ಮುದ್ದುಸ್ವಾಮಿ ದೀಕ್ಷಿತರು

Muttuswamy Dikshitar

ತ್ರಿಮೂರ್ತಿಗಳಲ್ಲಿ ಮೂರನೆಯವರು ಮುದ್ದುಸ್ವಾಮಿ ದೀಕ್ಷಿತರು. ಅವರ ತಂದೆ ರಾಮಸ್ವಾಮಿ ದೀಕ್ಷಿತರೂ ಅವರ ಪತ್ನಿಯೂ ತಿರುವಾರೂರಿನ ಶ್ರೀ ವೈದ್ಯನಾಥಸ್ವಾಮಿಗೆ ಎಷ್ಟೋ ವರ್ಷಗಳ ಕಾಲ ಪೂಜೆ ಪುನಸ್ಕಾರ ವ್ರತಾದಿಗಳನ್ನು ಮಾಡಿದ ಮೇಲೆ ಮುದ್ದುಸ್ವಾಮಿ ದೀಕ್ಷಿತರ ಜನನವಾದದ್ದು. ಮುದ್ದುಸ್ವಾಮಿ ದೀಕ್ಷಿತರಿಗೆ ಆನಂತರ ಒಡಹುಟ್ಟಿದವರು ಚಿನ್ನಸ್ವಾಮಿ ದೀಕ್ಷಿತ, ಬಾಲಾಂಬ ಮತ್ತು ಬಾಲುಸ್ವಾಮಿ ದೀಕ್ಷಿತ ಎಂಬುವವರು. ಎಲ್ಲರೂ ಘನವಿದ್ವಾಂಸರುಗಳೇ. ಬಹಳ ಎಳವೆಯಲ್ಲಿ ವೇದ, ಕಾವ್ಯ, ಅಲಂಕಾರ, ಸಂಗೀತ, ವೀಣಾವಾದನ, ಜ್ಯೋತಿಷ, ವೈದ್ಯ ಮತ್ತು ಮಂತ್ರಶಾಸ್ತ್ರ ಇತ್ಯಾದಿಗಳನ್ನು ಕಲಿತು ನಿಷ್ಣಾತ ಪಂಡಿತರಾದ ಮುದ್ದುಸ್ವಾಮಿ ದೀಕ್ಷಿತರನ್ನು ಆ ಕಾಲದಲ್ಲಿ ವಿದ್ಯೆಗಳಿಗೆ ಮಹಾಪೋಷಕರಾಗಿದ್ದ ಮಣಲಿ ಚಿನ್ನಯ್ಯ ಮೊದಲಿಯಾರರು ತಮ್ಮ ಮನೆಗೆ ಒಂದು ದಿನ ಕರೆದುಕೊಂಡು ಹೋದರು.

ಆ ಸಮಯದಲ್ಲಿ ಮಣಲಿ ಚಿನ್ನಯ್ಯ ಮೊದಲಿಯಾರರ ಮನೆಯಲ್ಲಿ ಚಿದಂಬರನಾಥ ಯೋಗಿ ಎಂಬ ಮಹಾಯೋಗಿ ತಪಸ್ವಿಯೊಬ್ಬರು ಬಿಡಾರವನ್ನು ಮಾಡಿದ್ದರು. ಅವರಿಗೆ ಮುದ್ದುಸ್ವಾಮಿ ದೀಕ್ಷಿತರನ್ನು ನೋಡಿ ಬಹಳ ಆನಂದವಾಗಿ ಅವರಿಗೆ ಶ್ರೀವಿದ್ಯಾ ದೀಕ್ಷೆಯನ್ನು ಕೊಟ್ಟು ಅವರನ್ನು ತಮ್ಮೊಂದಿಗೆ ಕಾಶಿಗೆ ಕರೆದುಕೊಂಡು ಹೋಗಿ ಐದು ವರ್ಷಗಳ ಕಾಲ ಅವರಿಗೆ ಕರ್ನಾಟಕ, ಹಿಂದೂಸ್ಥಾನೀ, ಆಂಗ್ಲ ಸಂಗೀತಪದ್ಧತಿ, ಮಂತ್ರ – ತಂತ್ರಶಾಸ್ತ್ರ ಮುಂತಾದ ವಿದ್ಯೆಗಳನ್ನು ನೀಡಿ ದೀಕ್ಷಿತರನ್ನು ಉದ್ಧರಿಸಿದರು. ಅವರ ಈ ವಿದ್ಯೆಗಳ ಕಲಿಕೆಯು ಮುಗಿದು, ಗುರುಗಳ ಆಶೀರ್ವಾದ ಪಡೆದು ಮುದ್ದುಸ್ವಾಮಿ ದೀಕ್ಷಿತರು ಕಾಶಿಯಿಂದ ತಮಿಳುನಾಡಿನಲ್ಲಿರುವ ತಿರುತ್ತಣಿಯ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದರು. ಅಷ್ಟೆಲ್ಲ ವಿದ್ಯೆಗಳನ್ನು ಸಂಪಾದಿಸಿದರೂ ಮುದ್ದುಸ್ವಾಮಿ ದೀಕ್ಷಿತರಿಗೆ ಗಾಯಕ – ವೈಣಿಕನಾದ ತಾನು ತಾನೇ ವಾಗ್ಗೇಯಕಾರನಾಗಿ ಶ್ರೀದೇವರನ್ನೂ ತನ್ನ ಗುರುಗಳನ್ನೂ ಸ್ತುತಿಸಲು ಸಾಧ್ಯವಾಗಿಲ್ಲವಲ್ಲ ಎಂಬ ಬೇಸರವೇ ಇತ್ತು. ತಿರುತ್ತಣಿಗೆ ಬಂದ ಅನಂತರ ಶ್ರೀ ಸುಬ್ರಹ್ಮಣ್ಯ ದೇವರ ಆರಾಧನೆಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡು ಸಂಗೀತದ ತಪಸ್ಸನ್ನು ಆಚರಿಸಲು ಆರಂಭಿಸಿದರು.

