿಟ್ಟು ಹಣಕ್ಕೆ ಖಂಡಿತಾ ಒಲಿಯುವುದಿಲ್ಲವೆಂಬ ಸತ್ಯವು ಪುನಃ ಪುನಃ ಗೋಚರವಾಗುವಂತಾಯಿತು. ಆತನು ಪುನಃ ಪುನಃ ನಮಸ್ಕಾರ ಮಾಡುತ್ತ, ಕ್ಷಮೆ ಕೇಳುತ್ತ, ಮುಂದೆ ತಾನೇ ಆಗಾಗ್ಗೆ ತ್ಯಾಗರಾಜರ ಸನ್ನಿಧಿಗೆ ಹೋಗಿ ಭಕ್ತಿಯಿಂದ ಅವರ ಗಾಯನವನ್ನು ಕೇಳುತ್ತ, ತಾನೂ ಭಕ್ತಿಯಿಂದ ಹಾಡುತ್ತ, ತ್ಯಾಗರಾಜರಿಗೆ ಬಹಳ ಪ್ರಿಯವಾದವನೂ ಆದನು.

(ಇನ್ನು ಮುಂದಿನವು ಪ್ರೊ. ಸಾಂಬಮೂರ್ತಿಯರ – ತ್ಯಾಗರಾಜ-ಎಂಬ ಪುಸ್ತಕದಿಂದ)

ತಿರಿಭುವನಂ ಎಂಬ ಪ್ರದೇಶವು ಕುಂಭಕೋಣಂ ಬಳಿ ಇದೆ. ಅಲ್ಲಿ ಸ್ವಾಮಿನಾಥ ದೇವರ ದೇವಸ್ಥಾನದಲ್ಲಿ, ಆ ದೇವರ ಹೆಸರನ್ನೇ ಹೊಂದಿದ ಭಕ್ತರಾದ ಸ್ವಾಮಿನಾಥ ಅಯ್ಯರ್ ಎಂಬುವವರು ಅರ್ಚಕರಾಗಿ ದೇವರಿಗೆ ಪೂಜಾ ಕೈಂಕರ್ಯವನ್ನು ಭಕ್ತಿಯಿಂದ ಸಲ್ಲಿಸುತ್ತಿದ್ದರು. ಈತ ಅದ್ಭುತವಾದ ನಟನೂ ಗಾಯಕರೂ ಆಗಿದ್ದರು. ಆಗಿನ ಕಾಲದಲ್ಲಿ ಕೆಲವು ವಿದ್ವಾಂಸರಿಗೆ ಅವರುಗಳು ಹಾಡಿ ತಪಸ್ಸಿನಂತೆ ಸಾಧನೆ ಮಾಡಿ ಒಲಿಸಿಕೊಂಡಿದ್ದ ರಾಗದೇವತೆಯ ಹೆಸರೇ ಅವರ ಹೆಸರಿನೊಂದಿಗೆ ವಿಶೇಷಣವಾಗಿ ಸೇರಿಕೊಳ್ಳುತ್ತಿತ್ತು. ಹೀಗಿರುವವರಲ್ಲಿ ತ್ಯಾಗರಾಜರ ಸಮಕಾಲೀನರಾಗಿ ಅಠಾಣ ಅಪ್ಪಯ್ಯ, ತೋಡಿ ಸೀತಾರಾಮಯ್ಯ ಮುಂತಾದವರು ಹೆಸರುವಾಸಿಯಾಗಿದ್ದರು. ಅವರುಗಳಿಗೆ ಈ ರಾಗಗಳಲ್ಲಿ ಎಷ್ಟು ಪ್ರಾವೀಣ್ಯವಿತ್ತೆಂದರೆ, ಅವರುಗಳಿಗೆ ಆ ರಾಗವೇ ಅಮೂಲ್ಯ ಸಂಪತ್ತಿನ ಒಂದು ಭಾಗವಾಗಿ ಪರಿಗಣಿಸಲ್ಪಟ್ಟು, ಅನೇಕ ಶ್ರೀಮಂತರು ಈ ವಿದ್ವಾಂಸರುಗಳಿಗೆ ಕೀರ್ತಿಯನ್ನು ತಂದುಕೊಟ್ಟಿದ್ದ ಆಯಾ ರಾಗಗಳನ್ನು ಒತ್ತೆ ಇಡಿಸಿಕೊಂಡು ಸಾಲವನ್ನು ನೀಡುತ್ತಿದ್ದರು! ಸಾಲವನ್ನು ಪಡೆದ ಇಂತಹ ವಿದ್ವಾಂಸರು ತಾವುಗಳು ಒತ್ತೆ ಇಟ್ಟು ಪಡೆದ ಸಾಲವನ್ನು ತೀರಿಸುವವರೆಗೂ ಆ ರಾಗವನ್ನು ಹಾಡುವಂತಿರಲಿಲ್ಲ. ಸದಾ ಪ್ರಾಣಪ್ರದವಾಗಿ ಹಾಡುತ್ತಿದ್ದ ಆ ರಾಗಗಳ ಗಾಯನವನ್ನು ಮಾಡಬೇಕೆಂಬ ಮಹದಾಸೆಯಲ್ಲಿ ಆ ಸಂಗೀತಗಾರರು ಆದಷ್ಟು ಶೀಘ್ರದಲ್ಲಿ ತಮ್ಮ ಸಾಲಗಳನ್ನು ತೀರಿಸಿ, ಒತ್ತೆಯಿಟ್ಟಿದ್ದ ರಾಗಗಳನ್ನು ಬಿಡಿಸಿಕೊಳ್ಳುತ್ತಿದ್ದರು. ಸಾಲವನ್ನು ಕೊಡುತ್ತಿದ್ದ ಶ್ರೀಮಂತರಿಗೆ ಸಂಗೀತಪ್ರೀತಿಯು ಎಷ್ಟಿತ್ತೆಂದರೆ, ಆ ಕಲಾವಿದರುಗಳಿಂದ ಆ ರಾಗಗಳನ್ನು ಕೇಳಬೇಕೆಂಬ ಮಹತ್ತರವಾದ ಆಸೆಯಲ್ಲಿ ರಾಗವನ್ನು ಒತ್ತೆ ಇಟ್ಟಿದ್ದ ಆ ವಿದ್ವಾಂಸರುಗಳಲ್ಲೇ ಅದೇ ರಾಗವನ್ನೇ ಹಾಡಿಸಿ, ಸಂತೋಷ ಪಟ್ಟು, ಅವರ ಸಾಲಗಳನ್ನು ವಜಾ ಮಾಡಿಬಿಡುತ್ತಿದ್ದರು! ಎಂದರೆ, ಆ ವಿದ್ವಾಂಸರುಗಳ ಆ ರಾಗಗಳ ಪ್ರಸ್ತುತಿ ಇನ್ನೆಷ್ಟು ದಿವ್ಯವಾಗಿದ್ದಿರಬಹುದು ಎಂದು ನೀವೇ ಊಹಿಸಿಕೊಳ್ಳಿ.

ಇದೇ ರೀತಿಯಲ್ಲಿಯೇ ಈ ಅರ್ಚಕ/ನಟ/ಗಾಯಕ ತಿರಿಭುವನಂ ಸ್ವಾಮಿನಾಥ ಅಯ್ಯರ್ ಗೆ ಆನಂದಭೈರವಿ ರಾಗದ ಮೇಲೆ ಸ್ವಾಮಿತ್ವವು ಇದ್ದಿತು. ಆತನ ಆನಂದಭೈರವಿ ರಾಗದ ಗಾಯನದ ಕೀರ್ತಿಯು ಎಲ್ಲೆಡೆ ಹರಡಿ, ಅನೇಕ ವಿದ್ವಾಂಸರಿಗೂ ಆತನ ಆನಂದಭೈರವಿ ರಾಗವನ್ನು ಕೇಳಿಯೇ ಬಿಡಬೇಕೆಂಬ ಆಸೆಯೂ ಕುತೂಹಲವೂ ಮೂಡಿತು.

ಹೀಗಿರುವಾಗ ಬೊಂಬೆಯಾಟದ ಗುಂಪೊಂದು ತಮ್ಮ ಬೊಂಬೆಯಾಟದ ಪಾತ್ರಗಳಿಗೆ ಹಾಡಲೆಂದು ಈ ಸ್ವಾಮಿನಾಥ ಅಯ್ಯರ್ ಅವರನ್ನು ನೇಮಿಸಿಕೊಂಡು ಊರೂರು ತಿರುಗುತ್ತಾ, ಬೊಂಬೆಯಾಟಗಳನ್ನು ಆಡಿಸುತ್ತ ಹೋಗುತ್ತಿದ್ದರು. ಹೀಗೆ ಅವರ ಬೊಂಬೆಯಾಟವು ತಿರುವೆಯ್ಯಾರಿನ ದೇವಸ್ಥಾನದಲ್ಲಿಯೂ ನಿಗದಿಯಾಗಿ ಅನೇಕ ದಿನಗಳು ಬೊಂಬೆಯಾಟವು ಯಶಸ್ವಿಯಾಗಿ ನಡೆಯಿತು. ಈ ಬೊಂಬೆಯಾಟವನ್ನು ನೋಡಲೂ, ಸ್ವಾಮಿನಾಥಯ್ಯರ್ ಅವರ ಗಾಯನವನ್ನು ಕೇಳಲು ತ್ಯಾಗರಾಜರ ಶಿಷ್ಯರೂ ಬರುತ್ತಿದ್ದರು. ಅವರಿಗೆಲ್ಲ ಈ ಸ್ವಾಮಿನಾಥ ಅಯ್ಯರ್ ಅವರ ಆನಂದಭೈರವಿ ರಾಗದ ಗಾಯನವನ್ನು ಕೇಳಿ ಅತ್ಯಂತ ಆಶ್ಚರ್ಯವೂ ಹಿಡಿಸಲಾರದಷ್ಟು ಸಂತೋಷವೂ ಆಯಿತು. ಅವರುಗಳು ಬಂದು ಶ್ರೀ ತ್ಯಾಗರಾಜರಿಗೆ ಈ ಸ್ವಾಮಿನಾಥಯ್ಯರ್ ಅವರ ಆನಂದಭೈರವಿ ರಾಗದ ಗಾಯನದ ಸಂಗತಿಯನ್ನು ಬಣ್ಣಿಸುತ್ತಾ ತಿಳಿಸಿದರು. ಅವರುಗಳು ಬಣ್ಣ ಕಟ್ಟಿ ವರ್ಣಿಸಿದ ಈ ಪರಿಯಿಂದ ತ್ಯಾಗರಾಜರು ಶಿಷ್ಯರ ಮಾತನ್ನು ಸಂಪೂರ್ಣವಾಗಿ ನಂಬದೆ ಇದ್ದರೂ ಸಹ ಕಡೆಗೆ ಒಂದು ದಿನ ತ್ಯಾಗರಾಜರಿಗೂ ಕುತೂಹಲ ಮೂಡಿ, ಬೊಂಬೆಯಾಟವಾಗುವಲ್ಲಿ ಆಗಮಿಸಿ, ಯಾರಿಗೂ ತಮ್ಮ ಬರವು – ಇರವು ತಿಳಿಯದಂತೆ ದೂರದಲ್ಲಿ, ಮರೆಯಲ್ಲಿ ನಿಂತು ಬೊಂಬೆಯಾಟವನ್ನು ವೀಕ್ಷಿಸಿದರು. ಅವರಿಗೆ ಸ್ವಾಮಿನಾಥ ಅಯ್ಯರ್ ಅವರ ಆನಂದಭೈರವಿ ರಾಗದ ಗಾಯನವನ್ನು ಕೇಳಿ ಅಪಾರ ಸಂತೋಷವೂ ಆಶ್ಚರ್ಯವೂ ಉಂಟಾಯಿತು. ತ್ಯಾಗರಾಜರು ಉಳಿದವರಿಗೆ ಅಗೋಚರವಾಗಿ ಆವರೆಗೂ ದೂರದಲ್ಲಿ ನಿಂತಿದ್ದರೂ ಆ ಬೊಂಬೆಯಾಟವು ಮುಗಿದಾನಂತರ ಕಲಾವಿದರುಗಳಿಗೆ ಮೆಚ್ಚುಗೆಯನ್ನು ಹೇಳದೇ ಹೋಗುವುದು ಸಭ್ಯತೆಯೂ ಸಹೃದಯತೆಯೂ ಅಲ್ಲವೆಂದು ಭಾವಿಸಿ, ತ್ಯಾಗರಾಜರು ನಿಧಾನವಾಗಿ ಕಲಾವಿದ್ದರೆಡೆಗೆ ನಡೆದುಬಂದರು. ಅಷ್ಟರಲ್ಲಿ ಕೆಲವರಿಗೆ ತ್ಯಾಗರಾಜರ ಗುರುತು ದೊರೆತು ಆಶ್ಚರ್ಯವಾಗಿ ಬೆರಗಿನಿಂದಲೇ ಅವರಿಗೆ ಮಾತು ಹೊರಡಲಿಲ್ಲ! ಇಡೀ ಸಭೆಯಲ್ಲಿ ಆಶ್ಚರ್ಯ, ನಿಶ್ಶಬ್ದ, ಸಂತೋಷಗಳು ತುಂಬಿದವು. ಎಲ್ಲರೂ ತ್ಯಾಗರಾಜರ ಆಶೀರ್ವಾದಪೂರ್ವಕ ಮಾತುಗಳನ್ನು ಆಲಿಸಲು ಕಾತರದಿಂದ ಕಾಯುತ್ತಿದ್ದರು. ಇದು ತಿರಿಭುವನಂ ಸ್ವಾಮಿನಾಥ ಅಯ್ಯರ್ ಗೂ ತಿಳಿದು, ಬೆರಗುವಡೆದು, ಆತ ತ್ಯಾಗರಾಜರಿದ್ದಲ್ಲಿಗೇ ಓಡಿ ಬಂದು ಅವರ ಪಾದಗಳಿಗೆ ಭಕ್ತಿಯಿಂದ ನಮಸ್ಕರಿಸಿದರು. ತ್ಯಾಗರಾಜರಲ್ಲಿ ಕ್ಷಮೆ ಬೇಡುತ್ತ – “ಮಹಾನುಭಾವರೇ ತಾವು ಬಂದದ್ದು ನನಗೆ ತಿಳಿಯಲೇ ಇಲ್ಲ! ತಾವು ಇದ್ದಿರೆಂದು ತಿಳಿದಿದ್ದರೆ ರಾಗಾಲಾಪನೆಯನ್ನು ಮಾಡುವ ಧೈರ್ಯವನ್ನು ನಾನು ಖಂಡಿತ ಮಾಡುತ್ತಿರಲಿಲ್ಲ! ದಯವಿಟ್ಟು ಕ್ಷಮಿಸಿ” — ಎಂದು ಬೇಡಿಕೊಂಡರು. ಆಗ ತ್ಯಾಗರಾಜರು – “ಅಯ್ಯಾ, ನಾನು ನಿಮ್ಮ ಆನಂದಭೈರವಿಯ ಆಲಾಪನೆಯನ್ನು ಕೇಳಿ ಅತ್ಯಂತ ಆನಂದಗೊಂಡಿದ್ದೇನೆ, ಸಂತೃಪ್ತಿಗೊಂಡಿದ್ದೇನೆ. ನನ್ನ ಶಿಷ್ಯರು ನೀವು ಹಾಡುವ ಬಗೆಯನ್ನು ಹಲವು ಬಾರಿ ವರ್ಣಿಸಿದ್ದಿದ್ದರಿಂದ ನಾನೇ ಸ್ವತಃ ಬಂದು ಕೇಳಬೇಕೆಂದು ಇದ್ದೆ. ನಾನೇ ಇಂದು ಬಂದು ಕೇಳಿದ್ದು ನನಗೆ ಬಹಳ ಸಂತೋಷವಾಯಿತು. ನಿಮಗೇನಾದರೂ ನೀಡಬೇಕೆಂಬ ಆಸೆಯು ನನಗುಂಟಾಗಿದೆ. ನನ್ನ ಬಳಿ ಇರುವ ಏನಾದರೂ ಒಂದನ್ನು ಕೇಳಿ – ನಾನು ಇದೀಗಲೇ ನೀಡುತ್ತೇನೆ” – ಎಂದರು. ನೆರೆದ ಎಲ್ಲರೂ “ಸಾಧು ಸಾಧು” – ಎಂದು ಹೇಳಿ ಸಂತಸಪಟ್ಟರು. ಆಗ ಸ್ವಾಮಿನಾಥ ಅಯ್ಯರ್ ಅವರ ಹೃದಯವು ತುಂಬಿ ಬಂದಿತು, ಕಣ್ಣುಗಳಲ್ಲಿ ನೀರು ತುಂಬಿ, ಬಾಯಿಯು ಕಟ್ಟಿ ಹೋಯಿತು. ಆತನು – “ಅಯ್ಯಾ ಪೂಜ್ಯರೇ ನಾನು ತಮ್ಮಲ್ಲಿ ಒಂದು ವರವನ್ನು ಬೇಡುತ್ತೇನೆ ಆಗಬಹುದು?” – ಎಂದು ಕೇಳಿಕೊಳ್ಳಲು ತ್ಯಾಗರಾಜರು – “ಅಯ್ಯಾ ನೀನು ಏನು ಬೇಕಾದರೂ ಕೇಳು, ನಾನು ನೀಡುತ್ತೇನೆ” – ಎಂದು ಹೇಳಿಬಿಟ್ಟರು. ಆಗ ಆ ಕಲಾವಿದನು – “ಅಯ್ಯಾ ಪೂಜ್ಯರೇ, ಇಂದಿನಿಂದ ನೀವು ಆನಂದಭೈರವಿ ರಾಗದಲ್ಲಿ ಕೀರ್ತನೆಗಳನ್ನು ರಚಿಸಬಾರದು! ಆಗ ಮುಂದಿನ ಪೀಳಿಗೆಯು ಶ್ರೀ ತ್ಯಾಗರಾಜರು ಪ್ರಸಿದ್ಧವಾದ ಆನಂದಭೈರವಿ ರಾಗದಲ್ಲಿ ಕೀರ್ತನೆಗಳನ್ನೇ ಏಕೆ ರಚಿಸಲಿಲ್ಲ ಎಂದು ಕುತೂಹಲಗೊಂಡು ಕಾರಣಗಳನ್ನು ಹುಡುಕಿದರೆ, ಈ ಕಾರಣವನ್ನು ಹುಡುಕುವಾಗಲೆಲ್ಲ ಈ ವಿಷಯಗಳು ಎಲ್ಲರಿಗೂ ತಿಳಿಯುತ್ತದೋ, ಅಲ್ಲಿಯವರೆಗೂ ನನ್ನ ಹೆಸರೂ ಅಜರಾಮರವಾಗಿ ಉಳಿಯುತ್ತದೆಯಾದ್ದರಿಂದ ತಾವು ಇನ್ನು ಮುಂದೆ ಆನಂದಭೈರವಿ ರಾಗದಲ್ಲಿ ಕೀರ್ತನೆಗಳನ್ನು ರಚಿಸಲೇ ಬಾರದು. ನನಗೆ ಈ ವರವನ್ನು ನೀಡಿ ಕರುಣಿಸಬೇಕೆಂದು ಕೋರಿಕೆ” – ಎಂದು ಹೇಳಿ ಪುನಃ ತ್ಯಾಗರಾಜರಿಗೆ ನಮಸ್ಕಾರ ಮಾಡಿದನು. ಹೀಗೆ ಆತನಿಗೆ ವರವನ್ನು ನೀಡಿದ ಅನಂತರ ತ್ಯಾಗರಾಜರು ಎಂದೂ ಆನಂದಭೈರವಿ ರಾಗದಲ್ಲಿ ಕೀರ್ತನೆಗಳನ್ನು ರಚಿಸಲೇ ಇಲ್ಲ. ಈಗ ಉಳಿದು ಕೊಂಡಿರುವ ಒಂದೆರಡು ರಚನೆಗಳು ಈ ಘಟನೆಯು ಸಂಭವಿಸುವ ಮೊದಲೇ ಶಿಷ್ಯರಿಗೆ ಬಾಯಿಪಾಠವಾಗಿದ್ದಿದ್ದರಿಂದ ಪರಂಪರೆಯಲ್ಲಿ ಉಳಿದುಕೊಂಡಿವೆಯೋ ಹೊರತು ತ್ಯಾಗರಾಜರು ಆಮೇಲೆ ರಚಿಸಲಿಲ್ಲ. ಈ ಘಟನೆ ನಡೆಯುವ ಮುನ್ನ ಶ್ರೀ ತ್ಯಾಗರಾಜರು ರಚಿಸಿದ ಕೀರ್ತನೆಗಳು ಯಾವುವೆಂದರೆ ದಿವ್ಯನಾಮ ಸಂಕೀರ್ತನೆಯಾದ “ರಾಮ ರಾಮ ನೀ ವರಮು”, ಉತಸ್ವಸಂಪ್ರದಾಯ ಕೀರ್ತನೆಯಾದ “ಕ್ಷೀರಸಾಗರ ವಿಹಾರ”, ಹಾಗೂ “ನೀಕೇ ತೆಲಿಯಕ “ ಎಂಬ ಕೃತಿ.