ಹೀಗೇ ಹಲವು ಕಾಲ ಕಳೆಯಿತು. ಒಂದು ಸಂಜೆ ಮುದ್ದುಸ್ವಾಮಿ ದೀಕ್ಷಿತರು ತಿರುತ್ತಣಿಯ ಸುಬ್ರಹ್ಮಣ್ಯ ದೇವರನ್ನು ಆರಾಧಿಸಿ, ಪೂಜೆ ಮಾಡಿ ದೇಗುಲದ ಮೆಟ್ಟಿಲುಗಳನ್ನು ಇಳಿದು ಬರುತ್ತಿದ್ದಾರೆ… ಅವರೆದುರು ಒಬ್ಬ ಬಹಳ ತೇಜೋವಂತನಾದ, ಕೈಯಲ್ಲಿ ಕೋಲನ್ನು ಹಿಡಿದ ವಯೋವೃದ್ಧರೊಬ್ಬರು ದೇಗುಲದ ಮೆಟ್ಟಿಲನ್ನು ಹತ್ತಿ ಬರುತ್ತಿದ್ದಾರೆ. ಆ ವಯೋವೃದ್ಧ ಇನ್ನೇನು ಆಯ ತಪ್ಪಿ ಕೆಳಗೆ ಬೀಳಬೇಕು… ಅಷ್ಟರಲ್ಲಿ ಮುದ್ದುಸ್ವಾಮಿ ದೀಕ್ಷಿತರು ಆತನನ್ನು ಆತು ಹಿಡಿದು ನಿಲ್ಲಿಸಿದರು.. ಆತನ ಕೋರಿಕೆಯಂತೆ ದೇಗುಲದ ಗರ್ಭಗುಡಿಯ ಎದುರು ತಂದು ನಿಲ್ಲಿಸಿದರು. ಆ ವೃದ್ಧರು ದೀಕ್ಷಿತರ ತಲೆಯನ್ನು ಪ್ರೀತಿಯಿಂದ ನೇವರಿಸಿ ‘ಮಗು, ಬಾಯಿ ತೆರೆಯಪ್ಪಾ! ಪ್ರಸಾದವನ್ನು ಹಾಕುತ್ತೇನೆ!’- ಎಂದರು! ಬಾಯಿ ತೆರೆದ ದೀಕ್ಷಿತರಿಗೆ ಒಂದು ಚೂರು ಕಲ್ಲುಸಕ್ಕರೆ ಹಾಕಿದ ಆ ವೃದ್ಧನು ‘ಮಗು ಇಂದಿನಿಂದ ನೀನು ವಾಗ್ಗೇಯಕಾರನಾಗು. ನಿನ್ನ ಅಂಕಿತ ಗುರುಗುಹ ಎಂದಿರಲಿ’ – ಎಂದು ಆಶೀರ್ವದಿಸಿದರು. ದೀಕ್ಷಿತರು ಆತನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಏಳುವಾಗ ಆ ವೃದ್ಧ ಮಾಯವಾಗಿದ್ದರು ! ದೀಕ್ಷಿತರು ತನ್ನನ್ನು ಆಶೀರ್ವದಿಸಿ ವರವನ್ನು ನೀಡಿದ್ದು ಶ್ರೀ ಗುಹನಾದ ಸುಬ್ರಹ್ಮಣ್ಯನೇ ಎಂದು ಅರ್ಥ ಮಾಡಿಕೊಂಡು ಆ ಕೂಡಲೇ ಮಾಯಾಮಾಳವಗೌಳ ರಾಗದಲ್ಲಿ ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ. – ಎಂಬ ಆದಿತಾಳದ ಕೃತಿಯನ್ನು ರಚಿಸಿ ಹಾಡಿ ತಿರುತ್ತಣಿಯ ಆ ಸುಬ್ರಹ್ಮಣ್ಯೇಶ್ವರ ದೇವರನ್ನು ಮನದಣಿಯೆ ಸ್ತುತಿಸಿದರು. ಅದೇ ಅವರ ಮೊದಲ ರಚನೆ. ಈ ರಚನೆಯಲ್ಲಿ ಮಾಯಾಮಾಳವಗೌಳದ ಕೆಲವು ಅಭ್ಯಾಸವರಸೆಗಳೂ ಇರುವುದನ್ನು ಸಂಗೀತಕಲಿಯುವವರು ಗಮನಿಸಿದರೆ ತಿಳಿಯುತ್ತದೆ.

ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ಮುದ್ದುಸ್ವಾಮಿ ದೀಕ್ಷಿತರು ಮಹಾಮಹಿಮರು. ಒಮ್ಮೆ ಅವರು ತಮ್ಮ ಕುಟುಂಬದೊಂದಿಗೆ ಯಾತ್ರೆಯೊಂದನ್ನು ಮುಗಿಸಿ, ತಮ್ಮ ಕಿರಿಯ ಸಹೋದರ ಬಾಲುಸ್ವಾಮಿ ದೀಕ್ಷಿತರ ವಿವಾಹಕ್ಕೆಂದು ಮಧುರೆಯಿಂದ ಹೊರಟು ಎಟ್ಟೆಯಾಪುರಕ್ಕೆ ಬರುವ ದಾರಿಯಲ್ಲಿ ಹೃದಯ ವಿದ್ರಾವಕವಾದ ಅನೇಕ ದೃಶ್ಯಗಳನ್ನು ಅವರು ದಾರಿಯಲ್ಲಿ ನೋಡಬೇಕಾಯಿತು. ಅನೇಕ ಹಳ್ಳಿಗಳಲ್ಲಿ ಮಳೆಯೇ ಬಾರದೆ ಅಧಿಕವಾದ ಕ್ಷಾಮವು ಬಂದೊದಗಿ ಆ ಹಳ್ಳಿಹಳ್ಳಿಗಳಲೆಲ್ಲ ಜನರಿಗೂ ಜಾನುವಾರುಗಳಿಗೂ ಆಹಾರವಿಲ್ಲದೆ, ಕುಡಿಯಲೂ ಸಹ ನೀರಿಲ್ಲದೆ ಹಾಹಾಕಾರ ಉಂಟಾದ್ದನ್ನು ನೋಡಿ ಅವರ ಮನಸ್ಸು ಪರಿತಪಿಸಿಹೋಯಿತು. ಶ್ರೀವಿದ್ಯಾ ದೀಕ್ಷಿತರಾದ ಮುದ್ದುಸ್ವಾಮಿ ದೀಕ್ಷಿತರು ಭಗವತಿಯಾದ ಶ್ರೀಲಲಿತೆಯನ್ನು ಭಕ್ತಿಯಿಂದ ಧ್ಯಾನಿಸಿ, ಪೂಜಿಸಿ, ಏಕಾಗ್ರಚಿತ್ತರಾಗಿ ಅಮೃತವರ್ಷಿಣಿರಾಗದಲ್ಲಿ ಆಶುವಾಗಿ ಆನಂದಾಮೃತಾಕರ್ಷಿಣೀ ಅಮೃತವರ್ಷಿಣೀ- ಎಂಬ ಕೃತಿಯನ್ನು ರಚಿಸಿ ಸಲಿಲಂ ವರ್ಷಯ ವರ್ಷಯ ವರ್ಷಯ – ಎಂದು ಪ್ರಾರ್ಥಿಸುತ್ತ ಹಾಡಿದರು. ಆ ಕೂಡಲೇ ಎಂದೂ ಕಾಣದಂತೆ ನಿಮಿಷಾರ್ಧದಲ್ಲಿ ಮೋಡಗಳೆಲ್ಲ ದಟ್ಟವಾಗಿ ಸಂದಣಿಸಿ, ಗುಡುಗು ಮಿಂಚುಗಳ ಆರ್ಭಟಗಳೊಂದಿಗೆ ಧಾರಾಕಾರವಾಗಿ ಮಳೆ ಸುರಿಯಲು ಆರಂಭಿಸಿತು. ಎಲ್ಲ ಸರೋವರಗಳೂ ಬಾವಿಗಳೂ, ಕೆರೆ – ಕುಂಟೆಗಳೂ ತುಂಬಿ ಹರಿದು. ಯಥೇಚ್ಛವಾಗಿ ಭೂಮಿಯಲ್ಲಿ ನೀರು ಸಂಗ್ರಹವಾಯಿತು. ಒಂದು ವಾರದ ಕಾಲ ಎಡೆಬಿಡದೆ ಸುರಿದ ವರ್ಷಧಾರೆಯನ್ನು ನಿಲ್ಲಿಸಲು ಶ್ರೀ ಮುದ್ದುಸ್ವಾಮಿ ದೀಕ್ಷಿತರೇ ಅದೇ ಕೀರ್ತನೆಯನ್ನು ಹಾಡುತ್ತ ಸಲಿಲಂ ಸ್ತಂಭಯ ಸ್ತಂಭಯ – ಎಂದು ಹಾಡಿ ಮಳೆಯನ್ನು ನಿಲ್ಲಿಸಬೇಕಾಯಿತು! ಸಂಗೀತದ ಸಿದ್ಧಿಗೆ ನಿಜಕ್ಕೂ ಇಷ್ಟು ಶಕ್ತಿಯಿದೆ.. ಸಂಗೀತವು ಹೀಗೆ, ಈ ರೀತಿಯಾಗಿ ಸಿದ್ಧಿಸಲು ನಿಜವಾದ ಭಕ್ತಿ, ಮನಃಶಕ್ತಿ, ತ್ಯಾಗ, ತಪಸ್ಸಿನಂತಹ ಸಾಧನೆ, ನಿರಹಂಕಾರ, ನಿಸ್ವಾರ್ಥ ಇತ್ಯಾದಿ ಎಲ್ಲವೂ ಇರಬೇಕು.

ಮುದ್ದುಸ್ವಾಮಿ ದೀಕ್ಷಿತರು ತಮ್ಮ ವಿದ್ಯಾಪಾಂಡಿತ್ಯ ಪ್ರತಿಭೆಗಳನ್ನು ಭಗವದಾರಾಧನೆಗೆ ಮೀಸಲಿಟ್ಟಿದ್ದವರು. ಸಂಸಾರ ನಿರ್ವಹಣೆಯಲ್ಲಿ ಏನೇ ತೊಡಕು ತೊಂದರೆಗಳು ಬಂದರೂ ಧನಸಂಪಾದನೆಗಾಗಿ ತಮ್ಮ ವಿದ್ಯೆಯನ್ನು ಬಳಸಿಕೊಂಡವರಲ್ಲ; ಅದಕ್ಕಾಗಿ ದೀಕ್ಷಿತರು ನರಸ್ತುತಿ ಮಾಡಿದವರೂ ಅಲ್ಲ. ಒಮ್ಮೆ ಶರಭೋಜಿ ಮಹಾರಾಜರು ತಮ್ಮ ಆಸ್ಥಾನ ವಿದ್ವಾಂಸಪದವಿಯನ್ನಲಂಕರಿಸಬೇಕೆಂದು ವಿನಯದಿಂದ ಬಿನ್ನವಿಸಲು, ಮಹಾರಾಜರ ಪ್ರಾರ್ಥನೆಯನ್ನುಲ್ಲಂಘಿಸಿ, ದೀಕ್ಷಿತರು ಲಲಿತರಾಗದಲ್ಲಿ, ‘ಹಿರಣ್ಮಯೀಂ ಲಕ್ಷ್ಮೀಂ ಭಜಾಮಿ-ಹೀನ-ಮಾನವಾಶ್ರಯಂ ತ್ಯಜಾಮಿ’ ಎಂದು ಹಾಡಿದರು. ಹೀಗೆಯೇ ತ್ಯಾಗರಾಜರೂ ಮಹಾರಾಜನಾಗಿದ್ದ ಶರಭೋಜಿಯ ಆಹ್ವಾನವನ್ನು, ಧನಕನಕಾದಿಗಳನ್ನೂ ತಿರಸ್ಕರಿಸಿ, ತಾನು ಶ್ರೀರಾಮನ ಸೇವಕನೆಂದೂ ಹೇಳಿ “ನಿಧಿ ಚಾಲ ಸುಖಮಾ, ರಾಮುನಿ ಸನ್ನಿಧಿ ಸೇವ ಸುಖಮಾ?” ಎಂದು ಹಾಡಿದ್ದನ್ನು ನೆನಪಿಸಿಕೊಳ್ಳಬಹುದು. ಅಂದಿನ ಕಾಲದಲ್ಲಿ ವಿದ್ಯೆಗೂ ಭಗವದ್ಭಕ್ತಿಗೂ ಗೌರವ ಬೆಲೆಗಳು ಇದ್ದವೋ ಹೊರತು ಧನಕನಕಾದಿಗಳಿಗೆ ಅಲ್ಲ ಎಂದು ತಿಳಿಯುತ್ತದಲ್ಲವೇ?

ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ಮುದ್ದುಸ್ವಾಮಿ ದೀಕ್ಷಿತರ ಶಿಷ್ಯರಲ್ಲೊಬ್ಬಳಾದ ಕಮಲಂ ಎಂಬಾಕೆ ಪ್ರಸಿದ್ಧ ನರ್ತಕಿಯಾಗಿದ್ದಳು. ಒಮ್ಮೆ ಮುದ್ದುಸ್ವಾಮಿ ದೀಕ್ಷಿತರ ಗೃಹದಲ್ಲಿ ನೆರವೇರಲೇ ಬೇಕಾದ ದೈವಿಕವಾದ ಧಾರ್ಮಿಕ ಕಟ್ಟಳೆಯೊಂದರ ಅಣಿಗಾಗಿ /ತಯಾರಿಗಾಗಿ ಯಾವ ಪ್ರಯತ್ನವನ್ನೂ ದೀಕ್ಷಿತರು ಕೈಗೊಳ್ಳದಿರುವುದನ್ನು ಕಂಡು, ಆ ನರ್ತಕಿ ಶಿಷ್ಯಳು ತನ್ನ ಗುರುಗಳಿಗೆ ಆರ್ಥಿಕ ಸಂಕಷ್ಟವು ಒದಗಿಬಂದದ್ದರಿಂದ ಆ ಕೈಂಕರ್ಯಕ್ಕೆ ತಯಾರಿ ಮಾಡಿಲ್ಲವೆಂದುತ ಭಾವಿಸಿ ತನ್ನ ಗುರುಗಳ ಮನೆಯ ಧಾರ್ಮಿಕ ಕಾರ್ಯಕ್ರಮವು ಸಾಂಗವಾಗಿ ನಡೆಸಲೋಸುಗ ತನ್ನ ಆಭರಣಗಳನ್ನೇ ಮಾರಿ ತಾನು ಹಣವನ್ನು ಒದಗಿಸಲು ಸಿದ್ಧಳೆಂದೂ ದಯಮಾಡಿ ಹಣ ಸ್ವೀಕರಿಸಬೇಕೆಂದೂ ಗುರುಗಳನ್ನು ಪ್ರಾರ್ಥಿಸಿದಳು. ಗುರುಗಳೇನೋ ಶಿಷ್ಯಳ ಭಕ್ತಿಗೆ ಬಹಳ ಮೆಚ್ಚಿದರು. ಆದರೆ, ಆಕೆಯ ಸಹಾಯವನ್ನು ನಿರಾಕರಿಸಿದರು. ತಮ್ಮ ಊರಿನ ಭಗವಂತನಾದ ತಿರುವಾರೂರಿನ ಶ್ರೀ ತ್ಯಾಗರಾಜಸ್ವಾಮಿಯು ತಮಗೆ ಸಕಲಸಂಪತ್ತು ನೀಡುವ ಮಹಾದೈವವೆಂದೂ, ಆ ಭಗವಂತನೇ ತನ್ನ ಕೈಂಕರ್ಯಕ್ಕೆ ಸಹಾಯ ಮಾಡುತ್ತಾನೆಂದೂ ತಮ್ಮ ದೃಢನಂಬಿಕೆಯನ್ನು ಆಕೆಗೆ ತಿಳಿಸಿ, ಎರುಕಲಕಾಂಭೋಜಿ ರಾಗದಲ್ಲಿ ‘ಶ್ರೀ ತ್ಯಾಗರಾಜಂ ಭಜರೇ-ಚಿತ್ತ ತಾಪತ್ರಯಂ ತ್ಯಜರೇ’ ಎಂಬ ಕೃತಿ ರಚಿಸಿ ಹಾಡಿ ಆ ದೇವರ ದೇವನನ್ನು ಸ್ತುತಿಸಿದರು. ದೀಕ್ಷಿತರ ದೃಢನಂಬಿಕೆಗೆ ತಕ್ಕಂತೆ, ಒಂದು ಅಪೂರ್ವ ಘಟನೆ ನಡೆಯಿತು! ಆ ಊರಿಗೆ ಮಹಾರಾಜರ ಆಗಮನವಾಗುವ ನಿರೀಕ್ಷೆಯಿದ್ದದ್ದರಿಂದ ಅದರ ಏರ್ಪಾಟಿಗಾಗಿ ದವಸಧಾನ್ಯ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು. ಆದರೆ ಕಾರಣಾಂತರಗಳಿಂದ ಮಹಾರಾಜನು ಬರಲು ಸಾಧ್ಯವಾಗದೇ ಹೋದ್ದರಿಂದ ವ್ಯವಸ್ಥಾಪಕನಾದ ಛತ್ರದ ಅಧಿಕಾರಿಯು ಇನ್ನು ಸಂಗ್ರಹಿಸಿಟ್ಟರೆ ಆ ದವಸಧಾನ್ಯಗಳು ಹಾಳಾಗುತ್ತದೆಂದು, ಅವನ್ನು ಬಂಡಿಗಳಲ್ಲಿ ತುಂಬಿ, ಗುರುಗಳಾದ ದೀಕ್ಷಿತರ ಮನೆಗೆ ಕಳುಹಿಸಿಬಿಟ್ಟನು. ಇದರಿಂದಾಗಿ ಮುದ್ದುಸ್ವಾಮಿ ದೀಕ್ಷಿತರ ಮನೆಯಲ್ಲಿ ನಡೆಯಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮಗಳು, ಅನ್ನಸಂತರ್ಪಣೆ ಮುಂತಾದವು ಸಾಂಗೋಪಾಂಗವಾಗಿ ನಡೆದವು. ದೀಕ್ಷಿತರ ದೃಢ ದೈವಭಕ್ತಿಗೆ ಇದಕ್ಕಿಂತ ಬೇರೆ ಸಾಕ್ಷಿಯೇ ಬೇಡ.