ಬಾಗಿಲು ಕಾಯುವ ದ್ವಾರಪಾಲಕನೊಬ್ಬನು ದಿನದಿನವೂ ತ್ಯಾಗರಾಜರ ಮನೆಗೆ ಬಂದು ಅಲ್ಲಿ ನಡೆಯುತಿದ್ದ ಭಜನೆಯಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದನು. ಒಂದು ದಿನ ಆತನು ತ್ಯಾಗರಾಜರ ಬಳಿಗೆ ಬಂದು, ಅವರ ಪಾದಗಳಿಗೆ ಭಕ್ತಿಯಿಂದ ವಂದಿಸಿ, ತನಗೊಂದು ಹಾಡನ್ನು ಹೇಳಿಕೊಡಬೇಕೆಂದು ಪ್ರಾರ್ಥಿಸಿದನು. ಆತನೋ ಸಂಗೀತವನ್ನು ಕಲಿತವನೂ ಅಲ್ಲ, ಪ್ರತಿಭೆ ಇದ್ದವನಂತೂ ಖಂಡಿತ ಅಲ್ಲ. ಆದರೆ ಆತನಿಗೆ ದೇವರ ಭಕ್ತಿ ಮಾತ್ರ ಇದ್ದಿತಷ್ಟೆ. ತ್ಯಾಗರಾಜರು ಆತನ ಕೋರಿಕೆಯನ್ನು ಮನ್ನಿಸಿ, ಅವನ ಕಂಠದ ಇತಿ – ಮಿತಿಯನ್ನು ತಿಳಿಯಲೆಂದು ಏನನ್ನಾದರೂ ಹಾಡಬೇಕೆಂದು ಆತನಿಗೆ ಪ್ರೀತಿಯಿಂದ ಹೇಳಿದರು. ಆತನ ಕಂಠಕ್ಕೆ ತ್ರಿಸ್ಥಾಯಿಯಲ್ಲಿ ಗಾಯನ ಮಾಡುವ ಶಕ್ತಿ ಇಲ್ಲವೆಂದು ತಿಳಿದ ಆ ಪೂಜ್ಯರು ಆತನಿಗಾಗಿ ಬಹಳ ಸುಲಭವಾಗಿ ಗಾಯನ ಮಾಡಲು ಸಾಧ್ಯವಾಗುವಂತೆ ಯದುಕುಲುಕಾಂಬೋಜಿ ರಾಗದಲ್ಲಿ “ನೀ ದಯಚೇ” – ಎಂಬ ಕೀರ್ತನೆಯನ್ನು ರಚಿಸಿ ಆತನಿಗೆ ಪಾಠವನ್ನು ಮಾಡಿದರಂತೆ! ನಿಜವಾದ ಹಿರಿತನ ಉಳ್ಳವರು ಹಾಗೆಯೇ ಇರುತ್ತಾರೆ! ಅವರಿಗೂ ಸರ್ವರನ್ನೂ ಏಕ ರೀತಿಯಲ್ಲಿ ಕಾಣುವ, ಅನುಗ್ರಹವನ್ನು ಮಾಡುವ ಶಕ್ತಿ ಇರುತ್ತದೆ.

ತ್ಯಾಗರಾಜರ ಶಿಷ್ಯ ವಾಲಾಜಾಪೇಟೆಯ ವೆಂಕಟರಮಣ ಭಾಗವತ

ವಾಲಾಜಾಪೇಟೆಯ ವೆಂಕಟರಮಣ ಭಾಗವತರು ಶ್ರೀ ತ್ಯಾಗರಾಜರ ಪ್ರಮುಖ ಶಿಷ್ಯರುಗಳಲ್ಲಿ ಒಬ್ಬರು. ಈತ ಕ್ರಿ. ಶ. 1781 ರಿಂದ 1874 ರವರೆಗೆ ಜೀವಿಸಿದ್ದವರು. ತ್ಯಾಗರಾಜರ ಕೀರ್ತನೆಗಳನ್ನೆಲ್ಲ ಸಂಗ್ರಹಿಸಿ ಸಂರಕ್ಷಿಸಿ ಸಂಗೀತಲೋಕಕ್ಕೆ ಬಹಳವಾಗಿ ಉಪಕರಿಸಿದವರು. ಈಗಲೂ ಅವರ ವಂಶಸ್ಥರು ಮಧುರೈಯಲ್ಲಿ ಸೌರಾಷ್ಟ್ರ ಸಂಗೀತ ಸಭಾ ಎಂಬ ಹೆಸರಿನ ಸಂಸ್ಥೆಯನ್ನು ಕಟ್ಟಿ ಅದರ ಮೂಲಕವಾಗಿ ತ್ಯಾಗರಾಜರ ಹಸ್ತಪ್ರತಿಗಳನ್ನೂ ತಂಬೂರಿಯನ್ನೂ ಸಂರಕ್ಷಣೆ ಮಾಡುತ್ತಲೇ ಬಂದಿದ್ದಾರೆ.

ಸಂಗೀತಕಲಿಕೆಯ ಆರಂಭದಲ್ಲಿ ವಾಲಾಜಾಪೇಟೆ ವೆಂಕಟರಮಣ ಭಾಗವತರು ನಿರೀಕ್ಷಿಸಿದಷ್ಟು ಉತ್ಕರ್ಷವನ್ನು ತೋರಿಸದಿದ್ದನ್ನು ಕಂಡು ತ್ಯಾಗರಾಜರಿಗೆ ತನ್ನ ಶಿಷ್ಯನಿಗೆ ಸರಿಯಾಗಿ ವಿದ್ಯೆಯನ್ನು ಧಾರೆ ಎರೆಯಲು ಸಾಧ್ಯವಾಗಲಿಲ್ಲವಲ್ಲ, ಎಂದು ದುಃಖವಾಗಿ ಭಗವಂತನಾದ ಶ್ರೀರಾಮಚಂದ್ರನನ್ನು ಆತನಿಗೆ ವಿದ್ಯೆಯನ್ನು ಕರುಣಿಸಲು ಪ್ರಾರ್ಥಿಸಿದರಂತೆ. ಮರುದಿನದಿಂದಲೇ ದಿನ ದಿನವೂ ವೆಂಕಟರಮಣ ಭಾಗವತರು ಅಚ್ಚರಿಯಾಗುವಷ್ಟು ಸಂಗೀತವಿದ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಪ್ರತಿಭಾಶಾಲಿಗಳಾಗಿ ಬೆಳೆಯುತ್ತಾ ಅನತಿಕಾಲದಲ್ಲಿಯೇ ಅತ್ಯಂತ ಒಳ್ಳೆಯ ವಿದ್ವಾಂಸರಾದರಂತೆ! ಮುಂದೆ ಇಪ್ಪತ್ತಾರು ವರ್ಷಗಳ ತ್ಯಾಗರಾಜರ ಜೊತೆಗೇ ಇದ್ದು ಗುರುಗಳ ಸೇವೆ ಮಾಡಿದ್ದರಿಂದ ಅವರ ರಚನೆಗಳನ್ನು ಸಂಗ್ರಹ ಮಾಡಿ ಲೋಕಕ್ಕೆ ನೀಡಿ, ಉಪಕರಿಸಿ, ತನ್ಮೂಲಕ ಅವರ ಹೆಸರೂ ಚಿರಸ್ಥಾಯಿಯಾಗುವಂತಾಯಿತು. ವಾಲಾಜಾಪೇಟೆ ವೆಂಕಟರಮಣ ಭಾಗವತರೂ ಸಹ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು.

ಇಂತಹ ವಿಷಯಗಳಿಂದ ತಿಳಿಯುವುದೇನೆಂದರೆ “ಗುರುವಿನ ಅನುಗ್ರಹ ಇದ್ದರೆ ಮಾತ್ರ ವಿದ್ಯೆ ಒಲಿಯುತ್ತದೆ”.

ತ್ಯಾಗರಾಜರ ಶಿಷ್ಯ ವೀಣ ಕುಪ್ಪಯ್ಯ

ವೀಣಾ ಕುಪ್ಪಯ್ಯರ್ ಎನ್ನುವವರು ಹೆಸರೇ ಹೇಳುವಂತೆ ವೀಣೆಯಲ್ಲಿ ಒಳ್ಳೆಯ ವಿದ್ವಾಂಸರಾಗಿದ್ದವರು. ಈತ ಅನೇಕ ವರ್ಣಗಳನ್ನೂ ರಚಿಸಿ, ವಾಗ್ಗೇಯಕಾರರೂ ಆಗಿದ್ದಾರೆ. ವೀಣಾ ಕುಪ್ಪಯ್ಯರ್ ಅವರೂ ಶ್ರೀ ತ್ಯಾಗರಾಜರ ಶಿಷ್ಯರು. ಬಹಳ ಗುರುಭಕ್ತಿ ಇದ್ದವರು. ಕುಪ್ಪಯ್ಯರ್ ಅವರು ತ್ಯಾಗರಾಜರಲ್ಲಿ ವಿದ್ಯೆಯನ್ನು ಕಲಿತಲು ಬಂದಾಗ ತನ್ನ ಮಹಾನ್ ಗುರುವಿನಲ್ಲಿ ತಾನು ವೀಣಾವಾದಕನೆಂದು ಹೇಳಲೇ ಇಲ್ಲ. ತಾನೊಬ್ಬ ವೀಣಾವಾದಕನೂ ಹೌದೆಂದು ಹೇಗೆ ತಾನೆ ಹೇಳುವುದು? ತಾನು ಸ್ವಪ್ರತಿಷ್ಠೆಯನ್ನು ಮೆರೆದಂತಾಗುವುದಿಲ್ಲವೇ? – ಎಂದು ಭಾವಿಸಿ, ಹೇಳಲು ನಾಚಿಕೆಯಾಗಿ ಆತ ವಿಷಯವನ್ನು ತನ್ನ ಗುರುಗಳಿಗೆ ಹೇಳಲೇ ಇಲ್ಲ. ಆದರೆ, ಪ್ರತಿದಿನವೂ ತನ್ನ ಗುರುಗಳಾದ ತ್ಯಾಗರಾಜರು ವೀಣೆಯನ್ನು ನುಡಿಸಿಕೊಂಡು ಹಾಡುತ್ತ ಹಾಡುತ್ತ ಶ್ರೀರಾಮನ ಪೂಜೆ, ಸೇವಾದಿಗಳನ್ನು ಮಾಡುವುದನ್ನು ಕಂಡು, ತಾನೂ ತನ್ನ ಗುರುಗಳ ವೀಣೆಯನ್ನು ನುಡಿಸಬೇಕು ಎಂದು ಆಸೆಯಾಗಲು ಆರಂಭಿಸಿತು. ಕಾಲ ಕಳೆದಂತೆ ಈ ಆಸೆಯು ಬೃಹದಾಕಾರವಾಗಿ ಬೆಳೆಯಲು ಆರಂಭಿಸಿತು.

ಒಂದು ದಿನ ಶ್ರೀ ತ್ಯಾಗರಾಜರು ಯಾವುದೋ ಕಾರ್ಯಕ್ಕಾಗಿ ಹೊರಗೆ ಹೋಗಿದ್ದಾರೆ, ಉಳಿದ ಶಿಷ್ಯರೂ ಯಾರೂ ಮನೆಯಲ್ಲಿ ಇರಲಿಲ್ಲ. ಇದಕ್ಕಾಗಿ ಕಾಯುತ್ತಿದ್ದ ಕುಪ್ಪಯ್ಯರ್ ಆಚೀಚೆ ನೋಡಿ, ಯಾರೂ ಇಲ್ಲವೆಂದು ಖಾತರಿಪಡಿಸಿಕೊಂಡು ದೇವರ ಮನೆಯಲ್ಲಿ ಪೂಜೆ ಮಾಡಿ ಇಟ್ಟಿದ್ದ ತ್ಯಾಗರಾಜರ ವೀಣೆಯನ್ನು ತೆಗೆದುಕೊಂಡು ನುಡಿಸಲು ಆರಂಭಿಸಿದರು. ತ್ಯಾಗರಾಜರ ವೀಣೆಯೋ ಅತ್ಯಂತ ನಾದಮಯವಾಗಿ ಮಧುರವಾದ ಧ್ವನಿಯಿಂದ ಕೂಡಿ ಝೇಂಝೇಂಕರಿಸುತ್ತಿತ್ತು. ವೀಣಾ ಕುಪ್ಪಯ್ಯರ್ ಗೆ ಮೈಮರೆಯಿತು.. ಕಾಲದ ಪರಿವೆ ಇಲ್ಲದಂತಾಯಿತು.. ಅವರ ಮೈ ಮನಗಳಲ್ಲಿ ಆ ವೀಣೆಯ ನಾದಾನುಸಂಧಾನವಾಗುತ್ತ ಸ್ವರಪ್ರವಾಹಗಳೇ ಹೊರಡುತ್ತಿದ್ದವು. ವೀಣಾವಾದನದ ಸುಮಧುರಧ್ವನಿಯನ್ನು ಕೇಳಿ ತ್ಯಾಗರಾಜರ ಪತ್ನಿಯು ಬಾಗಿಲಿನ ಬದಿಯಲ್ಲಿ ಬಂದುನಿಂತು ಆಲಿಸಲು ತೊಡಗಿದರು. ಸ್ವಲ್ಪ ಹೊತ್ತು ಬಿಟ್ಟು, ತೆರಳಿದ್ದ ತ್ಯಾಗರಾಜರೂ ಮರಳಿ ಮನೆಗೆ ಬಂದಾಗ ತಮ್ಮ ವೀಣೆಯಲ್ಲಿ ಸುಮಧುರ ಸಂಗಿತವು ನುಡಿಸಲ್ಪಡುವುದನ್ನು ಕೇಳಿ, ಯಾರೆಂದು ಆಶ್ಚರ್ಯ ಪಡುತ್ತ, ನುಡಿಸುವವರ ಏಕಾಗ್ರತೆ ಭಂಗವಾಗದಿರಲೆಂದು, ಅಲ್ಲೇ ಹೊರಜಗುಲಿಯಲ್ಲಿ ಕುಳಿತು, ಕೇಳಿ ಆನಂದಿಸಿದರು. ಆಮೇಲೆ ಒಳಗೆ ಬಂದು ನೋಡಿದಾಗ ವೀಣೆಯ ವಾದನದಲ್ಲಿ ಮೈ ಮರೆತಿದ್ದ ತಮ್ಮ ಶಿಷ್ಯ ಕುಪ್ಪಯ್ಯರ್ ನನ್ನು ನೋಡಿ ಆಶ್ಚರ್ಯಗೊಂಡರು. ತನ್ನ ಶಿಷ್ಯನು ಇಷ್ಟು ಸೊಗಸಾಗಿ ವೀಣೆಯನ್ನು ನುಡಿಸುವ ಸಂಗತಿಯು ಅವರಿಗೆ ಮಹದಾನಂದವನ್ನುಂಟುಮಾಡಿತು. ಕುಪ್ಪಯ್ಯರ್ ಅವರು ವೀಣಾವಾದನವನ್ನು ಮುಗಿಸಿ, ಕಣ್ತೆರೆದು ನೋಡುತ್ತಾರೆ! ಎದುರಿಗೆ ತ್ಯಾಗರಾಜರೇ ನಿಂತಿದ್ದಾರೆ! ಅವರ ಜಂಘಾಬಲ ಉಡುಗಿತು, ಬಾಯಿಯ ಪಸೆ ಅರಿತು, ಕಣ್ಣೀರು ತುಳುಕಿತು, ಭಯದಿಂದ ನಡುಗಿದರು. ಎದ್ದು ಬಂದು ಗುರುಗಳ ವೀಣೆಯನ್ನು ಮುಟ್ಟಿದ್ದು ಅಪರಾಧವಾಯಿತೆಂದೂ ಮನ್ನಿಸಬೇಕೆಂದೂ ಹೇಳಿ ಗುರುಗಳ ಕಾಲುಗಳನ್ನು ಮುಟ್ಟಿ ನಮಸ್ಕಾರವನ್ನು ಮಾಡಿದರು. ಆದರೆ ತ್ಯಾಗರಾಜರು ನಗುತ್ತಾ.. “ಕುಪ್ಪಯ್ಯರ್! ಭಯಬಿಡು ಪರವಾಗಿಲ್ಲ! ಅಲ್ಲಯ್ಯ, ನೀನೇಕೆ ಇಷ್ಟು ಒಳ್ಳೆಯ ಒಳ್ಳೆಯ ವೀಣಾವಾದಕ ಎಂದು ನನಗೆ ಮೊದಲೇ ಹೇಳಲಿಲ್ಲ!” — ಎಂದರಂತೆ. ಅಂದಿನಿಂದ ತ್ಯಾಗರಾಜರ ಮನೆಯಲ್ಲಿ ಶ್ರೀರಾಮದೇವರಿಗೆ ಸಂಗೀತಸೇವೆ ಆಗುವಾಗಲೆಲ್ಲ ವೀಣಾ ಕುಪ್ಪಯ್ಯರ್ ವೀಣಾವಾದನ ಸೇವೆಯೂ ಸೇರಿಕೊಂಡಿತು.