ಮತ್ತೊಮ್ಮೆ, ವೈದ್ಯಲಿಂಗ ಮೊದಲಿಯಾರ್ ಎಂಬ ಜಮೀನ್ದಾರರೊಬ್ಬರು ಧನಧಾನ್ಯಾದಿ ಅಮೂಲ್ಯವಸ್ತುಗಳನ್ನು ದೀಕ್ಷಿತರಿಗೆ ಅರ್ಪಿಸಿ, ತಮ್ಮ ಮೇಲೆ ಕೃತಿರಚನೆ ಮಾಡಬೇಕೆಂದು ಪರಿಪರಿಯಾಗಿ ಬೇಡಿಕೊಂಡರು. ಆದರೆ ಮುದ್ದುಸ್ವಾಮಿ ದೀಕ್ಷಿತರು ಅದಕ್ಕೆ ಒಪ್ಪದೆ ‘ಕೆರೆಯ ನೀರನು ಕೆರೆಗೆ ಚೆಲ್ಲಿ’- ವರ ಪಡೆಯುವಂತೆ, ದೈವದತ್ತವಾದ, ದೇವರಿಗಾಗಿಯೇ ಮೀಸಲಿಟ್ಟ ತಮ್ಮ ವಿದ್ಯಾಪಾಂಡಿತ್ಯವು ಭಗವಂತನ ಸ್ತೋತ್ರಕ್ಕೆ ಮಾತ್ರ ಮೀಸಲೆಂದೂ ನರಸ್ತುತಿಗೆ ಆ ಗಾನವಿದ್ಯೆಯು ಸಲ್ಲವೇ ಸಲ್ಲದೆಂದೂ ಹೇಳಿಬಿಟ್ಟರು. ಆಗ ಆ ಜಮೀನುದಾರನು ತನ್ನ ಗ್ರಹಗತಿಗಳು ಸರಿಯಿಲ್ಲವೆಂದೂ ಆತನ ಗ್ರಹಚಾರದೋಷಗಳು ಪರಿಹಾರವಾಗಲು ಜ್ಯೋತಿಷ ರೀತ್ಯಾ ಏನಾದರೂ ಉಪಾಯ ಹೇಳಬೇಕೆಂದು ಪ್ರಾರ್ಥಿಸಿದರು. ಆಗ ದೀಕ್ಷಿತರು ಆತನ ಕ್ಷೇಮಾಭ್ಯುದಯವನ್ನು ಕೋರಿ, ‘ಶ್ರೀ ವಿಶ್ವನಾಥಂ ಭಜೇಹಂ’ ಎಂಬ ಈಶ್ವರದೈವಸ್ತುತಿಯಾಗಿ 14 ರಾಗಗಳಲ್ಲಿ ರಾಗಮಾಲಿಕೆಯ ಕೃತಿಯನ್ನು ರಚಿಸಿ ಹಾಡಿದರು. ಇದರಿಂದಾಗಿ ವೈದ್ಯಲಿಂಗ ಮೊದಲಿಯಾರರ ಗ್ರಹಚಾರಗಳು ಪರಿಹಾರವಾಗಿ ಸೌಖ್ಯವಾಯಿತು.