ತ್ಯಾಗರಾಜರು ಎಂದೂ ಕೀರ್ತಿಯ ಹಾಗೂ ಧನದ ಬೆನ್ನಟ್ಟಿ ಹೋದವರಲ್ಲ. ಸದಾ ರಾಮನದೇ ಧ್ಯಾನ ಜಪಗಳು. ಸದಾ ಆತನಿಗೆ ತಾವು ಸಂಗೀತಾರಾಧನೆಯನ್ನು ಮಾಡುವುದು. ಇಷ್ಟೇ ಅವರ ಜೀವನ. ಅವರಿಂದ ವಿದ್ಯೆಯನ್ನು ಅಪೇಕ್ಷಿಸಿ ಬಂದವರೂ ತ್ಯಾಗರಾಜರಂತೆಯೇ, ಅವರ ಜೊತೆಯೇ ಉಂಛವೃತ್ತಿ ಮಾಡುತ್ತ ಬದುಕಬೇಕಿತ್ತು. ಗುರುಕುಲವಾಸ ರೀತಿಯಲ್ಲಿ ವಿದ್ಯೆಯನ್ನು ಕಲಿಯಬೇಕಿತ್ತು. ತ್ಯಾಗರಾಜರು ಹೀಗೆ ನಿರ್ಮಮವಾಗಿ ಇದ್ದುದರಿಂದಲೇ ಅವರ ವಿದ್ಯೆ, ಭಕ್ತಿ, ಸಂಗೀತ ಗಾಯನ – ವಾದನಗಳ ಕೀರ್ತಿಯು ದಕ್ಷಿಣದೇಶದಲ್ಲಿ ಮಾತ್ರವಲ್ಲದೆ ಉತ್ತರದೇಶದಲ್ಲಿಯೂ ಹರಡಿತ್ತು ಹೀಗಾಗಿ ಅವರನ್ನು ನೋಡಿ, ಅವರ ಸಂಗೀತವನ್ನು ಕೇಳಿ, ತಮ್ಮ ಸಂಗೀತವನ್ನು ಅವರಿಗೆ ಕೇಳಿಸಿ, ಅವರ ಆಶೀರ್ವಾದವನ್ನು ಪಡೆದು ಧನ್ಯರಾಗಲು ದೇಶದ ಅನೇಕಾನೇಕ ಪ್ರಮುಖ ವಿದ್ವಾಂಸರು ಕಾತುರತೆಯಿಂದ, ಹಂಬಲಿಸಿ ಬರುತ್ತಿದ್ದರು. ಹೀಗೆ ಬಂದವರಲ್ಲಿ ಆಂಧ್ರದ ಗುಂಟೂರಿನ, ಭಜನೆಯ ಸಂಪ್ರದಾಯದ ವಾಗ್ಗೇಯಕಾರ ತೂಮು ನರಸಿಂಹದಾಸ, ಕಾಶಿಯಲ್ಲಿದ್ದ ಹಿಂದೂಸ್ತಾನಿ ಸಂಗೀತ ವಿದ್ವಾಂಸ ಗೋಪೀನಾಥ ಭಟ್ಟಾಚಾರ್ಯ, ತಮಿಳುನಾಡಿನ ಮಾಯಾವರದ ಕವಿವರೇಣ್ಯ ಹಾಗೂ ವಾಗ್ಗೇಯಕಾರ ಗೋಪಾಲಕೃಷ್ಣ ಭಾರತಿ ಮುಂತಾದವರು. ತ್ಯಾಗರಾಜರ ಸಂಗೀತವನ್ನು ಭಕ್ತಿಯನ್ನು ಮೆಚ್ಚಿ ಶ್ಯಾಮಾಶಾಸ್ತ್ರಿಯವರು ತಮ್ಮ ಎರಡನೆಯ ಪುತ್ರ ಸುಬ್ಬರಾಯಶಾಸ್ತ್ರಿಯನ್ನೂ ತ್ಯಾಗರಾಜರಲ್ಲಿ ಶಿಷ್ಯನಾಗಿ ಕಳುಹಿಸಿದ್ದರು.

ಅಂದು ಸುಪ್ರಸಿದ್ಧರಾಗಿದ್ದ ಮಲಯಾಳದ ತಿರುವಾಂಕೂರ್‌ನ ಸಂಗೀತದೊರೆ, ವಾಗ್ಗೇಯಕಾರ, ಸ್ವಾತಿತಿರುನಾಳ್ ಮಹಾರಾಜರು ತ್ಯಾಗರಾಜರ ಶಿಷ್ಯ ಕನ್ನಯ್ಯ ಭಾಗವತರು ತಮ್ಮ ಆಸ್ಥಾನದಲ್ಲಿ ಹಾಡುತ್ತಿದ್ದ ತ್ಯಾಗರಾಜರ ಕೃತಿಗಳನ್ನು ಕೇಳಿ ಬಹಳ ಮೆಚ್ಚಿ ತ್ಯಾಗರಾಜರನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಬೇಕೆಂದು ಆಶಿಸಿದರು. ಅವರು ಈ ಕಾರ್ಯಕ್ಕಾಗಿ ತಮ್ಮ ಆಸ್ಥಾನದಲ್ಲೇ ಇದ್ದ ತಂಜಾವೂರಿನ ವಡಿವೇಲುವನ್ನು ನಿಯೋಜಿಸಿದರು. ಈ ವಡಿವೇಲು ಉತ್ತಮ ಗಾಯಕ ಹಾಗೂ ಪಿಟೀಲುವಾದಕ. ಈತನ ಪಿಟೀಲು ವಾದನವನ್ನು ಮೆಚ್ಚಿ ಸ್ವಾತಿತಿರುನಾಳ ಮಹಾರಾಜರು 1834ರಲ್ಲಿ ವಡಿವೇಲುವಿಗೆ ದಂತದ ಪಿಟೀಲೊಂದನ್ನು ಮಾಡಿಸಿ ಉಡುಗೊರೆ ನೀಡಿದ್ದರಂತೆ! ಈ ವಡಿವೇಲುವಿಗೆ ತ್ಯಾಗರಾಜರ ಶಿಷ್ಯ ವೀಣಾ ಕುಪ್ಪಯ್ಯರ್ ಪರಿಚಯವು ಚೆನ್ನಾಗಿದ್ದುದರಿಂದ ತನ್ನ ಕಾರ್ಯ ಸುಲಭವಾಗಿ ನೆರವೇರುತ್ತದೆ ಎಂದೇ ನಂಬಿಕೆ.

ವಡಿವೇಲು ತಿರುವೈಯ್ಯಾರಿಗೆ ಬಂದು ತ್ಯಾಗರಾಜರು ವಾಸವಾಗಿದ್ದ ತಿರುಮಂಜನ ವೀಥಿಯಲ್ಲಿ ತನ್ನ ತಾತ್ಕಾಲಿಕ ವಾಸವನ್ನೂ ಆರಂಭಿಸಿದನು. ತ್ಯಾಗರಾಜರು ತಮ್ಮ ಸ್ನಾನ, ಸಂಧ್ಯಾವಂದನೆಗಳಿಗಾಗಿ ಕಾವೇರಿ ನದಿಗೆ ಹೋಗುವ ದಾರಿಯಲ್ಲಿ ಈ ವಡಿವೇಲು ಇದ್ದ ಮನೆಯನ್ನು ದಾಟಿಯೇ ಹೋಗಬೇಕಿತ್ತು. ಅನಗತ್ಯವಾಗಿ ಯಾರಲ್ಲೂ ಮಾತನಾಡದ, ಭೇಟಿಯನ್ನು ನೀಡದ ತ್ಯಾಗರಾಜರನ್ನು ಭೇಟಿಯಾಗಲು ವಡಿವೇಲು ಒಂದು ಉಪಾಯವನ್ನು ಹೂಡಿದ್ದ. ಅದೆಂದರೆ, ತ್ಯಾಗರಾಜರು ಪ್ರತಿಬಾರಿ ಸ್ನಾನ ಜಪ ಸಂಧ್ಯಾವಂದನಾದಿಗಳಿಗೆಂದು ನದಿಗೆ ಆ ದಾರಿಯಲ್ಲಿ ಹೋಗುವಾಗಲೆಲ್ಲ, ಅವರ ಗಮನವನ್ನು ಸೆಳೆಯಲು ತಾನು ಹಾಡುತ್ತಿದ್ದ!. ಈ ಉಪಾಯವಂತೂ ಫಲಿಸಿತು! ಆತ ಹಾಡಲು ಆರಂಭಿಸಿದ ಮೊದಲ ದಿನವೇ ಆ ದಾರಿಯಲ್ಲಿ ನದಿಗೆಂದು ಹೋಗುತ್ತಿದ್ದ ತ್ಯಾಗರಾಜರಿಗೆ ಆತನ ಉತ್ತಮವಾದ ಸಂಗೀತವು ಕಿವಿಗೆ ಬಿದ್ದು, ಅವರು ಕೇಳಿ, ಒಂದು ನಿಮಿಷ ನಿಂತು ಮತ್ತೆ ಮುಂದುವರೆದರು. ಎರಡನೆಯ ದಿನವೂ ಅದೇ ಕತೆ ಮುಂದುವರೆಯಿತು! ಈ ದಿನ ತ್ಯಾಗರಾಜರು ಸ್ವಲ್ಪ ಹೆಚ್ಚು ಸಮಯ ನಿಂತು ವಡಿವೇಲುವಿನ ಗಾಯನವನ್ನು ಕೇಳಿ, ಹಾಡುವ ಈ ವ್ಯಕ್ತಿಯು ಪ್ರತಿಭಾನ್ವಿತನಾಗಿದ್ದಾನೆಂದು ಗ್ರಹಿಸಿ, ಮತ್ತೆ ನದಿಗೆಂದು ಮುಂದೆ ಹೋದರು. ಮೂರನೆಯ ದಿನ ತ್ಯಾಗರಾಜರ ಕುತೂಹಲವು ಹೆಚ್ಚಿ, ಈ ಗಾಯಕೋತ್ತಮನು ಯಾರು ಎಂದು ತಿಳಿಯುವ ಹಂಬಲ ಮತ್ತು ಕುತೂಹಲದಿಂದ ಆ ಮನೆಯ ಒಳಹೊಕ್ಕರು. ವಡಿವೇಲುವು ಜಿಗ್ಗನೆ ಮೇಲೆದ್ದು, ಕೂಡಲೇ ಭಕ್ತಿಯಿಂದ ತ್ಯಾಗರಾಜರ ಪಾದಕ್ಕೆ ಅಭಿವಂದಿಸಿ — “ಅಯ್ಯಾ ಪೂಜ್ಯರೇ, ಮಹಿಮಾನ್ವಿತರೇ, ತಮ್ಮನ್ನು ಕಂಡು ನಾನು ಇಂದು ಧನ್ಯನಾದೆ. ತಾವು ಇಲ್ಲಿ ನನ್ನ ಮನೆಯನ್ನು ಹೊಕ್ಕಿದ್ದು ನನ್ನ ಮನೆ ಪರಮಪಾವನವಾಯಿತು. ತಾವು ಯಾರಲ್ಲಾದರೂ ಹೇಳಿ ಕಳುಹಿಸಿದ್ದಿದ್ದರೆ ನಾನೇ ತಮ್ಮ ಮನೆಗೆ ಬರುತ್ತಿದ್ದೆ, ಅಪ್ಪಣೆ ಕೊಟ್ಟಿದ್ದರೆ ಹಾಡುತ್ತಿದ್ದೆ” — ಎಂದನು. ತ್ಯಾಗರಾಜರು ಆತನ ಗಾಯನವನ್ನು ಪ್ರೀತಿಯಿಂದ ಪ್ರಶಂಸೆ ಮಾಡಿ, ತಮ್ಮ ಮನೆಗೆ ಆಹ್ವಾನಿಸಿದರು.

ಆಹ್ವಾನದ ಈ ನೆಪ ಮಾಡಿಕೊಂಡು, ಸ್ವಾತಿತಿರುನಾಳ ಮಹಾರಾಜರು ತನಗೆ ನಿಯೋಜಿಸಿದಂತಹ ಕಾರ್ಯವನ್ನು ಹೇಗೆ ಸಫಲವನ್ನಾಗಿ ಮಾಡುವುದು ಎಂದು ಆಲೋಚನೆಯನ್ನು ವಡಿವೇಲುವು ಮಾಡುತ್ತಲೇ ಇದ್ದ. ಮರುದಿನ ವಡಿವೇಲುವು ತ್ಯಾಗರಾಜರ ಮನೆಗೆ ಹೋಗಿ, ಅಲ್ಲಿ ಅವರು ಅಪ್ಪಣೆ ಮಾಡಿದಂತೆ ಸ್ವಾತಿತಿರುನಾಳ ಮಹಾರಾಜರ ಅನೇಕಾನೇಕ ರಚನೆಗಳನ್ನೇ ಅದ್ಭುತವಾಗಿ ಗಾಯನ ಮಾಡಿದ. ಆ ಗಾಯನವು ಎಷ್ಟು ಸೊಗಸಾಗಿ ಇತ್ತೆಂದರೆ ತ್ಯಾಗರಾಜರು ಅತ್ಯಂತ ಸುಪ್ರಸನ್ನರಾಗಿ ವಡಿವೇಲುವು ತಮ್ಮಲ್ಲಿದ್ದ ಏನನ್ನು ಕೇಳಿದರೂ ತಾವು ಆತನಿಗೆ ಅದನ್ನು ಬಹುಮಾನವನ್ನಾಗಿ ನೀಡುವುದಾಗಿ ಹೇಳಿ ಆಶೀರ್ವದಿಸಿದರು. ಇದನ್ನೇ ಕಾಯುತ್ತಿದ್ದ ವಡಿವೇಲುವಿಗೆ ತನ್ನ ರೊಟ್ಟಿಯು ಜಾರಿ ತುಪ್ಪದಲ್ಲಿ ಬಿದ್ದಂತಾಯಿತು. ಆಗ ಆತನು – “ಪೂಜ್ಯರೇ ತಿರುವಾರೂರಿನ ಮಹಾರಾಜ ಸ್ವಾತಿತಿರುನಾಳರು ತಮ್ಮನ್ನು ದರ್ಶಿಸಬೇಕೆಂಬ ಅಪೇಕ್ಷೆ…… “ — ಎಂದು ಮಾತು ಮುಗಿಸುವ ಮುನ್ನವೇ ತ್ಯಾಗರಾಜರು ಅಚ್ಚರಿಗೊಂಡದ್ದನ್ನು ಗಮನಿಸಿ ತನ್ನ ಮಾತನ್ನು ನಿಲ್ಲಿಸಿದನು. ತ್ಯಾಗರಾಜರು ಕೆಲಕ್ಷಣಗಳ ಕಾಲ ಧ್ಯಾನವನ್ನು ಮಾಡುತ್ತ ಹೇಳಿದರು. – “ವಡಿವೇಲು ನಾನು ಖಂಡಿತ ಆತನನ್ನು ಭೇಟಿಯಾಗುತ್ತೇನೆ. ನಾನು ನಿನಗೆ ಕೊಟ್ಟ ವಾಕ್ಕು ಸುಳ್ಳಾಗದು. ಆದರೆ ನಮ್ಮ ಭೇಟಿ ಈ ಪ್ರಪಂಚದಲ್ಲಿ ಆಗುವ ಸಂಭವವಿಲ್ಲ. ನಮ್ಮಿಬ್ಬರ ಭೇಟಿ ಆಗುವುದು ಪರಲೋಕದಲ್ಲಿಯೇ. ಆತನ ಉಪಾಸನಾ ದೇವನೂ ನನ್ನದೂ ಒಂದೇ” — ಎಂದು ಹೇಳಿಬಿಟ್ಟರು! ವಡಿವೇಲುವಿಗೆ ತನಗೆ ಮಹಾರಾಜರು ಕೊಟ್ಟ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ಬಹಳ ದುಃಖವಾಯಿತು. ಅನತಿಕಾಲದಲ್ಲಿಯೇ ತಿರುವೆಯ್ಯಾರನ್ನು ಬಿಟ್ಟು ಹೊರಟು ತಾನು ತಿರುವಾರೂರಿಗೆ ಬಂದು ಮಹಾರಾಜರಿಗೆ ಸಂಗತಿಯನ್ನು ತಿಳಿಸಿದನು. ಅದೇನು ಗ್ರಹಚಾರವೋ ಏನೋ, ಈ ಘಟನೆಯು ಸಂಭವಿಸಿದ ಅನಂತರ 12 ವರ್ಷಗಳ ಕಾಲ ಸ್ವಾತಿತಿರುನಾಳ್ ಮಹಾರಾಜರು ಜೀವಿಸಿದ್ದರೂ, ಅವರೇ ತಿರುವೆಯ್ಯಾರಿಗೆ ಆಗಮಿಸಿ ತ್ಯಾಗರಾಜರ ದರ್ಶನವನ್ನು ಪಡೆಯಬೇಕೆಂದು ಹಂಬಲಿಸಿ ಆಶಿಸಿದರೂ ಅವರ ಆಶಯವು ಈಡೇರಲಿಲ್ಲ. ಅದಕ್ಕೆ ಕಾರಣವೆಂದರೆ ಆಗಿನ ರಾಜ್ಯಗಳ ನಡುವೆ ಇದ್ದ ರಾಜಕೀಯ ಕಾರಣಗಳು. ಇದು ಅವರ ಹಂಬಲವನ್ನು ಆಗಗೊಡಿಸಲಿಲ್ಲ. ಸ್ವಾತಿತಿರುನಾಳ್ ಮಹಾರಾಜರು ಡಿಸೆಂಬರ್ 25 ನೇ ತಾರೀಕು 1846 ಇಸವಿಯಂದು ದೈವಾಧೀನರಾದರೆ ತ್ಯಾಗರಾಜರು ಜನವರಿ 6 ನೇ ತಾರೀಕು 1847ಇಸವಿಯಂದು ದೈವಾಧೀನರಾದರು. ಈ ರೀತಿಯಾಗಿ ಸಂಗೀತ ಸಂತ ತ್ಯಾಗರಾಜರ ಮಾತು ಸತ್ಯವಾದಂತಾಯಿತು.