ದೀಕ್ಷಿತರು ತೀರ್ಥಯಾತ್ರೆಯನ್ನು ಮಾಡುತ್ತ ಮಾಡುತ್ತ ಕಿವಲೂರು ಎಂಬ ಗ್ರಾಮಕ್ಕೆ ಬಂದರು. ಅಲ್ಲಿ ಒಂದು ದಿನ ಸಂಜೆ, ಆಲಯದಲಿದ್ದ ಈಶ್ವರನನ್ನು ಸಂಗೀತದಿಂದ ಸೇವಿಸುವ ಇಚ್ಛೆ ತಮಗಿರುವುದಾಗಿ ಅಲ್ಲಿನ ಶಿವದೇವಾಲಯದ ಅರ್ಚಕರಿಗೆ ತಿಳಿಸಿದರು. ಅರ್ಚಕರು ಸಾಮಾನ್ಯರು ಅವರಿಗೆ ಮುದ್ದುಸ್ವಾಮಿ ದೀಕ್ಷಿತರ ಬಗ್ಗೆಯಾಗಲಿ, ಸಂಗೀತದ ಬಗ್ಗೆಯಾಗಲಿ ತಿಳಿಯದು. ಆತ ಈಗ ಸಂಜೆಯ ಪೂಜೆಯಾಗಿ, ತಾನು ಮನೆಗೆ ಹೋಗುತ್ತಿರುವುದಾಗಿಯೂ, ಗರ್ಭಗುಡಿಯ ಬಾಗಿಲಿಗೆ ಬೀಗಮುದ್ರೆಯಾಗಿರುವ ಕಾರಣದಿಂದಲೂ ಅಂದು ಸೇವೆಗೆ ಅವಕಾಶವಿಲ್ಲವೆಂದೂ ಮಾರನೇ ದಿನ ಸೇವೆ ನಡೆಸಬಹುದೆಂದೂ ಅರ್ಚಕರು ದೀಕ್ಷಿತರಿಗೆ ಹೇಳಿಬಿಟ್ಟರು. ಇದರಿಂದ ಮನ ನೊಂದ ದೀಕ್ಷಿತರು ಬೀಗಮುದ್ರೆಯಾದ ದೇವರ ಆ ಗರ್ಭಗುಡಿಯ ಮುಂದೆ ನಿಂತು, ಕಣ್ಮುಚ್ಚಿ, ಅನನ್ಯ ಭಕ್ತಿಯಿಂದ ಈಶ್ವರನನ್ನು ಧ್ಯಾನಿಸಿ, ‘ಅಕ್ಷಯಲಿಂಗ ವಿಭೋ, ಸ್ವಯಂಭೋ’ ಎಂಬ ಶಂಕರಾಭರಣ ರಾಗದ ಕೃತಿಯನ್ನು ರಚಿಸಿ ಹಾಡುತ್ತಾ ನಿಂತರು. ಒಡನೆಯೇ ಗರ್ಭಗುಡಿಯ ಬಾಗಿಲು ಸಿಡಿಲಿನಂತೆ ಶಬ್ದ ಮಾಡಿ ತೆರೆದು ನಿಂತು, ತೇಜೋರಾಶಿಯಿಂದ ಕಂಗೊಳಿಸುವ ದಿವ್ಯ ಮಂಗಳ ಮೂರ್ತಿಯ ರೂಪದಲ್ಲಿ ಭಗವಂತನು ದರ್ಶನವನ್ನಿತ್ತನು. ಲಿಂಗಮೂರ್ತಿಯಾದ ಆ ಶಿವನನ್ನು ದೀಕ್ಷಿತರು ವೀಕ್ಷಿಸುತ್ತಾ ಪುಲಕಾಂಕಿತರಾಗಿ ಸ್ವಾಮಿಯನ್ನು ಬಗೆ ಬಗೆಯಾಗಿ ರಾಗಮಾಲಿಕೆಗಳಿಂದ ಸ್ತೋತ್ರ ಮಾಡಿ ಅರ್ಚಿಸಿದರು. ಈ ಅದ್ಭುತ ವಿಚಾರ ತಿಳಿದು ಅರ್ಚಕರು ಶರಣಾಗತರಾದರು. ದೀಕ್ಷಿತರ ದಿವ್ಯ ಚರಿತ್ರೆಯಲ್ಲಿ ಅವರ ಅಪಾರ ದೈವಭಕ್ತಿಯನ್ನೂ ನಾದೋಪಾಸನ ಶಕ್ತಿಯನ್ನೂ ತಿಳಿಸುವ ಸಂಗತಿಗಳು ಅನೇಕವು ಇವೆ.

ರಾಮಸ್ವಾಮಿ ದೀಕ್ಷಿತರು ವೇದ, ಸಂಸ್ಕೃತ, ಅಲಂಕಾರಶಾಸ್ತ್ರ, ಕಾವ್ಯ, ಸಂಗೀತ ಮುಂತಾದ ಎಲ್ಲ ವಿದ್ಯೆಗಳಲ್ಲಿಯೂ ಮಹಾವಿದ್ವಾಂಸರು. ಅವರು ಶ್ರೀವೆಂಕಟಮಖಿಯ ಪರಂಪರೆಯವರು. ಅವರ ಪತ್ನಿ ಸುಬ್ಬಮ್ಮಂಬಾರವರು ಪರಮಸಾಧ್ವಿಯೂ ಪತಿವ್ರತೆಯೂ, ಮಹಾದೈವಭಕ್ತೆಯೂ ಆಗಿದ್ದರು. ಬಹಳ ವಯಸ್ಸಾಗುತ್ತ ಬಂದಿದ್ದರೂ ಈ ದಂಪತಿಗಳಿಗೆ ಸಂತಾನಭಾಗ್ಯವಿರಲಿಲ್ಲ. ಇದರಿಂದಾಗಿ ಅವರುಗಳು ಬಹಳ ನೊಂದಿದ್ದರು. ಒಬ್ಬ ಸಂನ್ಯಾಸಿಯ ಆಶೀರ್ವಾದ ಹಾಗೂ ಸಲಹೆಯಂತೆ ಈ ದಂಪತಿಗಳು ತಿರುವಾರೂರಿನ ಶ್ರೀ ವೈದ್ಯೇಶ್ವರನ ಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಮುದ್ದುಕುಮಾರಸ್ವಾಮಿಯನ್ನು ಮೊರೆ ಹೋಗಿ ಸಂನ್ಯಾಸಿಯು ಅನುಜ್ಞೆ ಮಾಡಿದಷ್ಟು ಕಾಲ ವ್ರತದಲ್ಲಿದ್ದು, ಭಗವಂತನನ್ನು ಆರಾಧಿಸಿ, ಅರ್ಚಿಸಿ, ಸಂಗೀತ ಸೇವೆಗಳನ್ನು ಮಾಡುತ್ತ ಪೂಜಿಸಿದರು. ಅವರ ತಪಸ್ಸಿನಂತಹ ವ್ರತವನ್ನು ಕಂಡು ಶ್ರೀ ಮುದ್ದುಕುಮಾರಸ್ವಾಮಿಯು ಆ ದಂಪತಿಗೆ ಸಂತಾನಭಾಗ್ಯವನ್ನು ಕರುಣಿಸಿದನು. ಹೀಗೆ ಮುದ್ದುಕುಮಾರಸ್ವಾಮಿಯ ಅನುಗ್ರಹದಿಂದ ಹುಟ್ಟಿದ ಮಗನಿಗೆ ಆ ದಂಪತಿಗಳು ಮುದ್ದುಸ್ವಾಮಿ ಎಂದು ನಾಮಕರಣ ಮಾಡಿ ಆ ಮಗುವಿನ ತೇಜಸ್ಸನ್ನು ನೋಡುತ್ತ ಆನಂದದಿಂದ ಇದ್ದರು. ಸ್ವಲ್ಪ ಕಾಲ ಕಳೆಯಿತು. ರಾಮಸ್ವಾಮಿ ದೀಕ್ಷಿತರಿಗೂ ಸುಬ್ಬಮ್ಮಾಂಬಾರವರಿಗೂ ಏಕಕಾಲದಲ್ಲೇ ಒಂದು ಕನಸು ಕಂಡು, ಅದರಲ್ಲಿ ತಮ್ಮ ಕುಲದೈವವಾದ ಬಾಲಾಂಬಿಕೆಯು ಅವರಿಗೆ ತನ್ನ ಮುತ್ತಿನಹಾರವನ್ನು ಪ್ರಸಾದವಾಗಿ ನೀಡಿದಂತಾಯಿತು. ಇಬ್ಬರಿಗೂ ಏಕಕಾಲದಲ್ಲಿಯೇ ಎಚ್ಚರವಾಗಿ ತಮ್ಮಿಬ್ಬರಿಗೂ ಬಿದ್ದ ಕನಸನ್ನು ನೆನೆಸಿ ಆಶ್ಚರ್ಯವಾಗಿ ಭಗವತಿಯಾದ ಬಾಲಾಂಬಿಕೆಯನ್ನು ಮನಸಾರೆ ಸ್ತುತಿಸಿದರು. ಆಕೆಯ ಅನುಗ್ರಹದಿಂದಾಗಿ ಮುಂದೆ ಮುದ್ದುಸ್ವಾಮಿ ದೀಕ್ಷಿತರು ಶ್ರೀವಿದ್ಯಾ ದೀಕ್ಷಿತರಾದರು.

ಹೀಗೆ ಬಾಲಾಂಬಿಕೆಯು ನೀಡಿದ ಮುತ್ತಿನಹಾರದ ಸಂಕೇತವಾಗಿ ಮಗುವನ್ನು ಮುತ್ತು ಎಂದು ಕರೆದು, ಅದೇ ರೂಢಿಯಾಗಿ ಕೆಲವರು ಮುತ್ತುಸ್ವಾಮಿ ದೀಕ್ಷಿತರು ಎಂದು ಹೇಳುವ ರೂಢಿ ಆಯಿತು ಎಂದು ಒಂದು ಪ್ರತೀತಿಯೂ ಇದೆ. ತಮಿಳುಭಾಷೆಯಲ್ಲಿ ತ-ದ ಅಕ್ಷರಗಳು ಒಂದೇ ರೀತಿಯಲ್ಲಿ ಉಚ್ಚಾರವಾಗುವುದರಿಂದಲೂ ಮುದ್ದುಸ್ವಾಮಿ ಎಂಬುದು ಮುತ್ತುಸ್ವಾಮಿ ಎಂದು ರೂಢಿಯಾಗಿದ್ದರೂ ಆಶ್ಚರ್ಯವಿಲ್ಲ ಎಂದು ಕೆಲವರ ಅಂಬೋಣ. ಆದರೆ ಆ ದೇವರುಗಳ ಅನುಗ್ರಹದಿಂದ ಮುದ್ದುಸ್ವಾಮಿ ದೀಕ್ಷಿತರು ಮಹಾಮಹಿಮರಾಗಿ, ಸಂಗೀತಲೋಕದ ಭಾಗ್ಯವಾಗಿ ಪರಿಣಮಿಸಿದ್ದಂತೂ ಸತ್ಯ. ಅಲ್ಲವೇ?

ಮುದ್ದುಸ್ವಾಮಿ ದೀಕ್ಷಿತರು ಜ್ಯೋತಿಷವನ್ನು ಬಹಳ ಚೆನ್ನಾಗಿ ಬಲ್ಲವರಾಗಿದ್ದರಲ್ಲವೇ? ಅವರಿಗೆ ತಾವು ತಮ್ಮ ದೇಹವನ್ನು ಬಿಡುವ ಸಮಯವೂ ತಿಳಿದಿತ್ತು. ಒಮ್ಮೆ ಏನಾಯಿತೆಂದರೆ, ಮುದ್ದುಸ್ವಾಮಿ ದೀಕ್ಷಿತರ ಶಿಷ್ಯನಾದ ತಂಬಿಯಪ್ಪನ್ ಎಂಬುವವನು ವಿಪರೀತವಾಗಿ ಸಹಿಸಲಾಗದ ನೋವಿನಿಂದ ಕೂಡಿದ ಹೊಟ್ಟೆಯ ಕಾಯಿಲೆಯಿಂದ ನರಳುತ್ತಿದ್ದನು. ತಂಬಿಯಪ್ಪನಿಗೆ ಈ ನೋವನ್ನು ಸಹಿಸುವ ಬದಲು ತನಗೆ ಮರಣವಾದರೂ ಬರಬಾರದೆ? ಎಂದು ದೇವರನ್ನು ಪ್ರಾರ್ಥಿಸುತ್ತಿದ್ದ. ಎಷ್ಟು ಹರಿಕೆಗಳನ್ನು ಹೊತ್ತರೂ ಪೂಜೆಗಳನ್ನು ಮಾಡಿದರೂ, ಎಂತೆಂತಹ ಉತ್ತಮ ಪಂಡಿತರಲ್ಲಿ ಔಷಧೋಪಚಾರಗಳನ್ನು, ಪಥ್ಯಗಳನ್ನು ಮಾಡಿದರೂ ಆತನ ಹೊಟ್ಟೆಬಾಧೆಯನ್ನು ಯಾರಿಂದಲೂ ಗುಣಪಡಿಸಲು ಸಾಧ್ಯವೇ ಆಗಲಿಲ್ಲ. ಈ ಸಮಯದಲ್ಲಿ ಆತ ದೀಕ್ಷಿತರ ಬಳಿ ಇರಲಿಲ್ಲ. ಆತನ ಊರಿಗೆ ಹೋಗಿದ್ದನು. ಅನೇಕ ದಿನಗಳು ಕಳೆದರೂ ಈ ತಂಬಿಯಪ್ಪನು ಬರಲೇ ಇಲ್ಲವಲ್ಲ! ಹಾಗೆಲ್ಲ ಆತನು ತಪ್ಪಿಸುವವನಲ್ಲವಲ್ಲ! ಏನೋ ದೊಡ್ಡ ಕಾರಣವೇ ಇರಬೇಕು, ಎಂದು ಚಿಂತಿತರಾಗಿ ಮುದ್ದುಸ್ವಾಮಿ ದೀಕ್ಷಿತರು ಉಳಿದ ಶಿಷ್ಯರಲ್ಲಿ ವಿಚಾರಿಸಿದಾಗ ತಂಬಿಯಪ್ಪನು ಹೊಟ್ಟೆಯ ಕಾಯಿಲೆಯಿಂದ ವಿಪರೀತ ನರಳುತ್ತಿರುವ ವಿಷಯವು ಅವರಿಗೆ ತಿಳಿಯಿತು. ಆ ಕೂಡಲೇ ಮುದ್ದುಸ್ವಾಮಿ ದೀಕ್ಷಿತರು ಒಬ್ಬ ಶಿಷ್ಯನನ್ನು ಕರೆದು ತಂಬಿಯಪ್ಪನು ಇದ್ದಲ್ಲಿಗೆ ಕಳುಹಿಸಿ ಆತನ ಜಾತಕವನ್ನು ತರಿಸಿದರು. ಕೂಲಂಕಷವಾಗಿ ಆತನ ಜಾತಕವನ್ನು ಪರಿಶೀಲಿಸಿದಾಗ ಗುರು ಗ್ರಹವು ಪ್ರತಿಕೂಲ ಸ್ಥಿತಿಯಲ್ಲಿದೆಯೆಂದೂ ಈ ಗುರುಗ್ರಹ ದೇವತೆಯಾದ ಬೃಹಸ್ಪತಿಯನ್ನು ಸ್ತುತಿಸುವ ಮೂಲಕ ಮಾತ್ರ ಅವನ ವರ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಅವರು ತಿಳಿದು ಗುರುಗ್ರಹ ಸ್ತುತಿಯಾದ “ಬೃಹಸ್ಪತೇ ತಾರಾಧಿಪತೇ” – ಎಂಬ ಕೃತಿಯನ್ನು ಆ ಕೂಡಲೇ ರಚಿಸಿ, ತಮ್ಮ ಶಿಷ್ಯರಿಗೆ ಅದನ್ನು ಕೂಡಲೇ ಪಾಠ ಮಾಡಿ, ಅವರಲ್ಲಿ ಇಬ್ಬರು ತಂಬಿಯಪ್ಪನ್ ಇದ್ದಲ್ಲಿಗೇ ಹೋಗಿ ಆತನಿಗೆ ಕೇಳುವಂತೆ ಆತನು ಮಲಗಿದ್ದಲ್ಲಿಯೇ ಹಾಡಿ ಕೇಳಿಸಬೇಕೆಂದೂ, ಆತನು ಸ್ವಲ್ಪ ಚೇತರಿಸಿಕೊಂಡ ಕೂಡಲೇ ಆತನೇ ಹಾಡುವಂತೆ ಮಾಡಬೇಕೆಂದೂ ಆಜ್ಞಾಪಿಸಿದರು. ತಮ್ಮ ಗುರುಗಳ ಆಜ್ಞೆಯಂತೆಯೇ ಅತಿಶೀಘ್ರವಾಗಿ ಒಂದೆರಡು ದಿನಗಳಲ್ಲಿಯೇ ಆ ಗುರುಗ್ರಹದ ಕೀರ್ತನೆಯನ್ನು ಕಲಿತು ಪಕ್ಕದೂರಿನಲ್ಲಿದ್ದ ತಂಬಿಯಪ್ಪನ್ ಬಳಿಗೆ ಆ ಶಿಷ್ಯರುಗಳು ಹೋಗಿ ದಿನಕ್ಕೆ ಮೂರು ಬಾರಿ ಸ್ನಾನ ಆಚಮನಾದಿಗಳನ್ನು ಮಾಡಿ ಶುದ್ಧರಾಗಿ ಕುಳಿತು ಭಕ್ತಿಯಿಂದ ಅಠಾಣ ರಾಗದಲ್ಲಿ ತಮ್ಮ ಗುರುಗಳು ರಚಿಸಿದ್ದ “ಬೃಹಸ್ಪತೇ ತಾರಾಧಿಪತೇ” ಕೃತಿಯನ್ನು ಹಾಡಲಾರಂಭಿಸಿದರು. ಈ ಕೃತಿಯನ್ನು ಹಾಡಿದ್ದನ್ನು ಒಂದೊಂದು ಬಾರಿ ಕೇಳುವಾಗಲೂ ತಂಬಿಯಪ್ಪನಿಗೆ ನೋವು ಕಡಿಮೆ ಕಡಿಮೆಯಾಗುತ್ತಾ ಬಂದಿತು. ನಾಲೈದು ದಿನಗಳಲ್ಲೇ ಎಷ್ಟೋ ಆರೋಗ್ಯವಂತನಾಗಿ, ನೋವಿಲ್ಲದೆ, ಆರೋಗ್ಯವು ಉತ್ತಮವಾಗಿದ್ದರಿಂದ ತಾನೇ ಆ ಕೃತಿಯನ್ನು ಕಲಿತು ಆರಾಮವಾಗಿ ಹಾಡುತ್ತ ಹಾಡುತ್ತ ಸಂಪೂರ್ಣ ಆರೋಗ್ಯವಂತನಾದನು.