ತ್ಯಾಗರಾಜರು ಮತ್ತು ಗೋವಿಂದ ಮಾರಾರ್

ಗೋವಿಂದ ಮಾರಾರ್ ಎಂಬ ದೊಡ್ಡ ಸಂಗೀತಗಾರರೊಬ್ಬರು ಕ್ರಿ. ಶ. 1798ರಿಂದ 1843ರವರೆಗೆ ಜೀವಿಸಿದ್ದವರು. ಈತನಿಗೆ ಷಟ್ಕಾಲ ಗೋವಿಂದ ಮಾರಾರ್ ಎಂದೇ ಕೀರ್ತಿ ಇತ್ತು. ಏಕೆಂದರೆ ಪಲ್ಲವಿಯಂತಹ ರಚನೆಗಳನ್ನೆಲ್ಲ ಆರು ಕಾಲಗಳಲ್ಲಿ ಲೀಲಾಜಾಲವಾಗಿ ಹಾಡುವಂತಹ ವಿದ್ವಾಂಸರಾಗಿದ್ದವರು ಅವರು. ಅಂದಿನ ಕಾಲದಲ್ಲಿ ಹೀಗೆ ಷಟ್ಕಾಲ ಮಾಡಿ ಹಾಡುವವರು ಅಪರೂಪ. ದಕ್ಷಿಣ ಭಾರತದಲ್ಲಿ ಇನ್ನೂ ಇಬ್ಬರು ಷಟ್ಕಾಲದಲ್ಲಿ ಹಾಡಬಲ್ಲವರು ಎಂದು ಆ ಕಾಲದಲ್ಲಿ ಪ್ರಸಿದ್ಧರಾಗಿದ್ದವರೆಂದರೆ ಸೇಲಂನ ಷಟ್ಕಾಲ ನರಸಯ್ಯ ಮತ್ತು ವಿಜಯನಗರಂನ ವೀಣಾ ವೆಂಕಟರಮಣ ಎನ್ನುವವರು.

ದೈವಭಕ್ತರಾಗಿದ್ದ ಗೋವಿಂದ ಮಾರಾರ್ ಅವರಿಗೆ ಒಮ್ಮೆ ಕಾಶೀ ವಿಶ್ವನಾಥನ ದರ್ಶನವನ್ನು ಮಾಡಬೇಕೆಂದು ಬಹಳ ಹಂಬಲವಾಯಿತು. ಆ ಕಾಲದಲ್ಲಿ ಪ್ರಯಾಣಗಳು ಈಗಿನಷ್ಟು ಸುಲಭವಾಗಿರಲಿಲ್ಲ. ಆತ ತಾನು ವಾಸವಾಗಿದ್ದ ತಿರುವಾಂಕೂರಿನ ಮುವ್ವಾಟ್ಟುಪುಳ ತಾಲೂಕಿನ ರಾಮಮಂಗಲಂ ಎಂಬ ಹಳ್ಳಿಯಿಂದ ಹೊರಟು ತಿರುವನಂತಪುರಕ್ಕೆ ಬಂದು ಸ್ವಲ್ಪ ಸಮಯ ಮಹಾರಾಜ ಸ್ವಾತಿ ತಿರುನಾಳರ ಆಸ್ಥಾನದಲ್ಲಿ ಅನೇಕ ಮರ್ಯಾದೆಗಳನ್ನು ಸ್ವೀಕರಿಸುತ್ತ, ಹಾಡುತ್ತ ನೆಲೆಸಿ, ಅಲ್ಲಿಂದ ಮುಂದೆ ತನ್ನ ಯಾತ್ರೆಯನ್ನು ಮುಂದುವರೆಸುತ್ತಾ 1842ರಲ್ಲಿ ತಿರುವೆಯ್ಯಾರಿಗೆ ಬಂದು ಅಲ್ಲಿನ ದೇವರಾದ ತ್ಯಾಗರಾಜನನ್ನು ದರ್ಶನ ಪಡೆದರು. ಗೋವಿಂದ ಮಾರಾರರು ಸ್ವಾತಿತಿರುನಾಳ್ ಮಹಾರಾಜರ ಆಸ್ಥಾನದಲ್ಲಿ ತ್ಯಾಗರಾಜರ ಶಿಷ್ಯರಾಗಿದ್ದ ಕನ್ನಯ್ಯ ಭಾಗವತರು ಹಾಡುತ್ತಿದ್ದ ತ್ಯಾಗರಾಜರ ಕೀರ್ತನೆಗಳನ್ನು ಕೇಳಿ ಆಗಲೇ ಸಂತರಾಗಿದ್ದ ತ್ಯಾಗರಾಜರನ್ನು ದರ್ಶಿಸಿ ಅವರ ಸಂಗೀತವನ್ನು ಆಲಿಸಲೇ ಬೇಕು ಎಂದು ಹಂಬಲವುಂಟಾಗಿ ತಿರುವೆಯ್ಯಾರಿಗೆ ಬಂದಿದ್ದರು.

ಒಂದು ದಿನ ಏಕಾದಶಿಯಂದು ಗೋವಿಂದ ಮಾರಾರರು ತ್ಯಾಗರಾಜರ ಮನೆಗೆ ಆಗಮಿಸಿದರು. ಅಂದು ಅಲ್ಲಿ ಉಪವಾಸ ವ್ರತ. ರಾತ್ರಿ ವೇಳೆ ಅಖಂಡವಾಗಿ ದೇವರ ಭಜನೆಯು ಸಾಗುತ್ತಿತ್ತು. ರಾತ್ರಿಯ ಪೂರ್ವ ಭಾಗವು ಶಿಷ್ಯರ ಗಾಯನದಲ್ಲಿ ಭಜನೆಯು ಮುಗಿಯಿತು. ಅನಂತರ ಉತ್ತರ ಭಾಗದಲ್ಲಿ ಎಂದಿನಂತೆ ಮಾಮೂಲಿಯಾಗಿ ಅತಿಥಿ ಕಲಾವಿದರಿಂದ ದಿವ್ಯನಾಮ ಸಂಕೀರ್ತನೆಯ ಭಜನೆಯ ಗಾಯನವು ಆರಂಭವಾಗುತ್ತಿತ್ತು. ಈ ಸಮಯದಲ್ಲಿ ಗೋವಿಂದ ಮಾರಾರರು ತಮಗೂ ಸೇವೆಗೆ ಅವಕಾಶವನ್ನು ನೀಡಬೇಕೆಂದು ಪ್ರಾರ್ಥಿಸಿದರು. ಆಮೇಲೆ ಆತನು ತನ್ನ ತಂಬೂರಿಯನ್ನು ಶ್ರುತಿ ಮಾಡಿದರು. ಅವರ ತಂಬೂರಿಯೇ ಒಂದು ವಿಶೇಷ. ಅವರ ತಂಬೂರಿಯಲ್ಲಿ ಏಳು ತಂತಿಗಳಿದ್ದವು. ಅದರಲ್ಲಿ ಒಂದು ಮಂದ್ರ ಷಡ್ಜ ತಂತಿಯೂ, ಎರಡು ಪಂಚಮ ತಂತಿಗಳೂ, ಎರಡು ಅನುಸಾರಣೀ ತಂತಿಗಳೂ, ಎರಡು ಸಾರಣೀ ತಂತಿಗಳೂ ಇದ್ದವಂತೆ. ಜೊತೆಗೆ ತಂಬೂರಿಯ ಮೇಲೆ ಒಂದು ಬಾವುಟವೂ ಇದ್ದು, ಇದು ಆತನ ವಿದ್ಯೆಯನ್ನು ಸಾರಿ ಹೇಳಿ ಬೇರೆಯವರನ್ನು ಪಂಥಕ್ಕೆ ಆಹ್ವಾನ ಮಾಡುತ್ತಿರುವಂತೆ ಇದ್ದಿತಂತೆ! ಇನ್ನೊಂದು ಬಲು ವಿಶೇಷವೆಂದರೆ ಬಲಗೈಯಲ್ಲಿ ಆತ ತಂಬೂರಿಯನ್ನು ಮೀಟಿಕೊಳ್ಳುತ್ತ ಎಡಗೈಯಲ್ಲಿ ಖಂಜಿರವನ್ನು ನುಡಿಸುತ್ತಿದ್ದ ಅವಧಾನಿ ಆತ! ಈ ಖಂಜಿರವನ್ನು ನುಡಿಸುವಾಗ ಆತ ಬಲಗಾಲಿನ ಮೊದಲೆರಡು ಬೆರಳುಗಳಲ್ಲಿ ಹಿಡಿದುಕೊಳ್ಳುತ್ತಿದ್ದರಂತೆ!

ಅಲ್ಲಿ ನೆರೆದವರಲ್ಲಿ ಅನೇಕರು ಗೋವಿಂದ ಮಾರಾರರ ಕೀರ್ತಿಯನ್ನು ಕೇಳಿದ್ದವರು. ತಂಬೂರಿಯನ್ನು ನೋಡಿ ಅವರುಗಳ ಕುತೂಹಲವು ಮತ್ತಷ್ಟು ಹೆಚ್ಚಾಯಿತು. ಮಾರಾರರು ಹಾಡಲು ಆರಂಭಿಸಿದ ಒಡನೆಯೇ ಎಲ್ಲರೂ ಬಹಳ ಕುತೂಹಲದಿಂದ ಆಸಕ್ತಿಯಿಂದ ಮಾರಾರರ ಸಂಗೀತವನ್ನು ಕೇಳಲಾರಂಭಿಸಿದರು. ಮಾರಾರರು ಜಯದೇವ ಕವಿ ವಿರಚಿತ ನಾಲ್ಕನೆಯ ಅಷ್ಟಪದಿಯಾದ ‘ಚಂದನ ಚರ್ಚಿತ’ ವನ್ನು ಪಂತುವರಾಳಿ ರಾಗದಲ್ಲಿ ಹಾಡಿದರು. ಅತಿವಿಳಂಬದಕಾಲಲ್ಲಿ ಆರಂಭಿಸಿದ ಅವರು ಲಯದ ಕಾಲಗಳನ್ನು ಹೆಚ್ಚಿಸುತ್ತ, ಅತಿ ದ್ರುತಕಾಲದಲ್ಲಿಯೂ ಲೀಲಾಜಾಲವಾಗಿ ತಾಳದ ಗತಿಗೆ ಸರಿಯಾಗಿ ಹಾಡಿದರು! ಮಾರಾರರ ಹಾಡುಗಾರಿಕೆಗೆ ವಾಲಾಜಾಪೇಟೆ ಕೃಷ್ಣಸ್ವಾಮಿ ಭಾಗವತರು ಕಿನ್ನರಿವೀಣೆಯನ್ನು ನುಡಿಸಿದರಂತೆ. ಮಾರಾರರ ಲಯಸಂಪತ್ತಿಯನ್ನು ನೋಡಿ ತ್ಯಾಗರಾಜರೂ ಸೇರಿದಂತೆ ನೆರೆದ ಎಲ್ಲರೂ ಬೆರಗಾಗಿಬಿಟ್ಟರು! ಎಲ್ಲರೂ ಹೃತ್ಪೂರ್ವಕವಾಗಿ ಗೋವಿಂದ ಮಾರಾರರನ್ನು ಪ್ರಶಂಸಿಸಿದರು. ತ್ಯಾಗರಾಜರು ಗೋವಿಂದ ಮಾರಾರರಿಗಾಗಿ ತಮ್ಮ ಶಿಷ್ಯರನ್ನು ಶ್ರೀರಾಗದ ಎಂದರೋ ಮಹಾನುಭಾವುಲು ಕೀರ್ತನೆಯನ್ನು ಹಾಡಲು ಹೇಳಿದರು. ಈ ಕೀರ್ತನೆಯು ಈಗಾಗಲೇ ಶಿಷ್ಯರು ಉಂಛವೃತ್ತಿಯ ಸಮಯದಲ್ಲಿ ಹಾಡಿ ಪ್ರಸಿದ್ಧವೇ ಆಗಿತ್ತಾದರೂ, ಈ ಸಮಯದಲ್ಲಿ ಈ ಕೀರ್ತನೆಯನ್ನು ಮಾರಾರ್ ಅವರು ಮಹಾನುಭಾವರಲ್ಲಿ ಒಬ್ಬರೆಂದೂ ಅವರಿಗೆ ವಂದನೆಗಳು ಸಲ್ಲುತ್ತವೆಂಬ ಭಾವದಲ್ಲಿ ಶಿಷ್ಯರನ್ನು ತ್ಯಾಗರಾಜರು ಹಾಡಿಸಿದರು.

ಗೋವಿಂದ ಮಾರಾರರು ತ್ಯಾಗರಾಜರ ಸಮೀಪದಲ್ಲಿ ಕೆಲ ಕಾಲ ತಂಗಿದ್ದು ಮತ್ತೆ ತಮ್ಮ ಯಾತ್ರೆಯನ್ನು ಮುಂದುವರೆಸಿ ಯಾತ್ರೆಯ ಸಮಯದಲ್ಲಿ ಫಂಡಾರಾಪುರಕ್ಕೆ ಹೋದಾಗ ಅಲ್ಲಿಯೇ ಕ್ರಿ. ಶ. 1843 ರಲ್ಲಿ ದೈವಾಧೀನರಾದರು.

ತ್ಯಾಗರಾಜರ ಯಾತ್ರೆಯ ಕೆಲವು ಸಂದರ್ಭಗಳೂ, ಪವಾಡಗಳೂ

ಒಮ್ಮೆ ತ್ಯಾಗರಾಜರು 115 ವರ್ಷಗಳಾಗಿದ್ದ, ತಪಸ್ವಿಗಳಾಗಿದ್ದ ಉಪನಿಷತ್ ಬ್ರಹ್ಮರ ದರ್ಶನವನ್ನು ಪಡೆಯಲಿಕ್ಕಾಗಿ ಕಂಚಿಗೆ ಯಾತ್ರೆ ಮಾಡಬೇಕು ಎಂದು ಆಲೋಚಿಸಿದರು. ಇದನ್ನು ಕೇಳಿದ ತಮ್ಮ ಶಿಷ್ಯರುಗಳ ಕೋರಿಕೆಯಂತೆ ವಾಲಾಜಪೇಟೆ, ತಿರುಪತಿ, ಆಂಧ್ರದ ಪುತ್ತೂರು, ಶೋಲಿಂಗರ್, ಮದ್ರಾಸು, ಕೋವೂರು, ತಿರುವೊಟ್ರಿಯೂರು ಮುಂತಾದ ಕ್ಷೇತ್ರಗಳಿಗೂ ಯಾತ್ರೆಯನ್ನು ಮಾಡುವುದಾಗಿ ಹೇಳಿ ತಮ್ಮ ಯಾತ್ರಾಸ್ಥಳದ ಪಟ್ಟಿಯಲ್ಲಿ ಸೇರಿಸಿಕೊಂಡರು. ಶಿಷ್ಯರು ಈ ಯಾತ್ರೆಗೆ ಅವಶ್ಯಕವಾಗಿ ಬೇಕಾದ ಕೆಲವು ವ್ಯವಸ್ಥೆಗಳನ್ನೆಲ್ಲ ಯೋಚಿಸಿ, ಅದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡರು. ಈ ಯಾತ್ರೆಯಲ್ಲಿ ಅವರೊಂದಿಗಿದ್ದ ಶಿಷ್ಯರುಗಳು ಯಾರೆಂದರೆ ತಂಜಾವೂರು ರಾಮ ರಾವ್, ವಾಲಾಜಾಪೇಟ್ ವೆಂಕಟರಮಣ ಭಾಗವತರ್, ತಿಲ್ಲೈಸ್ಥಾನಂ ರಾಮ ಅಯ್ಯಂಗಾರ್, ಸೋಜಿರಿ ಸೀತಾರಾಮಯ್ಯ. ಈ ಯಾತ್ರೆಯನ್ನು ಮುಗಿಸಿ ವಾಪಸ್ ಬರುವಾಗ ಅವರಿಗೆ ವಾಲಾಜಪೇಟ್ ಕೃಷ್ಣಸ್ವಾಮಿ ಭಾಗವತರ್, ಖಂಜಿರ ವಿದ್ವಾನ್ ರಾಧಾಕೃಷ್ಣ ಅಯ್ಯರ್, ಉಮೈಯಾಲಪುರಂ ಕೃಷ್ಣ ಭಾಗವತರ್ ಮತ್ತು ಸುಂದರ ಭಾಗವತರ್ ಮುಂತಾದವರು ಶಿಷ್ಯರಾಗಿ ಸೇರಿಕೊಂಡಿದ್ದರು.

ಈ ಯಾತ್ರೆಯಲ್ಲಿ ಹೋದಲ್ಲೆಲ್ಲ ಅವರಿಗೆ ಅತಿಶಯವಾದ ಪ್ರೀತಿ ಗೌರವಗಳು ದೊರಕಿದ್ದಲ್ಲದೆ, ಕೆಲವೆಡೆ ಕೆಲವು ಅದ್ಭುತ ಘಟನೆಗಳು ಸಹ ಪವಾಡದಂತೆ ನಡೆದದ್ದು ತ್ಯಾಗರಾಜರ ಶಿಷ್ಯರು ಬೆಕ್ಕಸ ಬೆರಗಾಗುವಂತಾಯಿತು.

. ತಿರುಪತಿಯಲ್ಲಿ

ತ್ಯಾಗರಾಜರೂ ಅವರ ಶಿಷ್ಯರೂ ತಿರುಪತಿಗೆ ಹೊರಟಿದ್ದಾರೆ. ಆ ದಿನಗಳಲ್ಲಿ ತಿರುಪತಿಯ ತಿರುಮಲ ಬೆಟ್ಟದ ಶ್ರೀ ವೇಂಕಟೇಶ್ವರನ ದರ್ಶನವಾಗಬೇಕಾದರೆ ಬೆಟ್ಟದ ಏಳೂ ಮೈಲುಗಳ ಮೆಟ್ಟಿಲುಗಳನ್ನೂ ಹತ್ತಬೇಕಾಗುತ್ತಿತ್ತು. ಅದಕ್ಕಾಗಿ ಎಲ್ಲರೂ ಬೆಳಗಿನ ಜಾವ ಬಲು ಬೇಗ ತಮ್ಮ ಬೆಟ್ಟದ ಆರೋಹಣಕ್ಕೆ ಆರಂಭಿಸಿ, ದೇವರ ಭಜನೆಯನ್ನು ಮಾಡುತ್ತ, ಸಂಗೀತ ಕೃತಿಗಳನ್ನು ಹಾಡುತ್ತ, ಹಾಡುತ್ತ ಸುಮಾರು ಹನ್ನೊಂದು ಗಂಟೆಯ ವೇಳೆಗೆ ದೇವಸ್ಥಾನವಿದ್ದ ಭಾಗದ ಬೆಟ್ಟದ ತುದಿಯನ್ನು ತಲುಪಿದರು. ಹೋದಕೂಡಲೇ ಉಳಿದ ಶಿಷ್ಯರೆಲ್ಲರೂ ನಿಧಾನವಾಗಿ ತಮ್ಮ ಕಿಂಚಿತ್ ವಿಶ್ರಾಂತಿಯನ್ನು ಮುಗಿಸಿ, ನಿಧಾನವಾಗಿ ದೇವಸ್ಥಾನಕ್ಕೆ ಬರುವ ಸಿದ್ಧತೆಗಳನ್ನು ಮಾಡುತ್ತಿದ್ದರೆ, ತ್ಯಾಗರಾಜರು ಮಾತ್ರ ಆ ಕೂಡಲೇ ಪವಿತ್ರವಾದ ಪುಷ್ಕರಣಿಯಲ್ಲಿ ಸ್ನಾನವನ್ನು ಮಾಡಿ, ಸಂಧ್ಯಾವಂದನೆ ಜಪಾದಿಗಳನ್ನು ಆದಷ್ಟೂ ಶೀಘ್ರವಾಗಿ ಮುಗಿಸಿ, ದೇವರ ದರ್ಶನಕ್ಕಾಗಿ ಅವಸರ ಅವಸರವಾಗಿ ಹೋದರು. ಆದರೆ ಆ ಸಮಯದಲ್ಲಿ ದೇವಸ್ಥಾನದಲ್ಲಿ ಶ್ರೀವೇಂಕಟೇಶ್ವರ ದೇವರಿಗೆ ತೆರೆಯನ್ನು ಎಳೆದಿದ್ದರಿಂದ ತ್ಯಾಗರಾಜರಿಗೆ ಭಗವಂತನಾದ ವೇಂಕಟೇಶ್ವರನ ದರ್ಶನವಾಗಲಿಲ್ಲ. ಭಕ್ತರಾದ ತ್ಯಾಗರಾಜರಿಗೆ ಅತೀವ ದುಃಖವೂ ನಿರಾಶೆಯೂ ಆಗಿಬಿಟ್ಟಿತು. ತನ್ನ ಅಹಂಕಾರವೇ ತೆರೆಯಾಗಿ ಪರಿಣಮಿಸಿ ದೇವರ ದರ್ಶನಕ್ಕೆ ಅಡ್ಡಿ ಮಾಡುತ್ತಿದೆ ಎಂಬ ಚಿಂತೆ, ದುಃಖಗಳು ಅವರನ್ನು ಆವರಿಸಿತು. ಆದ್ದರಿಂದ ತ್ಯಾಗರಾಜರು ಅಲ್ಲೇ ದೇವರ ಎದುರಿಗೆ ಕುಳಿತು ಭಕ್ತಿಯಿಂದ ಆಶುವಾಗಿ ಗೌಳಿಪಂತು ರಾಗದಲ್ಲಿ, ಆದಿತಾಳದಲ್ಲಿ “ತೆರತೀಯಕರಾದ ನಾ ಲೋನಿ” (ನನ್ನೊಳಗಿನ ಅಜ್ಞಾನದ ತೆರೆಯನ್ನು ತೆರೆಯಬಾರದೇ?) ಎಂದು ಹೃದಯದಲ್ಲಿ ಆರ್ದ್ರತೆ ತುಂಬಿ ಹಾಡಿದರು. ಹಾಡಿ ಮುಗಿಯುತ್ತಿದ್ದಂತೆಯೇ ಮಾಯಕವೋ ಎಂಬಂತೆ ದೇವರ ಮುಂದಣ ಪರದೆ/ತೆರೆಯು ಬಿದ್ದೇ ಹೋಗಿ, ಸರ್ವಾಭರಣಗಳನ್ನೂ ಧರಿಸಿ, ವೈಭವೋಪೇತನಾದ ಶ್ರೀ ವೇಂಕಟೇಶ್ವರನು ತ್ಯಾಗರಾಜರಿಗೆ ದರ್ಶನವನ್ನು ನೀಡಿದನು. ದೇವರ ದರ್ಶನದಿಂದ ಪುಲಕಿತರಾದ ತ್ಯಾಗರಾಜರಿಂದ ಮತ್ತೊಂದು ಕೀರ್ತನೆಯು ಆಶುವಾಗಿ ರಚಿತವಾಗಿ ಅವರ ಕಂಠಶ್ರೀಯಿಂದ ಹೊರಟಿತು. ಈ ಕೀರ್ತನೆಯು ಮಂಗಳಕರವಾದ ಮಧ್ಯಮಾವತಿ ರಾಗದಲ್ಲಿ ಆದಿತಾಳದಲ್ಲೇ ರಚಿತವಾಗಿ, “ವೇಂಕಟೇಶ ನಿನ್ನು” – ಎಂದು ಅತಿ ಮನೋಹರವಾಗಿ ಅವರಿಂದ ಹಾಡಲ್ಪಟ್ಟಿತು. ಈ ವೇಳೆಗಾಗಲೇ ಶ್ರೀದೇವರ ಪರದೆಯು ತಾನಾಗಿ ಜಾರಿ ಬಿದ್ದು ಭಗವಂತನು ತ್ಯಾಗರಾಜರಿಗೆ ದರ್ಶನವನ್ನಿತ್ತ ಸುದ್ದಿಯು ಎಲ್ಲೆಡೆ ಹಬ್ಬಿ, ಹೊರಗಿದ್ದ ಎಲ್ಲರೂ ಈ ಪವಾಡ ಪುರುಷನ ದರ್ಶನಕ್ಕಾಗಿ ಓಡಿ ಬಂದು ನೆರೆದಿದ್ದರು. ಈ ವೇಳೆಗೆ ಸುದ್ದಿ ತಲುಪಿ ದೇವಸ್ಥಾನದ ಅರ್ಚಕರೂ ಓಡಿ ಬಂದು ಶ್ರೀದೇವರ ಪ್ರಸಾದವನ್ನು ತ್ಯಾಗರಾಜರಿಗೆ ನೀಡಿ, ದೇವರ ಮೇಲಿದ್ದ ಶಾಲುವನ್ನೇ ತೆಗೆದು ಅವರಿಗೆ ಪ್ರಸಾದವಾಗಿ ಹೊದ್ದಿಸಿ ಸನ್ಮಾನವನ್ನು ಮಾಡಿ ಗೌರವಿಸಿದರು. ಈಗ ಜನರಿಗೆ ಹೀಗೆ ದೇವರು ತಾನೇ ತೆರೆತೆರೆದು ದರ್ಶನವನ್ನು ನೀಡಿದ್ದು ಮಹಾತ್ಮರಾದ ತ್ಯಾಗರಾಜರಿಗೆ, ಹಾಡಿದ್ದು ಮಹಾ ವಿದ್ವಾಂಸಭಕ್ತರಾದ ತ್ಯಾಗರಾಜರು ಎಂದು ತಿಳಿದು ಅವರ ಸಂತೋಷವು ಇಮ್ಮಡಿಯಾಯಿತು.

೨. ಆಂಧ್ರದ ಪುತ್ತೂರು

ತ್ಯಾಗರಾಜರೂ ಅವರ ಶಿಷ್ಯರೂ ತಿರುಮಲ- ತಿರುಪತಿಯಿಂದ ಹೊರಟು ಪ್ರಯಾಣವನ್ನು ಮಾಡಿ ಯಾತ್ರೆಯಲ್ಲಿ ಮುಂಬರಿದು ಬರುವಾಗ ಒಂದು ದಿನ ಬೆಳಿಗ್ಗೆ ಬೇಗ ಆಂಧ್ರದ ಪುತ್ತೂರನ್ನು ಮುಟ್ಟಿ, ಅಲ್ಲಿಂದಲೂ ಮುಂದೆ ಬರುತ್ತಿದ್ದಾರೆ. ಅಲ್ಲಿ ದಾರಿಯಲ್ಲಿ ಜನರ ಗುಂಪೊಂದು ಸೇರಿತ್ತು, ಆ ಗುಂಪಿನ ಮಧ್ಯೆ ಸ್ತ್ರೀಯೊಬ್ಬಳು ಹೃದಯವು ದ್ರವಿಸುವಂತೆ ದಾರುಣವಾಗಿ ಅಳುತ್ತಿರುವ ಶಬ್ದವು ಕೇಳಿತು. ತ್ಯಾಗರಾಜರು ಶಿಷ್ಯರನ್ನು ಆ ಸ್ತ್ರೀಯು ಹಾಗೇಕೆ ಹೃದಯ ವಿದ್ರಾವಕವಾಗಿ ಅಳುತ್ತಿದ್ದಾಳೆಂದು ತಿಳಿದು ಬರಲೆಂದು ಕಳುಹಿಸಿದರು. ಶಿಷ್ಯರು ಬಂದು ವಿಚಾರಿಸಿದಾಗ ದಂಪತಿಗಳೀರ್ವರು ಯಾತ್ರಾರ್ಥಿಗಳಾಗಿ ತಮ್ಮ ಮಗನೊಂದಿಗೆ ಆ ಊರಿಗೆ ಹಿಂದಣ ದಿನ ಸಂಜೆಯೇ ಬಂದಿದ್ದರೆಂದೂ, ಆ ಊರಿನಲ್ಲಿ ಭಯಂಕರವಾದ ಹುಲಿಗಳ ಭೀತಿಯಿದ್ದಿದ್ದರಿಂದ ಬಹಳವಾದ ಭೀತಿಯಿಂದ ಸಂಜೆಯೇ ಆ ಊರಿನಲ್ಲಿ ಅವರವರ ಮನೆಯ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ, ಯಾರೂ ತೆರೆಯದ್ದರಿಂದ, ಆ ಮೂವರೂ ಊರ ಹೊರಗಣ ದೇವಾಲಯಕ್ಕೆ ಕತ್ತಲಿನಲ್ಲಿಯೇ ಹೋಗಿ ತಂಗಬೇಕಾಯಿತೆಂದೂ, ಆಗ ಪತಿಯು ದೇವಸ್ಥಾನದ ಹೊರಗೆ ಬಾಗಿಲನ್ನು ಹಾಕಿದ್ದರಿಂದಲೂ, ಆ ಬಾಗಿಲು ಎಲ್ಲಿದೆ ಎಂದು ತಿಳಿಯದ್ದರಿಂದಲೂ, ತನ್ನ ಹೆಂಡತಿ ಹಾಗೂ ಪುತ್ರನನ್ನು ದೇವಸ್ಥಾನದ ಒಳಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಯತ್ನಿಸುತ್ತ, ಕತ್ತಲಾಗಿ ಕಣ್ಣು ಕಾಣದ್ದರಿಂದ, ಬಾಗಿಲಿಗಾಗಿ, ಸುತ್ತಲೂ ಗೋಡೆಯನ್ನು, ಸವರಿಕೊಂಡು, ತಡಕಿಕೊಂಡು ಹೋಗುವಾಗ ಕಣ್ಣು ಕಾಣದೆ ಅಲ್ಲಿದ್ದ ಬಾವಿಗೆ ಬಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಅಸುನೀಗಿದನು. ಆತನ ಪತ್ನಿ ಹಾಗೂ ಪುತ್ರರು ಆತನಿಗಾಗಿ ಕಾದೂ ಕಾದೂ, ಕಾದರು. ಆಗ ಮಧ್ಯರಾತ್ರಿಯಾದ್ದರಿಂದ ಹೆಚ್ಚು ಬೊಬ್ಬೆ ಹಾಕಿ ಕರೆದರೆ, ಬೇರೆ ಕಾಡು ಪ್ರಾಣಿಗಳನ್ನೂ ಎಚ್ಚರಿಸಿದಂತಾಗುತ್ತದೆಂಬ ಭಯದಿಂದ, ಮೆಲ್ಲಗೆ ಆಗಾಗ್ಗೆ ಕರೆಯುತ್ತ, ಕಡೆಗೆ ತಡೆಯಲಾಗದ ಆಯಾಸದಿಂದ ಹೊರಗೆ ಕುಳಿತಲ್ಲೇ ನಿದ್ರಿಸಿಬಿಟ್ಟರು.

ಬೆಳಗಾಗುತ್ತಲೇ ದೇವಸ್ಥಾನದ ಬಾಗಿಲನ್ನು ತೆರೆಯಲು ಬಂದ ನೌಕರರು ಬಾವಿಯಲ್ಲಿದ್ದ ಶವವನ್ನು ಕಂಡು ಭಯಭೀತರಾಗಿ, ಶವವನ್ನು ಬಾವಿಯಿಂದ ಎತ್ತಿ ದೇವಸ್ಥಾನದ ಪ್ರಾಕಾರಗಳಿಂದ ಹೊರಗೆ ತಂದು ಮಲಗಿಸಿದರು. ಹಳ್ಳಿಯವರೆಲ್ಲ ನೆರೆದು, ಆ ಸ್ತ್ರೀಗೆ ಆದ ದುರಂತದ ಬಗ್ಗೆ ಮಾತನಾಡುತ್ತ, ಆಕೆಗೆ ಸಮಾಧಾನವನ್ನು ಹೇಳುತ್ತಿರುವಾಗಲೇ ತ್ಯಾಗರಾಜರೂ ಅವರ ಶಿಷ್ಯರೂ ಅತ್ತಕಡೆ ಬಂದದ್ದಾಗಿ ತಿಳಿಯಿತು. ಶಿಷ್ಯರು ಶೀಘ್ರವಾಗಿ ಬಂದು ತಮ್ಮ ಗುರುವರೇಣ್ಯರಾದ ತ್ಯಾಗರಾಜರಿಗೆ ಈ ವಿಷಯವನ್ನು ತಿಳಿಸಿದರು.

ಹೀಗೆ ದೇವಸ್ಥಾನದ ಬಾವಿಯಲ್ಲಿ ಮುಳುಗಿ ಸತ್ತ ಯಾತ್ರಿಕನ ಹೆಸರು ಶೇಷಯ್ಯ ಎಂದು ತ್ಯಾಗರಾಜರಿಗೆ ತಿಳಿಯಿತು. ಭಕ್ತನಾಗಿದ್ದ ಆ ಶೇಷಯ್ಯನ ಕೊರಳಲ್ಲಿ ತುಳಸಿಮಣಿಯ ಜಪಮಾಲೆಯಿದ್ದಿತು. ಶ್ರೀ ತ್ಯಾಗರಾಜರು ತಮ್ಮ ಶಿಷ್ಯರಿಗೆ ಜೀವಕಾರಕವಾದ ಬಿಲಹರಿ ರಾಗದಲ್ಲಿ, ಆದಿತಾಳದಲ್ಲಿ ತಾವು ರಚಿಸಿ ಪಾಠ ಮಾಡಿದ್ದ “ನಾ ಜೀವಾಧಾರ” – ಎಂಬ ಕೃತಿಯನ್ನು ಹಾಡಲು ಹೇಳಿದರು. ಶಿಷ್ಯರು ಹಾಡುತ್ತಿರಲು, ಈ ಕೀರ್ತನೆಯ ಕಡೆಯ ಭಾಗವನ್ನು ಹಾಡುವಾಗ ಆ ದೇವಸ್ಥಾನದಲ್ಲಿದ್ದ ತುಳಸೀ ತೀರ್ಥವನ್ನು ತ್ಯಾಗರಾಜರು ತಂದು, ಕೈಯಲ್ಲಿ ಹಿಡಿದು, ಜಪಿಸುತ್ತಲೇ, ತ್ಯಾಗರಾಜರು ಆ ಶವದ ಮೇಲೆ, ಕೀರ್ತನೆಯು ಮುಗಿಯುವವರೆಗೆ ಆ ತೀರ್ಥವನ್ನು ಚುಮುಕಿಸುತ್ತಿದ್ದರು. ಕೀರ್ತನೆಯು ಮುಗಿದ ಕೂಡಲೇ ಶವವಾಗಿದ್ದ ಶೇಷಯ್ಯನಿಗೆ ಜೀವವು ತುಂಬಿ, ನಿದ್ರೆ ಮಾಡಿ ಎದ್ದವನಂತೆ ಎದ್ದುಬಿಟ್ಟನು! ನೆರೆದವರಿಗೆಲ್ಲ ಅಚ್ಚರಿಯಲ್ಲಿ ಮುಳುಗಿದರು. ಆ ಎಲ್ಲರಿಗೂ ತ್ಯಾಗರಾಜರ ಮೇಲೆ ಅತಿಶಯವಾದ ಭಕ್ತಿಯುಂಟಾಯಿತು. ಶೇಷಯ್ಯನೂ ಆತನ ಪತ್ನಿಯೂ ತ್ಯಾಗರಾಜರಿಗೆ ಭಕ್ತಿಯಿಂದ ಪುನಃ ಪುನಃ ನಮಸ್ಕರಿಸುತ್ತ, ತ್ಯಾಗರಾಜರ ಅಪ್ಪಣೆಯಂತೆ ತಮ್ಮ ಯಾತ್ರೆಯನ್ನು ಮುಂದುವರೆಸಿದರು.

  1. ಮದರಾಸಿನಲ್ಲಿ

ಅಲ್ಲಿಂದ ಹೊರಟ ತ್ಯಾಗರಾಜರೂ ಅವರ ಶಿಷ್ಯರೂ ಶೋಲಿಂಗರ್ ಯಾತ್ರೆಯನ್ನು ಮುಗಿಸಿ, ಅನೇಕ ಕೀರ್ತನೆಗಳನ್ನು ರಚಿಸುತ್ತ ದೇವಕ್ಷೇತ್ರಗಳ ದರ್ಶನಗಳನ್ನು ಮಾಡುತ್ತ, ಮದರಾಸಿಗೆ ಬಂದರು.

ಮದರಾಸಿನಲ್ಲಿ ಕೋವೂರು ಸುಂದರ ಮುದಲಿಯಾರ್ ಎಂಬ ಶ್ರೀಮಂತರೊಬ್ಬರು ಕಂಚಿಯಲ್ಲಿ ತಪಸ್ವಿಗಳಾಗಿದ್ದ ಉಪನಿಷತ್ ಬ್ರಹ್ಮರ ಶಿಷ್ಯರಾಗಿದ್ದವರು. ಮಾತ್ರವಲ್ಲದೆ ವೀಣಾ ಕುಪ್ಪಯ್ಯರ್ ಅವರ ಸ್ನೇಹಿತರೂ ಆಗಿದ್ದರು. ತ್ಯಾಗರಾಜರು ಕಂಚಿಗೆ ಹೋಗಿ ಉಪನಿಷತ್ ಬ್ರಹ್ಮರನ್ನು ಭೇಟಿಯಾದ ಸಮಯದಲ್ಲಿ ಉಪನಿಷತ್ ಬ್ರಹ್ಮರು ಅವರುಗಳಿಗೆ ಪರಸ್ಪರವಾದ ಪರಿಚಯನ್ನು ಮಾಡಿಸಿದ್ದರು. ಆ ಸಂದರ್ಭದಲ್ಲಿ ಮುದಲಿಯಾರರ ಪ್ರಾರ್ಥನೆ ಹಾಗೂ ಬೇಡಿಕೆಯಂತೆ, ಮದ್ರಾಸಿಗೆ ಹೋದ ಸಂದರ್ಭದಲ್ಲಿ ತ್ಯಾಗರಾಜರು ಮುದಲಿಯಾರರ ಮನೆಯಲ್ಲಿ ಕೆಲಕಾಲ ತಂಗುವಂತಾಯಿತು. ಹಾಗೂ ಮುದಲಿಯಾರರ ಪ್ರಾರ್ಥನೆಯಂತೆ ಅಲ್ಲಿಂದ ಹದಿಮೂರೂವರೆ ಮೈಲುಗಳಷ್ಟು ದೂರವಿದ್ದ ಕೋವೂರಿಗೂ ಹೋಗಿ ಅಲ್ಲಿನ ದೇವರ ದರ್ಶನ ಪಡೆದು ಕೀರ್ತನೆಗಳನ್ನೂ ರಚಿಸಿದರು. ತ್ಯಾಗರಾಜರು ಅಲ್ಲಿದ್ದ ಮುದಲಿಯಾರರ ಮನೆಯಲ್ಲಿದ್ದ ಎಂಟು ದಿನಕಾಲವೂ ದೇವಗಾಂಧಾರಿರಾಗವೊಂದನ್ನೇ ಹಾಡಿದರು!.! ಮೊದಲ ಆರು ದಿನಗಳು ಒಂದೊಂದೇ ಹಂತದಲ್ಲಿ ರಾಗದ ನಿಲುಗಡೆಯಲ್ಲಿ ರಾಗಾಲಾಪನೆಯನ್ನು ಮಾಡುತ್ತ ಮಾಡುತ್ತ, ತಮ್ಮದೇ ದೇವಗಾಂಧಾರಿರಾಗದ ಕೀರ್ತನೆಗಳನ್ನು ಹಾಡುತ್ತ ಏಳನೆಯ ಹಾಗೂ ಎಂಟನೆಯ ದಿನಗಳಲ್ಲಿ ದೇವಗಾಂಧಾರಿರಾಗದ ಪಲ್ಲವಿಯನ್ನೂ, ನೆರವಲು, ಸ್ವರಕಲ್ಪನಾ ವಿನ್ಯಾಸಗಳನ್ನೂ ಮಾಡಿದರು! ವಿಸ್ತಾರವಾಗಿ ಹಾಡಲು ಕಷ್ಟವಾಗುವ ದೇವಗಾಂಧಾರಿರಾಗವನ್ನು ಅಷ್ಟು ವಿಸ್ತರಿಸಿ, ಅಷ್ಟು ಹಾಡಿದ ತ್ಯಾಗರಾಜರ ವಿದ್ವತ್ತನ್ನು ವರ್ಣಿಸಲಸದಳ. ತ್ಯಾಗರಾಜರು ಮದರಾಸಿನಲ್ಲಿ ಇದ್ದಷ್ಟು ದಿನಗಳೂ ಅಲ್ಲಿನ ರಸಿಕರಿಗೆ ದಿನ ನಿತ್ಯವೂ ಸಂಗೀತದ ಸಮಾರಾಧನೆಯೇ ಆಯಿತು.