ಈ ರೀತಿಯಾಗಿ ತನ್ನ ಈ ಶಿಷ್ಯನು ಗುಣವಾದದ್ದನ್ನು ಕಂಡು ಈತನು ಮಾತ್ರವಲ್ಲದೆ ಯಾರೇ ಜನಸಾಮಾನ್ಯರೇ ಆಗಲಿ, ಅವರೂ ಸಹ ಗ್ರಹಚಾರಾದಿ ದೋಷಗಳಿಂದ ಸುಲಭವಾಗಿ ಪಾರಾಗುವಂತೆ ಮಾಡಬೇಕು, ಹಾಡಲು ಬರದ್ದವರಿಗೆ ಸಹ ಆ ರಚನೆಗಳನ್ನು ಕೇಳಿದರೂ ಸಹ ಆಯಾ ಗ್ರಹಗಳ ಬಾಧೆಯು ಕಡಿಮೆಯಾಗುವಂತೆ ಮಾಡಬೇಕೆಂಬ ಉದ್ದೇಶದಿಂದ ದೀಕ್ಷಿತರು ಆ ಕೂಡಲೇ ಜ್ಯೋತಿಷ ರೀತ್ಯಾ ಎಲ್ಲ ಲಕ್ಷಣಗಳನ್ನು ಒಳಗೊಂಡಂತೆ ಉಳಿದೆಲ್ಲ ಗ್ರಹಗಳ ಸ್ತುತಿಗಳನ್ನೂ ರಚಿಸಿದರು. ಇದರಿಂದಾಗಿ ಲೋಕದ ಅನೇಕರು ಉಪಕೃತರಾದರು.

ದೀಕ್ಷಿತರು ಹೀಗೆ ಜ್ಯೋತಿಷದಲ್ಲಿ ಮಹಾವಿದ್ವಾಂಸರಾಗಿದ್ದುದರಿಂದ ಅವರ ಮರಣದ ಕಾಲವೂ ಅವರಿಗೆ ತಿಳಿದಿದ್ದರಿಂದ ತನಗೆ ದೇಹದಲ್ಲಿ ಶಕ್ತಿಯು ಉಡುಗುವ ಮುನ್ನವೇ ತೀರ್ಥಯಾತ್ರೆಯನ್ನು ಮಾಡಬೇಕೆಂದು ನಿರ್ಧರಿಸಿ, ಅದರಂತೆಯೇ ಅವರು ಭಾರತವಿಡೀ ಅನೇಕ ಕ್ಷೇತ್ರಗಳಿಗೆ ಯಾತ್ರೆಗಳನ್ನು ಕೈಗೊಂಡು ಆಯಾ ಕ್ಷೇತ್ರಗಳ ದೇವರನ್ನು ದರ್ಶನ ಮಾಡಿ ಆಯಾ ದೇವರುಗಳನ್ನು ಕುರಿತಾಗಿ ಕೃತಿಗಳನ್ನು ರಚಿಸಿ ಮನದಣಿಯೆ ಹಾಡಿ ಸ್ತುತಿಸಿದರು. ಯಾತ್ರೆಯನ್ನು ಮುಗಿಸಿ 1835ರಲ್ಲಿ ಎಟ್ಟೆಯಾಪುರಕ್ಕೆ ಬಂದು ತಂಗಿದಾಗ ಆಶ್ವಯುಜ ಮಾಸದಲ್ಲಿ ದೀಪಾವಳಿಯ ಹಿಂದಿನ ದಿನವಾದ ಚತುರ್ದಶಿಯಂದು ಕಾಶೀ ಅನ್ನಪೂರ್ಣೆಯು ಅವರಿಗೆ ಕಂಡು ಆ ಭಗವತಿಯು ತನ್ನ ಸನಿಹ ಬರುವಂತೆ ಆಜ್ಞಾಪಿಸಿದಂತೆ ಅವರಿಗೆ ಕಂಡಿತು. ಈಗ ದೀಕ್ಷಿತರಿಗೆ ತಾವು ದೇಹವನ್ನು ಬಿಡುವ ಹೊತ್ತು ಬಂದಿತೆಂದು ನಿರ್ಧಾರವಾಗಿ ಶಿಷ್ಯರನ್ನೆಲ್ಲ ಕರೆದು ಹಾಡಲು ಹೇಳಿದರು. ಶಿಷ್ಯರು ಹಾಡುತ್ತ ಹಾಡುತ್ತ ದೀಕ್ಷಿತರ ವರಾಳಿ ರಾಗದ ಕೃತಿಯಾದ ‘ಮೀನಾಕ್ಷೀ ಮೇ ಮುದಂ’ – ಎಂಬ ಕೃತಿಯನ್ನು ಹಾಡುತ್ತ ಆ ಕೃತಿಯ ಅನುಪಲ್ಲವಿಯ “ಮೀನಲೋಚನಿ ಪಾಶಮೋಚನಿ” ಎಂಬ ಭಾಗವನ್ನು ಹಾಡುತ್ತಿರುವಾಗಲೇ ದೀಕ್ಷಿತರ ದೇಹದಿಂದ ಅವರ ಪ್ರಾಣವು ಜ್ಯೋತಿ ಸ್ವರೂಪವಾಗಿ ಹೊರಟು ಭಗವತಿಯನ್ನು ಸೇರಿತು. ಇಂದಿಗೂ ಎಟ್ಟೆಯಾಪುರದಲ್ಲಿರುವ ದೀಕ್ಷಿತರ ಸಮಾಧಿಗೆ ಹೋಗಿ ಸಂಗೀತಭಕ್ತರು ಭಕ್ತಿಯಿಂದ ಹಾಡಿ ಸೇವೆ ಸಲ್ಲಿಸಿ ಬರುತ್ತಾರೆ.