4.ತಿರುವೊಟ್ಟಿಯೂರು

ತಮ್ಮ ಶಿಷ್ಯ ವೀಣಾ ಕುಪ್ಫಯ್ಯರ್ ಕೋರಿಕೆಯ ಮೇರೆಗೆ ತ್ಯಾಗರಾಜರು ಮದ್ರಾಸಿನಿಂದ ಆರು ಮೈಲುಗಳ ದೂರವಿದ್ದ ತಿರುವೊಟ್ರಿಯೂರಿಗೆ ಹೋಗಿ ಬಂದರು. ಬರುವ ದಾರಿಯಲ್ಲಿ ಕೋವೂರು ಸುಂದರ ಮುದಲಿಯಾರರು ತ್ಯಾಗರಾಜರು ಶ್ರೀರಾಮನವಮಿಯನ್ನೂ ವೈಕುಂಠ ಏಕಾದಶಿ ಮುಂತಾದವನ್ನೂ ವೈಭವದಿಂದ ಆಚರಿಸಲಿ ಎಂಬ ಉದ್ದೇಶದಿಂದ, ಬಹಳ ಭಕ್ತಿಯಿಂದ 1000 ಚಿನ್ನದ ನಾಣ್ಯಗಳನ್ನು ತ್ಯಾಗರಾಜರ ಪಲ್ಲಕ್ಕಿಯಲ್ಲಿ ಅಡಗಿಸಿಟ್ಟು, ಇದನ್ನು ಶಿಷ್ಯರಿಗೆ ಮಾತ್ರ ಹೇಳಿದರು. ಶಿಷ್ಯರು ಮುದಲಿಯಾರರು ದೇವರ ಸೇವೆಗಾಗಿ ನೀಡುತ್ತಿರುವುದು ಎಂದು ಹೇಳಿದ್ದರಿಂದ ಮುದಲಿಯಾರರ ಕಾಣಿಕೆಗೆ ಒಪ್ಪಿಗೆಯನ್ನಿತ್ತುಬಿಟ್ಟರು! ಅವರುಗಳೂ ಈ ವಿಷಯವನ್ನು ತ್ಯಾಗರಾಜರಿಗೆ ಭಯದಿಂದ ಹೇಳಲಿಲ್ಲ.. ಏಕೆಂದರೆ ತ್ಯಾಗರಾಜರಿಗೇನಾದರೂ ತಿಳಿದಿದ್ದರೆ ಅವರು ಖಂಡಿತಾಗಿಯೂ ಹೀಗೆ ಹಣವನ್ನು ಸ್ವೀಕರಿಸಲು ಒಪ್ಪುತ್ತಲೇ ಇರಲಿಲ್ಲವೆಂದು ಅವರಿಗೂ ತಿಳಿದಿತ್ತು.

ತಿರುವೈಯ್ಯಾರಿಗೆ ಮರಳಲೆಂದು ಪ್ರಯಾಣವು ಆರಂಭವಾಗಿಯಿತು. ಒಂದು ದಿನ ಈ ಪ್ರಯಾಣದ ಕೂಟವು ಒಂದು ಕಾಡನ್ನು ರಾತ್ರಿಯ ವೇಳೆಯಲ್ಲಿಯೇ ದಾಟಲೇ ಬೇಕಾದ ಅನಿವಾರ್ಯತೆ ಒದಗಿಬಂದಿದ್ದರಿಂದ ರಾತ್ರಿಯೇ ಪ್ರಯಾಣವನ್ನು ಮಾಡುವಂತಾಯಿತು. ಈ ಕಾಡಿನಲ್ಲಿ ನಾಗಾಲಾಪುರದ ಕುಪ್ರಸಿದ್ಧ ದರೋಡೆಕೋರರು ಇದ್ದು, ಆ ದಾರಿಯ ಮೂಲಕ ಪ್ರಯಾಣ ಮಾಡುತ್ತಿದ್ದ ಎಲ್ಲ ಪ್ರಯಾಣಿಕರನ್ನೂ ಹಿಂಸಿಸಿ, ಬೆದರಿಸಿ, ಕೊಂದು ಹಾಕಿ ದರೋಡೆಯನ್ನು ಮಾಡುತ್ತಿದ್ದರು. ಅದರಂತೆಯೇ ತ್ಯಾಗರಾಜರೂ ಅವರ ಶಿಷ್ಯರೂ ಈ ಕಾಡನ್ನು ರಾತ್ರಿಯಲ್ಲಿ ದಾಟುವ ಪ್ರಯತ್ನದಲ್ಲಿದ್ದಾಗ ಎಲ್ಲೆಡೆಯಿಂದಲೂ ಆ ದರೋಡೆಕೋರರು ಬಂದು ಮುತ್ತಿ, ಅಟಕಾಯಿಸಿಬಿಟ್ಟರು. ಪಲ್ಲಕ್ಕಿಯಲ್ಲಿ/ಡೋಲಿಯಲ್ಲಿ ಕುಳಿತು ರಾಮಧ್ಯಾನದಲ್ಲಿ ಮೈಮರೆತಿದ್ದ ತ್ಯಾಗರಾಜರಿಗೆ ಪ್ರಯಾಣವು ನಿಂತಿದ್ದು ತಿಳಿದು ಶಿಷ್ಯರನ್ನು ಕರೆದು ಕೇಳಿದಾಗ, ಅವರುಗಳು ಕಳ್ಳರು ಅಟಕಾಯಿಸಿದ ವಿಷಯವನ್ನು ತಿಳಿಸಿದರು ತ್ಯಾಗರಾಜರಿಗೆ ಈಗ ಆಶ್ಚರ್ಯವಾಯಿತು – “ಅಲ್ರಯ್ಯಾ! ದರೋಡೆಕೋರರಿಗೆ ನಾವೇಕೆ ಹೆದರಬೇಕು? ಅವರಿಗೆ ಕದಿಯುವಂತಹುದಾಗಲೀ, ನಾವು ಉಳಿಸಿಕೊಳ್ಳಲೇ ಬೇಕಾದದ್ದು ಸಹ ನಮ್ಮಲ್ಲಿ ಏನಿದೆ? ಸಂಪತ್ತು ಇದ್ದರೆ ಮಾತ್ರ ಅವರು ಕದಿಯುತ್ತಾರೆಂದು ಭೀತಿ.. ಏನೂ ಇಲ್ಲದ ನಮಗೆ ಏಕೆ ಭಯ ಎಂದು ಕೇಳಿದರು. ಆಗ ವೀಣಾ ಕುಪ್ಪಯ್ಯರ್ ಅವರು ಬಂದು ತ್ಯಾಗರಾಜರ ಕಿವಿಯಲ್ಲಿ ಗುಟ್ಟಾಗಿ ಕೋವೂರು ಸುಂದರ ಮುದಲಿಯಾರರು ತ್ಯಾಗರಾಜರು ನಡೆಸುವ ಶ್ರೀರಾಮನವಮಿಯ ಹಾಗೂ ಇನ್ನಿತರ ಉತ್ಸವಗಳಿಗಾಗಿ ಖರ್ಚಿಗೆಂದು 1000 ಬಂಗಾರದ ನಾಣ್ಯಗಳನ್ನು ಕೊಟ್ಟಿದ್ದು ತಾವೆಲ್ಲರೂ ಸೇರಿ, ಅದನ್ನು ತ್ಯಾಗರಾಜರ ಪಲ್ಲಕ್ಕಿಯಲ್ಲಿ ಅಡಗಿಸಿಟ್ಟಿರುವುದಾಗಿಯೂ ಉಸುರಿದರು. ತಕ್ಷಣವೇ ತ್ಯಾಗರಾಜರು ಆ ಕೂಡಲೇ ಆ ಹಣವನ್ನು ಕಳ್ಳರಿಗೆ ಬಿಸಾಡಿಬಿಡಬೇಕೆಂದು ಅನುಜ್ಞೆ ಮಾಡಿಬಿಟ್ಟರು. ಆಗ ತಕ್ಷಣವೇ ಶಿಷ್ಯರಾಗಿದ್ದ ತಂಜಾವೂರು ರಾಮರಾಯರು ಅದನ್ನು ತಡೆಹಿಡಿದು – “ಗುರುಗಳೇ ದಯವಿಟ್ಟು ಕಳ್ಳರಿಗೆ ಕೊಡಬೇಡಿ. ಏಕೆಂದರೆ ಆ ಹಣವಿರುವುದು ಶ್ರೀರಾಮನವಮಿ, ಶ್ರೀಜಯಂತಿ ಹಾಗೂ ವೈಕುಂಠ ಏಕಾದಶಿಯ ಉತ್ಸವಗಳನ್ನು ಮಾಡಲಿಕ್ಕಾಗಿ ಇರುವಂತಹದು. ಅದು ದೇವರ ಹಣ.. ಅದನ್ನು ಕಳ್ಳರಿಗೆ ಕೊಡಲು ನಮಗೇನು ಹಕ್ಕಿದೆ?” ಎಂದು ಪ್ರಶ್ನಿಸಿದರು. ಆಗ ತ್ಯಾಗರಾಜರು – “ಅದೇನಾದರೂ ದೇವರ ಹಣವೇ ಆಗಿದ್ದರೆ ಅದನ್ನು ಭಗವಂತನೇ ರಕ್ಷಿಸಿಕೊಳ್ಳುತ್ತಾನೆ. ನಮಗೇಕೆ ಅದರ ಉಸಾಬರಿ? “-ಎಂದು ಕೇಳಿ, ಪುನಃ ತಮ್ಮ ಧ್ಯಾನದಲ್ಲಿ ನಿರತರಾಗಿ ದರ್ಬಾರ್ ರಾಗದ, ಆದಿತಾಳದ “ಮುಂದುವೆನಕ ನೀರು”- ಎಂಬ, ಹೇ ರಾಮ, ನೀನು ಮುರ – ಖರ ಎಂಬ ರಾಕ್ಷಸರನ್ನೆಲ್ಲ ಕೊಂದವನು ನೀನು ನಿನ್ನ ಅನುಜ ಲಕ್ಷ್ಮಣನೊಂದಿಗೆ ಬಂದು ಈ ರಾಕ್ಷಸರನ್ನೆಲ್ಲ ನಿವಾರಿಸಬಾರದೇ ಎಂಬುದಾಗಿ ಕೋರುತ್ತ ಶ್ರೀರಾಮನ ಸ್ತುತಿಯನ್ನು ಹಾಡಿದರು. ಆ ಕೂಡಲೇ ಧನುರ್ಧಾರಿಗಳಾದ ಇಬ್ಬರು ಹುಡುಗರು ಬಂದು ತಮ್ಮ ಬಾಣಗಳು ಆ ಕಳ್ಳರನ್ನೆಲ್ಲ ಆವರಿಸುವಂತೆ ಮಾಡಿ, ಅವರುಗಳನ್ನು ಬಾಣಗಳಿಂದ ಹೊಡೆದು, ಭಯಪಡಿಸಿ ಘಾಸಿ ಪಡಿಸಿಬಿಟ್ಟರು. ಕಳ್ಳರಿಗೆ ಈ ಮಹಿಮೆಯನ್ನು ಕಂಡು ಮಹದಾಶ್ಚರ್ಯವಾಗಿ ತ್ಯಾಗರಾಜರಲ್ಲಿ ಬಂದು ಅವರುಗಳನ್ನೆಲ್ಲ ಈ ರೀತಿಯಾಗಿ, ಬಾಣಗಳ ಮಳೆಗೆರೆದು, ಶೌರ್ಯದಿಂದ ರಕ್ಷಿಸುತ್ತಿರುವ ಆ ಬಾಲಕರು ಯಾರು ಎಂದು ಪ್ರಶ್ನಿಸಿದರು. ತ್ಯಾಗರಾಜರು ಅವರುಗಳು ಸಾಕ್ಷಾತ್ತಾಗಿ ಶ್ರೀರಾಮ – ಲಕ್ಷ್ಮಣರೆಂದೂ, ಅವರು ಆ ಕಳ್ಳರಿಂದಾಗಿಯೇ ತಮಗೆ ದರ್ಶನವನ್ನು ನೀಡುವಂತಾದ್ದರಿಂದ ಆ ಕಳ್ಳರಿಗೇ ತಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆಂದು ಹೇಳಿದಾಗ, ಆ ಕಳ್ಳರು ಬೆಕ್ಕಸ ಬೆರಗಾಗಿದ್ದಲ್ಲದೆ, ದುಷ್ಟರೇ ಆದ ತಾವೂ ತ್ಯಾಗರಾಜರ ಮಹಿಮೆ ಭಕ್ತಿಗಳಿಂದಾಗಿ ಸಾಕ್ಷಾತ್ ರಾಮಲಕ್ಷ್ಮಣರ ದರ್ಶನವನ್ನು ಪಡೆಯುವಂತಾಯಿತೆಂದೂ, ಇನ್ನು ಮುಂದೆ ತಾವೆಲ್ಲರೂ ರಾಮಭಕ್ತರಾಗುವುದಾಗಿಯೂ, ಈ ಹೀನ ಕಾರ್ಯಗಳನ್ನೆಲ್ಲ ಬಿಟ್ಟು, ಸತ್ಕರ್ಮಗಳಿಗೇ ತಮ್ಮನ್ನೆಲ್ಲ ಅರ್ಪಿಸಿಕೊಳ್ಳುವುದಾಗಿಯೂ ತ್ಯಾಗರಾಜರಿಗೆ ಪ್ರಮಾಣ ಮಾಡಿ ಹೇಳಿದಾಗ ತ್ಯಾಗರಾಜರು ಅವರುಗಳಿಗೆಲ್ಲರಿಗೂ ರಾಮನಾಮ ಉಪದೇಶವನ್ನೇ ಮಾಡಿ ಅವರುಗಳನ್ನು ಹರಿಸಿದರು. ಮನಃಪರಿವರ್ತನೆಯಾಗಿ ರಾಮಭಕ್ತರಾದ ಆ ಕಳ್ಳರು ಈ ಎಲ್ಲರೂ ಕಾಡು ದಾಟಿ ಮುಂದಿನ ಊರು ತಲುಪುವವವರೆಗೂ, ಬೆಳಕರೆಯುವವರೆಗೂ ತ್ಯಾಗರಾಜರ ಜೊತೆಗೇ ರಕ್ಷಣೆಗಾಗಿ ಬಂದು, ಆನಂತರ ಅವರುಗಳನ್ನೆಲ್ಲ ಬೀಳ್ಕೊಟ್ಟರು. ಆಮೇಲೆ ಈ ಕೂಟವು ಯಾವ ಅಡ್ಡಿ ಆತಂಕಗಳೂ ಇಲ್ಲದೆ ತಿರುವೆಯ್ಯಾರಿಗೆ ಹಿಂತಿರುಗಿದರು.

ತ್ಯಾಗರಾಜರು ಒಮ್ಮೆ ಶ್ರೀರಂಗಕ್ಕೆ ಯಾತ್ರೆಗೆ ಹೋಗಿದ್ದಾಗ ಒಂದು ವಿಶೇಷ ಘಟನೆ ನಡೆಯಿತು. ತ್ಯಾಗರಾಜರು ಹೋದ ಸಮಯವು ಅಲ್ಲಿನ ದೇವರಾದ ಶ್ರೀರಂಗನಾಥನಿಗೆ ಚಿತ್ರೋತ್ಸವವು ನಡೆಯುವಂತಹ ಕಾಲ. ದೇವರ ಉತ್ಸವವು ವೈಭವವಾಗಿ ನಡೆಯುತ್ತಿತ್ತು. ತ್ಯಾಗರಾಜರೂ ಅವರ ಶಿಷ್ಯರೂ ತಂಗಿದ್ದ ಮನೆಯ ಬೀದಿಯಲ್ಲೂ ಚಿನ್ನದ ಕುದುರೆಯ ಮೇಲೆ ಸವಾರಿ ಮಾಡುವ ದೇವರ ರಥೋತ್ಸವದ ಮೆರವಣಿಗೆ ಅಂದು ವೈಭವವಾಗಿ ಬರುತ್ತಿತ್ತು. ದೂರದಿಂದಲೇ ಆ ವೈಭವೋಪೇತನಾದ ಭಗವಂತನನ್ನು ನೋಡಿ ತ್ಯಾಗರಾಜರಿಗೆ ಭಕ್ತಿಯು ಉಕ್ಕಿಬಂದು ಕೈಮುಗಿಯುತ್ತ ಆ ಕೂಡಲೇ “ರಾಜು ವೆಡಲೇ ಜೂತ ಮುರಾರೇ” – ಎಂಬ ಕೀರ್ತನೆಯನ್ನು ತ್ಯಾಗರಾಜರು ಹಾಡಿದರು. ತಾವಿದ್ದ ಮನೆಯ ಮುಂದೆಯೇ ಹೋಗುತ್ತಿದ್ದ ಉತ್ಸವದ ದೇವರನ್ನು ಹತ್ತಿರದಿಂದ ನೋಡಬೇಕೆಂದು ತ್ಯಾಗರಾಜರು ಹಂಬಲಿಸಿದರೂ ಉತ್ಸವದಲ್ಲಿ ವಿಪರೀತ ಜನಜಂಗುಳಿಯಿಂದಾಗಿ, ಜನಸ್ತೋಮದ ತಳ್ಳುವಿಕೆಯಿಂದಾಗಿ ತ್ಯಾಗರಾಜರಿಗೆ ಅವರ ಆಸೆಯಂತೆ ದೇವರ ಸಮೀಪ ಹೋಗಿ ದರ್ಶನವನ್ನು ಪಡೆಯಲಾಗಲೇ ಇಲ್ಲ.

ಈಗ ಒಂದು ವಿಚಿತ್ರವು ನಡೆಯಿತು! ಆ ರಥವು ಆ ತ್ಯಾಗರಾಜರು ತಂಗಿದ್ದ ರಸ್ತೆಯ ಮೂಲೆಯಲ್ಲಿ ಹೋಗಿ ನಿಂತೇ ಬಿಟ್ಟಿತು! ಏನೇ ಮಾಡಿದರೂ ದೇವರ ರಥವು ಮುಂದಕ್ಕೆ ಕದಲಲೇ ಇಲ್ಲ. ಭಾರವಾದ ಆ ಚಿನ್ನದ ಆ ರಥವನ್ನು ಎಳೆಯಲೆಂದೇ ತಯಾರಾದ 16 ಮಂದಿ ಗಟ್ಟಿಮುಟ್ಟಾದವರು ಇದ್ದರೂ ಅವರಿಗೆ ಕೈಕಾಲು ಮರಗಟ್ಟಿದಂತಾಗಿ ಚಲಿಸದಂತಾಗಿಬಿಟ್ಟಿತು! ಇನ್ನೂ ಹಲವಾರು ಮಂದಿ ನೆರೆದವರು ಸೇರಿ ಎಳೆದರೂ ದೇವರ ರಥವು ಒಂದು ಇಂಚೂ ಮುಂದೆ ಜರುಗಲಿಲ್ಲ!! ದೇವರ ಉತ್ಸವಕ್ಕೆ ಕೆಟ್ಟ ದೃಷ್ಟಿ ತಾಕಿತೇನೋ ಎಂದು ಗ್ರಹಿಸಿ, ದೇವರ ರಥಕ್ಕೂ, ಅದನ್ನು ಎಳೆಯುವವರಿಗೂ ದೃಷ್ಟಿ ತೆಗೆದರೂ ರಥವಂತೂ ಕದಲಲೇ ಇಲ್ಲ! ರಾಜದಾಸಿಯರೂ ದೇವದಾಸಿಯರೂ ಬಂದು ವಿಶೇಷ ನರ್ತನ ಸೇವೆ ಸಲ್ಲಿಸಿದರೂ ರಥವು ಕಿಂಚಿತ್ತೂ ಜರುಗಲಿಲ್ಲ! ಅಲ್ಲದೆ ರಥವನ್ನು ಎಳೆಯುವವರ ಮರಗಟ್ಟಿದ್ದ ಮೈಯೂ ಸರಿಯೇ ಆಗಲಿಲ್ಲ! ಇದನ್ನೆಲ್ಲ ಗಮನಿಸುತ್ತಿದ್ದ ಒಬ್ಬ ವೃದ್ಧ ಅರ್ಚಕರು ಮುಂದೆ ಬಂದು ಹೇಳಿದರು — “ಅಯ್ಯಾ, ಅಲ್ಲಿ ದೂರದಲ್ಲಿ ಭಕ್ತರೊಬ್ಬರು ದೇವರಿಗಾಗಿ ಗಂಧರ್ವ ಗಾಯನವನ್ನು ಮಾಡುತ್ತಿದ್ದರು, ದೇವರ ಸಮೀಪ ಬರಬೇಕೆಂದು ಆತ ಯತ್ನಿಸಿದರೂ ಆತನಿಗೆ ಜನಜಂಗುಳಿಯ ನೂಕಾಟದಿಂದ ಬರಲು ಸಾಧ್ಯವಾಗಲಿಲ್ಲ, ನೀವು ಆ ಭಕ್ತನನ್ನು ಕರೆದುಕೊಂಡು ಬಂದು ಶ್ರೀದೇವರ ದರ್ಶನವನ್ನು ಮಾಡಿಸಿ ಪ್ರಸಾದವನ್ನು ನೀಡಿ, ಆಗ ಈ ರಥ ಮುಂಜರಗುತ್ತದೆ” – ಎಂದು ಸಲಹೆ ನೀಡಿದರು. ಆ ಕೂಡಲೇ ದೇವಸ್ಥಾನಕ್ಕೆ ಸಂಬಂಧಿಸಿದ ಅಧಿಕಾರಿಗಳೆಲ್ಲ ಸೇರಿ ತ್ಯಾಗರಾಜರ ಬಳಿಗೆ ಹೋಗಿ ವಿಷಯವನ್ನು ತಿಳಿಸಿ ಉತ್ಸವದೇವರ ಸಮೀಪಕ್ಕೆ ಕರೆತಂದರು. ತ್ಯಾಗರಾಜರು ಭಕ್ತಿಯ ಅತಿಶಯದಿಂದಲೇ ಆನಂದಭಾಷ್ಪವನ್ನು ಸುರಿಸುತ್ತ “ವಿನರಾದ ನಾ ಮನವಿನಿ”-ಎಂಬ ಕೀರ್ತನೆಯನ್ನು ಹಾಡಿದರು. ಆ ಗಂಧರ್ವ ಗಾಯನಕ್ಕೆ ರಾಜದಾಸಿಯರೂ ಬಂದು ದೇವರ ಸೇವೆಗೆಂದು ನರ್ತಿಸಿದರು. ಕೀರ್ತನೆಯು ಮುಗಿದ ಮೇಲೆ ದೀಪಾರಾಧನೆಯನ್ನು ಮಾಡಿದ ಮೇಲೆಯೇ ಆ 16 ಮಂದಿಗೆ ಮೈಮರಗಟ್ಟಿದ್ದು ಮಾಯವಾಗಿ, ದೇವರ ರಥವು ಸುಲಭವಾಗಿ ಚಲಿಸಲು ಆರಂಭವಾಯಿತು.. ನೆರೆದ ಭಕ್ತರೆಲ್ಲ ಹರ್ಷೋದ್ಗಾರವನ್ನು ಮಾಡಿದರು. ದೇವರಿಗೆ ಜಯಕಾರವನ್ನು ಹಾಕಿದರು. ದೇವಸ್ಥಾನದ ಆಡಳಿತದವರು ಶ್ರೀರಂಗನಾಥನ ಮೂಲದೇವರ ದರ್ಶನಕ್ಕೆಂದು ದೇವಸ್ಥಾನಕ್ಕೇ ತ್ಯಾಗರಾಜರನ್ನು ಕರೆದುಕೊಂಡು ಹೋಗಿ ದೇವರ ದರ್ಶನವನ್ನು ಮಾಡಿಸಿದರು. ಮುತ್ತಿನ ಆಭರಣಗಳಿಂದ ಅಲಂಕೃತನಾಗಿದ್ದ ಆ ಮಹಾಮಹಿಮ ದೇವರಾದ ಶ್ರೀರಂಗನಾಥನನ್ನು ಕಂಡು ತ್ಯಾಗರಾಜರು ಕಾಂಬೋಜಿ ರಾಗದ, ಆದಿತಾಳದ ಅವರ ಪ್ರಸಿದ್ಧ ಕೃತಿಯಾದ “ಓ ರಂಗಶಾಯಿ” – ಕೀರ್ತನೆಯನ್ನು ರಚಿಸಿ ಹಾಡಿದರು.

ಭಗವಂತನು ನೆಲೆಸುವುದು ನಿಜ ಭಕ್ತರ ಹೃದಯದಲ್ಲೇ. ಇಂತಹ ಸಂದರ್ಭಗಳು ಭಕ್ತರ ಮಹಿಮೆಯನ್ನೂ ತೋರಿಸುವಂತಹ ಸಂದರ್ಭಗಳು. ಅಲ್ಲವೇ?

ಕೋದಂಡರಾಮ

ತ್ಯಾಗರಾಜರ ಪುತ್ರಿಯ ವಿವಾಹ ಮಹೋತ್ಸವವು ನಡೆಯುತ್ತಾ ಇತ್ತು. ಅನೇಕ ಶಿಷ್ಯರು ಅವರವರಿಗೆ ಏನೇನು ತೋರುತ್ತದೆಯೋ, ಸಾಧ್ಯವೋ ಅಂತಹ ಉಡುಗೊರೆಗಳನ್ನು ತಮ್ಮ ಗುರುಪುತ್ರಿಗೆ ನೀಡಲೆಂದು ತಂದಿದ್ದರು. ವಾಲಾಜಾಪೇಟೆ ವೆಂಕಟರಮಣ ಭಾಗವತರು ಅತ್ಯಂತ ಸುಂದರ ಮನೋಹರವಾದ ಕೋದಂಡರಾಮನ ವರ್ಣಚಿತ್ರವನ್ನು ತಂದು ತ್ಯಾಗರಾಜರ ಪುತ್ರಿಗೆ ಉಡುಗೊರೆಯಾಗಿ ತಂದರು. ಈ ವರ್ಣಚಿತ್ರವನ್ನು ರಚಿಸಿದ್ದೂ ಸಹ ಒಬ್ಬ ಸಂಗೀತಗಾರನೇ. ಆತನ ಹೆಸರು ಪಲ್ಲವಿ ಎಲ್ಲಯ್ಯ.

ಆ ದಿನಗಳಲ್ಲಿ ಏರೋಪ್ಲೇನ್ ಬಿಡಿ! ಬಸ್ಸು, ರೈಲುಗಳೂ ಇಲ್ಲದೆ, ಬರೇ ಶ್ರೀಮಂತರು ಮಾತ್ರ ಎತ್ತಿನ ಅಥವಾ ಕುದುರೆ ಗಾಡಿಗಳಲ್ಲಿ ಪ್ರಯಾಣ ಮಾಡಬೇಕಿತ್ತು. ಸಾಧ್ಯವಿಲ್ಲದವರು ನಡೆಯಬೇಕಾಗುತ್ತಿತ್ತು! ವಾಲಾಜಾಪೇಟೆ ವೆಂಕಟರಮಣ ಭಾಗವತರು ತಮ್ಮ ಗುರುಪುತ್ರಿಗೆ ಉಡುಗೊರೆ ನೀಡಲೆಂದು ವಾಲಾಜಾಪೇಟೆಯಿಂದ ತಿರುವೈಯ್ಯಾರಿನವರೆಗೂ ನಡೆದುಕೊಂಡು, ಸುಂದರವಾಗಿ ಕೆತ್ತನೆ ಮಾಡಿ ಮರದ ಕಟ್ಟುಹಾಕಿದ್ದ ಆ ವರ್ಣಚಿತ್ರವನ್ನು ಹೊತ್ತುಕೊಂಡೇ ತೆಗೆದುಕೊಂಡು ಬಂದಿದ್ದರು. ಆ ಸುಂದರ ಚಿತ್ರವನ್ನು ನೋಡಿ ತ್ಯಾಗರಾಜರಿಗೆ ತನ್ನನ್ನು ರಕ್ಷಿಸಲು ಶ್ರೀ ಕೋದಂಡರಾಮನೇ ಪ್ರತ್ಯಕ್ಷವಾಗಿ ಬಂದಿದ್ದಾನೆಂದು ಕಂಡು ಮೋಹನರಾಗದ ಆದಿತಾಳದ “ನನ್ನು ಪಾಲಿಂಪ ನಡಚಿ ವಚ್ಚಿತೆವೋ” – ನನ್ನನ್ನು ಪಾಲಿಸಲು ನಡೆದು ಬಂದೆಯಲ್ಲ! – ಎಂದು ಹಾಡಿದರು! ಈ ವರ್ಣಚಿತ್ರವು ಇಂದಿಗೂ ತಿರುವೈಯ್ಯಾರಿನಲ್ಲಿ ಇದೆಯೆಂದು ತಿಳಿದವರು ಹೇಳುತ್ತಾರೆ.

ಒಂದು ದಿನ ತ್ಯಾಗರಾಜರು ಹೊರಗೆಲ್ಲೋ ಹೋಗಿ ತಮ್ಮ ಕಾರ್ಯವನ್ನು ಮುಗಿಸಿ ಪುನಃ ಮನೆಗೆ ಬಂದಾಗ ತಮ್ಮ ಪತ್ನಿಯೊಡನೆ ಯಾರೋ ಒಬ್ಬರು ಸಂಭಾಷಿಸುತ್ತಿರುವಂತೆ ತ್ಯಾಗರಾಜರಿಗೆ ಕೇಳಿತು. ತ್ಯಾಗರಾಜರಿಗೆ ತಮ್ಮ ಪತ್ನಿಯು ಅಷ್ಟು ಸುಲಲಿತವಾಗಿ, ಭಕ್ತಿಯಿಂದ ಮಾತನಾಡುತ್ತಿದ್ದುದು ಯಾರೊಡನೆ ಎಂದು ತಿಳಿಯಬೇಕೆಂಬ ಕುತೂಹಲವು ಮೂಡಿ , ಹೊರಗೆ ಕೈ ಕಾಲುಗಳನ್ನು ತೊಳೆದು ಮನೆಯೊಳಗೆ ಹೊಕ್ಕು ತಮ್ಮ ಪತ್ನಿಯಿದ್ದೆಡೆಗೆ ಬಂದರು. ಅವರನ್ನು ಕಂಡ ಕೂಡಲೇ ಪತ್ನಿಯೊಂದಿಗೆ ಮಾತನಾಡುತ್ತಿದ್ದ ಆ ಸ್ತ್ರೀಯು ಮಾಯವಾಗಿಬಿಟ್ಟಳು. ತಕ್ಷಣವೇ ತ್ಯಾಗರಾಜರರಿಗೆ ತನ್ನ ಪತ್ನಿಯೊಂದಿಗೆ ಸಂಭಾಷಣೆಯನ್ನು ನಡೆಸುತ್ತಿದ್ದುದು ಮಾಮೂಲಿ ಮಾನವರಾಗದೆ, ತಿರುವೆಯ್ಯಾರಿನ ದೇಗುಲದಲ್ಲಿ ಸದಾ ಪೂಜೆಗೊಳ್ಳುವ ದೇವಿ ಧರ್ಮಸಂವರ್ಧಿನೀ ಎಂದು ಜ್ಞಾನೋದಯವಾಯಿತು. ಕೂಡಲೇ ಆ ದೇವಿಯನ್ನು ಆಶುವಾಗಿ “ನನು ಗನ್ನ ತಲ್ಲಿ” ಹಾಗೂ “ಶಿವೆ ಪಾಹಿಮಾಂ” – ಎಂಬ ಎರಡು ಕೀರ್ತನೆಗಳನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ತಾಯಿ ಭಗವತಿ ಧರ್ಮಸಂವರ್ಧಿನಿಯೇ ಆಗಮಿಸಿ ತನ್ನ ಪತ್ನಿಗೆ ದರ್ಶನ ಭಾಗ್ಯವನ್ನು ನೀಡಿದ್ದಕ್ಕಾಗಿ ತಮ್ಮ ಪತ್ನಿಯನ್ನು ಕುರಿತು ಆನಂದವಾಯಿತು.

ತ್ಯಾಗರಾಜರ ಸಂಗೀತಗುರುಗಳಾದ ಸೊಂಠಿ ವೆಂಕಟರಮಣಯ್ಯನವರಿಗೆ ಬಾಲಕ ತ್ಯಾಗರಾಜರು ಕಲಿಯುವ ವೇಗ, ಬದ್ಧತೆ, ಶಿಸ್ತು, ಭಕ್ತಿ, ಅಭ್ಯಾಸ ಮಾಡುವ ಪರಿ ಇತ್ಯಾದಿ ಎಲ್ಲವೂ ಆಶ್ಚರ್ಯವನ್ನೇ ಉಂಟುಮಾಡುತ್ತಿತ್ತು. ಅವರು ತ್ಯಾಗರಾಜರಿಗೆ ಒಂದು ವರ್ಷದ ಕಾಲ ಪಾಠವನ್ನು ಮಾಡಿದಾನಂತರ ತನಗೆ ತ್ಯಾಗರಾಜರಿಗೆ ಪಾಠ ಮಾಡುವ ಅವಶ್ಯಕತೆಯೇ ಇಲ್ಲ, ಎಂದೆನಿಸಿ, ಒಂದು ದಿನ ಬೆಳಿಗ್ಗೆ ಅವರು ತ್ಯಾಗರಾಜರನ್ನು ಕರೆದು ಹೀಗೆಂದರು :”ಮಗು ತ್ಯಾಗರಾಜ ನೀನೀಗ ಸಂಗೀತದಲ್ಲಿ ಪಾರಂಗತನಾಗಿದ್ದೀಯೆ. ನಿನ್ನಿಂದಾಗಿ ನನ್ನ ಹೆಸರೂ ಸಹ ಸಂಗೀತಲೋಕದಲ್ಲಿ ಶಾಶ್ವತವಾದಂತಾಯಿತು. ನಾನು ಇನ್ನು ನಿನಗೆ ಪಾಠವನ್ನು ಮಾಡುವ ಅವಶ್ಯಕತೆ ಇಲ್ಲ. ನೀನೇ ಅಭ್ಯಾಸವನ್ನು ಮಾಡು. ಕೀರ್ತನೆಗಳನ್ನು ರಚಿಸು, ಕೀರ್ತಿಶಾಲಿಯಾಗು” —ಎಂದು ಹರಸಿ ಅಲ್ಲಿಂದ ಹೊರಟರು. ತ್ಯಾಗರಾಜರಿಗೆ ತಮ್ಮ ಗುರುಗಳು ಅಲ್ಲಿಂದ ಹೊರಟರೆಂದು ದುಃಖವಾದರೂ ಗುರುಗಳ ಕಾರ್ಯಬಾಹುಳ್ಯವನ್ನು ನೆನೆದು ಅವರನ್ನು ನಿಲ್ಲಿಸಲು ಧೈರ್ಯವಾಗಲಿಲ್ಲ.