ಮುತ್ತುಸ್ವಾಮಿ ದೀಕ್ಷಿತರ ಶಿಷ್ಯರು

ತಂಜಾವೂರು ಚತುಷ್ಟಯರು ಎಂದು ಕೀರ್ತಿವಂತರಾದ ಪೊನ್ನಯ್ಯ ಪಿಳ್ಳೆ, ಚಿನ್ನಯ್ಯ, ಶಿವಾನಂದಂ ಮತ್ತು ವಡಿವೇಲು ಎಂಬ ನಾಲ್ವರೂ ಸಹೋದರರು. ಇವರುಗಳು ಭರತನಾಟ್ಯಕ್ಕೆ ಶಾಶ್ವತವಾದ, ಮಹತ್ತಾದ ಕೊಡುಗೆಯನ್ನು ನೀಡಿ ಆಚಂದ್ರಾರ್ಕವಾದ ಕೀರ್ತಿಯನ್ನು ಗಳಿಸಿದವರು. ಇವರಲ್ಲೆರೂ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ಮುದ್ದುಸ್ವಾಮಿ ದೀಕ್ಷಿತರ ಶಿಷ್ಯರಾಗಿದ್ದವರೇ. ತುಳಜಾಜಿ ಮಹಾರಾಜರೂ, ಅವರ ಅನಂತರ ಶರಭೋಜಿ ಮಹಾರಾಜರೂ ಈ ವಿದ್ವಾಂಸರಾದ ಸಹೋದರರನ್ನು ಬಹಳವಾಗಿ ಪ್ರೋತ್ಸಾಹಿಸಿದರು. ಇವರೆಲ್ಲರೂ ತ್ಯಾಗರಾಜರ ಸಮಕಾಲೀನರೂ ಹೌದು. ಈ ಸಹೋದರರಲ್ಲಿ ಪೊನ್ನಯ್ಯನವರು ತಂಜಾವೂರು ಮಾತ್ರವಲ್ಲದೆ, ತಿರುವಾಂಕೂರಿನ ಹಾಗೂ ಮೈಸೂರಿನ ಮಹಾರಾಜರುಗಳ ಆಸ್ಥಾನದಲ್ಲಿಯೂ ಆಸ್ಥಾನವಿದ್ವಾಂಸರಾಗಿದ್ದರು. ಪೊನ್ನಯ್ಯನವರು ಮೈಸೂರಿನ ಆಸ್ಥಾನದಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಭಯಂಕರವಾದ ಹೊಟ್ಟೆ ನೋವು ಬಂದು ಯಾವ ಔಷಧದಲ್ಲಿಯೂ ಕಡಿಮೆಯೇ ಆಗಲಿಲ್ಲ.. ನೋವು ಅತಿಯಾಗುತ್ತಲೇ ಹೋಗಿ ತಾವು ಬದುಕುವುದೇ ದುಸ್ತರ, ಅಸಂಭವವೆನಿಸಿ ತಮ್ಮ ಗುರುಗಳಾದ ಶ್ರೀ ಮುದ್ದುಸ್ವಾಮಿ ದೀಕ್ಷಿತರಿಗೆ ಈ ಸಂಗತಿಯನ್ನು ತಿಳಿಸಬೇಕೆಂದು ತನ್ನ ಶಿಷ್ಯನ ಮೂಲಕವಾಗಿ ಹೇಳಿಕಳುಹಿಸಿದರು. ಮುದ್ದುಸ್ವಾಮಿ ದೀಕ್ಷಿತರಿಗೆ ತನ್ನ ಪ್ರಿಯ ಶಿಷ್ಯನಿಗೆ ಬಂದ ಆಪತ್ತಿನ ವಿಷಯವು ತಿಳಿದು ಬಹಳ ದುಃಖವಾಯಿತು. ವಾಕ್ ಶುದ್ಧಿ – ಸಿದ್ಧಿಗಳಿದ್ದ ಪ್ರಗಲ್ಭ ಜ್ಯೋತಿಷಿಯೂ ಆಗಿದ್ದ ಅವರು, ಪೊನ್ನಯ್ಯನವರ ಜಾತಕವನ್ನು ತರಿಸಿ ಕೂಲಂಕಷವಾಗಿ ಪರಿಶೀಲಿಸಿ, ಪೊನ್ನಯ್ಯನವರಿಗೆ ಗ್ರಹಚಾರಗಳ ದುರ್ದೆಶೆಯಿಂದ ಹೀಗಾಗಿದೆಯೆಂದು ಅರಿತು, ಅವರಿಗಾಗಿಯೇ ನವಗ್ರಹಗಳ ಕೀರ್ತನೆಗಳನ್ನು ರಚಿಸಿ, ಬರೆದು, ಇದನ್ನು ಪ್ರತಿದಿನವೂ ಹಾಡಬೇಕೆಂದು ಪೊನ್ನಯ್ಯನವರ ಶಿಷ್ಯನ ಮೂಲಕವಾಗಿ ಪೊನ್ನಯ್ಯನವರಿಗೆ ಕೊಟ್ಟು ಕಳುಹಿಸಿದರು. ಈ ಕೃತಿಗಳು ನವಗ್ರಹಗಳೆಲ್ಲವುಗಳ ಸ್ತುತಿಗಳನ್ನೂ, ಅವುಗಳ ಜ್ಯೋತಿಷ ಲಕ್ಷಣಗಳನ್ನೂ ಒಳಗೊಂಡಿವೆ. ಸಂಸ್ಕೃತದ ಬೇರೆ ಬೇರೆ ವಿಭಕ್ತಿಗಳಲ್ಲಿಯೂ, ಸುಳಾದಿ ಸಪ್ತತಾಳಗಳಲ್ಲಿಯೂ ರಚಿಸಲ್ಪಟ್ಟ ಅದ್ಭುತ ರಚನೆಗಳಾಗಿವೆ. ಒಂದೊಂದಾಗಿ ಈ ನವಗ್ರಹಗಳ ರಚನೆಗಳನ್ನು ಹಾಡುತ್ತ ಹಾಡುತ್ತ ಪೊನ್ನಯ್ಯನವರ ಗ್ರಹಚಾರಗಳ ದುರ್ದೆಶೆಗಳೆಲ್ಲವೂ ಶಮನವಾಗಿ ಹೊಟ್ಟೆಯ ಕಾಯಿಲೆಯೂ ಸಂಪೂರ್ಣವಾಗಿ ಮಾಯವಾಯಿತು. ಬಹಳ ಶಕ್ತಿಶಾಲಿಯಾದ ಈ ಕೃತಿಗಳನ್ನು ಪ್ರತಿಯೊಬ್ಬರಿಗೂ ಹಾಡಲು ಸಾಧ್ಯವಾಗದಿದ್ದರೂ ದಿನಾ ಇವುಗಳನ್ನು ಕೇಳಿ ಖಂಡಿತ ಗ್ರಹಚಾರ ದೋಷಗಳಿಂದ ಮುಕ್ತರಾಗಬಹುದು.

(ಸಂಗ್ರಹಿಸಿ ಸಂಪಾದಿಸಿಕೊಟ್ಟವರು ವಿದುಷಿ ರೋಹಿಣಿ ಸುಬ್ಬರತ್ನಂ)