1845 ನೆಯ ಇಸವಿ. ತ್ಯಾಗರಾಜರ ಪತ್ನಿಯವರು ವಿಶ್ವಾವಸು ಸಂವತ್ಸರ ಹಾಗೂ ಪ್ರಭವಸಂವತ್ಸರದ ಮಧ್ಯಕಾಲದಲ್ಲಿ ದೇವರಪಾದವನ್ನೈದುಬಿಟ್ಟರು. ಹೀಗಾದ ಮರುವರ್ಷವಾದ ಪರಾಭವ ಸಂವತ್ಸರದಲ್ಲಿ ಭಗವಂತನು ತ್ಯಾಗರಾಜರ ಕನಸಲ್ಲಿ ಬಂದು – “ಭಕ್ತನಾದ ನನ್ನ ಪ್ರಿಯ ತ್ಯಾಗರಾಜ, ನಿನ್ನ ಅವತಾರದ ಸಮಾಪ್ತಿ ಕಾಲವು ಹತ್ತಿರ ಬಂದಿದೆ. ಇನ್ನು ಹತ್ತು ದಿನಗಳಲ್ಲಿ ನೀನು ನನ್ನಲ್ಲಿ ಸೇರಿಬಿಡುತ್ತೀಯೆ!” – ಎಂದು ಹೇಳಿಬಿಟ್ಟನು. ಪುಷ್ಯ ಮಾಸದ ಶುದ್ಧ ಏಕಾದಶಿಯಂದು ಎಂದಿನಂತೆ ಭಜನೆಯು ನಡೆಯುತ್ತಿತ್ತು. ತ್ಯಾಗರಾಜರು ಎಲ್ಲ ಶಿಷ್ಯರನ್ನೂ ಕರೆದು – “ಬರುವ ಪುಷ್ಯ ಬಹುಳ ಪಂಚಮಿಯಂದು ಒಂದು ಅದ್ಭುತ ವಿಷಯವು ಸಂಭವಿಸುತ್ತದೆಯಾದ್ದರಿಂದ, ಶಿಷ್ಯರಾದ ನೀವೆಲ್ಲರೂ ತಪ್ಪದೆ ಬನ್ನಿ “- ಎಂದು ಆಹ್ವಾನವನ್ನಿತ್ತರು. ಅವರು ಹೇಳಿದ ಪರಿಯು ಎಲ್ಲರನ್ನೂ ಬಹಳವಾದ ಚಿಂತೆಗೀಡು ಮಾಡಿತು. ತ್ಯಾಗರಾಜರು ಆ ಚತುರ್ಥಿಯಂದು ಪರಮಹಂಸರಾದ ಬ್ರಹ್ಮಾನಂದೇಂದ್ರಸ್ವಾಮಿಗಳನ್ನು ಕೋರಿ ಸಂನ್ಯಾಸವನ್ನು ಸ್ವೀಕರಿಸಿದರು. ಈ ಮೊದಮೊದಲು ಆ ಪರಮಹಂಸರು ತ್ಯಾಗರಾಜರು ತಾವೇ ಸ್ವತಃ ಜೀವನ್ಮುಕ್ತರೆಂದೂ ಈ ಸಂನ್ಯಾಸವನ್ನು ಸ್ವೀಕರಿಸುವ ಅವಶ್ಯಕತೆ ಇಲ್ಲವೆಂದು ಹೇಳಿದರೂ ತ್ಯಾಗರಾಜರ ಕೋರಿಕೆಯನ್ನು ಮನ್ನಿಸಿ ಸಂನ್ಯಾಸಾಶ್ರಮವನ್ನಿತ್ತು ಅವರಿಗೆ ನಾದಬ್ರಹ್ಮಾನಂದರೆಂಬ ನಾಮಕರಣವನ್ನು ಮಾಡಿದರು. ಹೀಗೆ ಸಂನ್ಯಾಸಾಶ್ರಮವನ್ನು ಸ್ವೀಕಾರ ಮಾಡಿದ ತ್ಯಾಗರಾಜರು ಎಲ್ಲ ಶಿಷ್ಯರನ್ನೂ ಕರೆದು ತಮ್ಮನ್ನು ಶ್ರೀರಾಮನು ಮರುದಿನ ಬೆಳಿಗ್ಗೆ 11 ಗಂಟೆಗೆ ಕರೆದೊಯ್ಯುವುದಾಗಿಯೂ, ಈಗಿನಿಂದಲೇ ಎಲ್ಲರೂ ಭಜನೆಯನ್ನು ನಿರಂತರವಾಗಿ ಮಾಡುತ್ತಲೇ ಇರಬೇಕೆಂದೂ ಸೂಚನೆಯನ್ನಿತ್ತರು. ಈ ಸುದ್ದಿಯು ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬಿ ಶೀಘ್ರವೇ ಬಲು ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿ ನೆರೆದುಬಿಟ್ಟರು ಮತ್ತು ಭಜನೆಯಲ್ಲಿ ಅವರೂ ಭಕ್ತಿಯಿಂದ ದನಿಗೂಡಿಸಿದರು. ಎಲ್ಲರಲ್ಲೂ ವಿಷಾದವೇ ಮನೆ ಮಾಡಿತ್ತು. ಸಮಯವು ಹತ್ತಿರ ಬಂದಂತೆ ತ್ಯಾಗರಾಜರು ಯೋಗಸಮಾಧಿಯಲ್ಲಿ ಕುಳಿತುಬಿಟ್ಟರು. ಜನರು ನಿಶ್ಶಬ್ದರಾದರು. ನೆರೆದ ಸರ್ವರಿಗೂ ಆ ಸಂಗೀತಸಂತರ ಶೀರ್ಷಭಾಗದಿಂದ ನಿರಂತರವಾದ ಓಂಕಾರ ನಾದವು ಹೊರಡುವುದನ್ನು ಕೇಳಿ ಆಶ್ಚರ್ಯವಾಯಿತು. ತ್ಯಾಗರಾಜರ ದೇಹದ ಸುತ್ತಲೂ ಬೆಳದಿಂಗಳ ಬೆಳಕಿನ ಪ್ರಭಾವಳಿಯೊಂದು ಪ್ರಕಾಶಮಾನವಾಗಿ ಬೆಳಗಲು ಆರಂಭಿಸಿತು. ಹಾಗೆಯೇ ಆ ಬೆಳಕು ತಾನೇ ಚಲಿಸುತ್ತ ತ್ಯಾಗರಾಜರ ದೇಹದಿಂದ ಹೊರಟು ಉತ್ತರಕ್ಕೆ ಹೋಗುತ್ತ ಹೋಗುತ್ತ ಕಡೆಗೆ ಮಾಯವಾಗಿಬಿಟ್ಟಿತು. ಈ ಸಮಯದಲ್ಲಿ ನೆರೆದಿದ್ದ ಶಿಷ್ಯರೆಲ್ಲ ಕಣ್ಣೀರು ಸುರಿಸುತ್ತಲೇ ಗದ್ಗದಕಂಠರಾಗಿ ಗಾಯನ ಮಾಡುತ್ತಿದ್ದರು. ತ್ಯಾಗರಾಜರ ಕಳೇಬರವನ್ನು ಅವರ ಅಪೇಕ್ಷೆಯಂತೆಯೇ ಅವರ ಗುರು ಸೊಂಠಿ ವೆಂಕಟರಮಣಯ್ಯನವರ ಸಮಾಧಿ ಪಕ್ಕದಲ್ಲೇ ವಿಧಿವತ್ತಾಗಿ ಸಮಾಧಿ ಮಾಡಲಾಯಿತು. ಅವರು ಹರಿದಾಸರಾಗಿದ್ದಿದ್ದರಿಂದ ಸಮಾಧಿಗೆ ಬೃಂದಾವನವನ್ನು ಕಟ್ಟಿ ಅದರಲ್ಲಿ ತುಳಸಿಯನ್ನು ನೆಡಲಾಯಿತು.

ಆನಂತರ ಅನತಿ ಕಾಲದಲ್ಲಿಯೇ ಕೆಲವು ಶಿಷ್ಯರಿಂದ ಶ್ರೀ ತ್ಯಾಗರಾಜ ಆರಾಧನೋತ್ಸವವು ಜರುಗಲಾರಂಭಿಸಿದರೂ ಬೆಂಗಳೂರು ನಾಗರತ್ನಮ್ಮ ಎಂಬ ಸಂಗೀತವಿದುಷಿಗೆ ತ್ಯಾಗರಾಜರು ಕನಸಿನಲ್ಲಿ ಬಂದು ಹೇಳಿದರೆಂದೂ ತನಗೆ ಆತನೇ ಗುರುವೆಂದೂ, ಆಕೆ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಸಮಾಧಿಯನ್ನು ದೇಗುಲವನ್ನಾಗಿ ಮಾರ್ಪಡಿಸಿ, ಆರಾಧನೆಯನ್ನು, ಪಂಚರತ್ನ ಗೋಷ್ಠಿಗಾನದ ಸಮೇತ ವ್ಯವಸ್ಥಿತವಾಗಿ ನಿರಂತರವಾಗಿ ನಡೆಯುವಂತೆ ಮಾಡಿದ ಕೀರ್ತಿ ಆಕೆಯದಾಯಿತು.

ಮತ್ಸರಿ ಸಹೋದರ

ತ್ಯಾಗರಾಜರ ಮಹಾ ಮತ್ಸರಿಯಾದ ಹಿರಿಯ ಸಹೋದರ ಜಲ್ಪೇಶನು ಏನೂ ಕಾರಣವೇ ಇಲ್ಲದೆ ತ್ಯಾಗರಾಜರಲ್ಲಿ ಜಗಳವನ್ನು ಮಾಡಲು ಆರಂಭಿಸುತ್ತಲೇ ಇರುತ್ತಿದ್ದ. ಈ ಮೊದಲೇ ಆತನು ಹೀಗೆ ಜಗಳವನ್ನಾಡಿ ಆಸ್ತಿಯ ಬಹುಪಾಲನ್ನು ಕಿತ್ತುಕೊಂಡಿದ್ದರೂ, ಹಿರಿಯ ಮಗನಾದ ತನಗೆ ಪೂಜೆ ಮಾಡುವ ಖರ್ಚು, ಜವಾಬ್ದಾರಿಗಳು ಬೇಡವೆಂದು ಮನೆತನದ ದೇವರುಗಳನ್ನೆಲ್ಲ ಪೂಜೆ ಮಾಡಲೆಂದು ತ್ಯಾಗರಾಜರಿಗೇ ಸಂಪೂರ್ಣ ಜವಾಬ್ದಾರಿಯ ಹೊರೆಯನ್ನು ಹೊತ್ತುಹಾಕಿದ್ದರೂ, ಲೋಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದ ತ್ಯಾಗರಾಜರ ಮೇಲಣ ಗೌರವ, ಪ್ರೀತಿ, ಕೀರ್ತಿಗಳನ್ನು ನೋಡಿ ಸಹಿಸಲಾಗದೆ, ಸ್ಥಿತಪ್ರಜ್ಞರಾಗಿದ್ದ ತ್ಯಾಗರಾಜರಿಗೆ ಹೇಗಾದರೂ ಮಾಡಿ ದುಃಖವನ್ನುಂಟುಮಾಡಲೇ ಬೇಕೆಂದು ನಿರ್ಧಾರ ಮಾಡಿ, ಸಂದರ್ಭಕ್ಕಾಗಿ ಆತನು ಕಾಯುತ್ತಲೇ ಇದ್ದ.. ಆ ಸಮಯವೂ ಆತನಿಗೆ ಸುಲಭವಾಗಿ ಒದಗಿಯೇ ಬಂದಿತು.

ಒಂದು ವರ್ಷ ಭೋಗಿ ಹಬ್ಬಕ್ಕೆ ಸ್ವಲ್ಪ ಮುನ್ನ ಒಂದು ದಿನ ತ್ಯಾಗರಾಜರೂ ಅವರ ಶಿಷ್ಯರೂ ಉಂಛವೃತ್ತಿಗೆ ಹೋಗಿರುವ ಸಮಯವನ್ನು ನೋಡಿ ಜಲ್ಪೇಶನು ಬಂದು ತ್ಯಾಗರಾಜರು ಪ್ರಾಣಪ್ರದವಾಗಿ ಇಟ್ಟುಕೊಂಡು ಸಕಲ ರೀತಿಯ ಪೂಜಾದಿ ಸೇವೆಗಳನ್ನೂ ಸಲ್ಲಿಸುತ್ತಿದ್ದ ಶ್ರೀ ಸೀತಾರಾಮಚಂದ್ರನ ವಿಗ್ರಹವನ್ನು ತೆಗೆದುಕೊಂಡು ಹೋಗಿ ಕಾವೇರಿ ನದಿಯಲ್ಲಿ ಬಿಸಾಡಿಬಿಟ್ಟ! ತ್ಯಾಗರಾಜರು ಉಂಛವೃತ್ತಿಯಲ್ಲಿ ದೊರಕಿದ ಭಿಕ್ಷೆಯ ಅಕ್ಕಿ ಮುಂತಾದ ಸುವಸ್ತುಗಳನ್ನು ತೆಗೆದುಕೊಂಡು ಹೋಗಿ ತಮ್ಮ ಮಡದಿಗೆ ಕೊಟ್ಟು ಅದನ್ನು ಅಡುಗೆ ಮಾಡಿ ದೇವರ ಮುಂದೆ ನೈವೇದ್ಯಕ್ಕೆ ಸಿದ್ಧಪಡಿಸಬೇಕೆಂದು ಆದೇಶಿಸಿ, ಸ್ನಾನದ ಮೊದಲು ಪೂಜೆಯ ತಯಾರಿ ನಡೆಸಲೆಂದು ಬಂದು ದೇವರ ಮನೆಯಲ್ಲಿ ನೋಡಿದರೆ, ಶ್ರೀ ಸೀತಾರಾಮಚಂದ್ರನ ದೇವರ ವಿಗ್ರಹವೇ ಕಾಣುತ್ತಿಲ್ಲ! ಎಲ್ಲೆಡೆ ಹುಡುಕಿದರೂ ದೊರಕಲೂ ಇಲ್ಲ! ತ್ಯಾಗರಾಜರಿಗೆ ತಮ್ಮ ತಲೆಯ ಮೇಲೆ ಪರ್ವತವನ್ನೇ ಹೊತ್ತುಹಾಕಿದಂತಾಗಿ ತಡೆಯಲಾಗದಷ್ಟು ದುಃಖವಾಯಿತು. ಅನೇಕ ಕೀರ್ತನೆಗಳ ಮೂಲಕ ಭಗವಂತನಾದ ಶ್ರೀರಾಮನನ್ನು ಸ್ತುತಿಸಿ, ಆತನು ಬಂದು ಅವರಿಗೆ ದರ್ಶನವನ್ನು ನೀಡಬೇಕೆಂದು ಕೋರಿದರು. ಎಷ್ಟು ಹುಡುಕಿದರೂ ರಾಮನ ವಿಗ್ರಹವು ದೊರಕಲಿಲ್ಲ. ಅವರಿಗೆ ತಿರುವೆಯ್ಯಾರಿನಲ್ಲಿಯೇ ಇರಲು ಮನಸ್ಸು ಬರಲಿಲ್ಲ. ಅವರ ದುಃಖವನ್ನು ನೋಡಲಾಗದೆ ಶಿಷ್ಯರೆಲ್ಲರೂ ಅದನ್ನು ಮರೆಸಲು ಎಷ್ಟೋ ಪ್ರಯತ್ನಿಸಿದರು. ಎಲ್ಲರೂ ತಮ್ಮ ತಮ್ಮ ಮನೆಗೆ ಬರಬೇಕೆಂದು ಪ್ರಾರ್ಥನೆಯನ್ನು ಸಲ್ಲಿಸಿದರು.

ಶಿಷ್ಯರ ಪ್ರಾರ್ಥನೆಯನ್ನು ಮನ್ನಿಸಿ ತ್ಯಾಗರಾಜರು ಶಿವರಾತ್ರಿಯ ಪೂಜೆಯಂದು ತಂಜಾವೂರು ಸಮೀಪದ ಮಾನಂಬುಚಾವಡಿಯಲ್ಲಿದ್ದ ವೆಂಕಟಸುಬ್ಬಯ್ಯರ್ ಮನೆಗೆ ಹೋಗಿದ್ದು, ಫಲ್ಗುಣಿ ಉತ್ತಿರಂ ಹಬ್ಬಕ್ಕೆ ತಿರುವಾರೂರಿಗೆ ಹೋಗಿದ್ದು ಸಪ್ತಸ್ಥಾನದ ಉತ್ಸವಕ್ಕಾಗಿ ತಿರುವೆಯ್ಯಾರಿಗೆ ಮರಳಿದರು. ಅಂದು ರಾತ್ರಿ ತ್ಯಾಗರಾಜರಿಗೆ ಕನಸೊಂದು ಕಂಡು ಅದರಲ್ಲಿ ಶ್ರೀ ರಾಮಚಂದ್ರನು ತಾನು ಕಾವೇರಿ ನದಿಯ ಇಂತಹ ಭಾಗದಲ್ಲಿದ್ದೇನೆಂದೂ ತನ್ನನ್ನು ಕರೆತರಬೇಕೆಂದೂ ಹೇಳಿದಂತಾಯಿತು. ತ್ಯಾಗರಾಜರು ಆ ಕೂಡಲೇ ನದಿತಟಾಕಕ್ಕೆ ಓಡಿ ಹೋಗಿ ನೋಡಿದಾಗ ತನ್ನ ಕನಸಿನಲ್ಲಿ ಹೇಳಿದಂತಹ ಸ್ಥಳದಲ್ಲಿಯೇ, ಅವರ ಶ್ರೀರಾಮಚಂದ್ರ ದೇವರ ವಿಗ್ರಹವೂ ಅದರ ಸಮೀಪದಲ್ಲೇ ದೇವರ ಪ್ರಭಾವಳಿಯೂ ದೊರಕಿ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಅಲ್ಲಿಯೇ ಕಾವೇರಿ ನೀರಿನ ಅಭಿಷೇಕವನ್ನು ದೇವರಿಗೆ ಮಾಡಿ, ಹಾಡುತ್ತ ಹಾಡುತ್ತ ತಮ್ಮ ಶ್ರೀರಾಮಚಂದ್ರನನ್ನು ಮನೆಗೆ ಕರೆತಂದರು. ಅಂದಿಗೆ ಅವರು ಶ್ರೀರಾಮಚಂದ್ರನ ವಿಗ್ರಹವನ್ನು ಕಳೆದುಕೊಂಡು ಎರಡು ತಿಂಗಳುಗಳೇ ಕಳೆದುಹೋಗಿದ್ದವು!

ವಿಚಿತ್ರವೆಂದರೆ ತ್ಯಾಗರಾಜರ ಅಣ್ಣ ಜಲ್ಪೇಶನ ಮರಿಮಗನೊಬ್ಬನು ಆತನು ದೇವರನ್ನು ಬಿಸಾಡಿದ್ದ ನದಿಯ ಸ್ಥಳದಲ್ಲಿಯೇ ಅಚಾನಕ್ ಆಗಿ ಬಿದ್ದು, ಮುಳುಗಿ ಆ ಹುಡುಗನ ಶವವು ಮೇಲೆ ತೇಲಿ ಬಂದಾನಂತರವೇ ಜನಕ್ಕೆ ಈ ದುರಂತದ ಸಂಗತಿ ತಿಳಿಯಿತು. ನಾವು ಮಾಡಿದ ಪಾಪವು ನಮ್ಮ ಸಂತಾನವನ್ನೂ ಬಾಧಿಸುತ್ತದೆ ಎಂದು ಜನ ಮಾತನಾಡಿಕೊಂಡರು.

(ಸಂಗ್ರಹಿಸಿ ಸಂಪಾದಿಸಿಕೊಟ್ಟವರು ವಿದುಷಿ ರೋಹಿಣಿ ಸುಬ್ಬರತ್ನಂ)